ಮೋಂಥಾ ಚಂಡಮಾರುತದ ಪ್ರಭಾವದಿಂದ ಕರ್ನಾಟಕ ರಾಜ್ಯದಾದ್ಯಂತ ಇನ್ನೂ ನಾಲ್ಕು ದಿನಗಳ ಕಾಲ ಭಾರೀ ಮಳೆಯ ಆರ್ಭಟ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಗುಡುಗು-ಮಿಂಚು ಸಹಿತ ವರುಣನ ರೌದ್ರ ನೃತ್ಯಕ್ಕೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ತಾಕೀತು.
ಮೋಂಥಾ ಚಂಡಮಾರುತದ ದಾಳಿ:
ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ಮೋಂಥಾ ಚಂಡಮಾರುತದ ಪ್ರಭಾವ ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳ ಮೇಲೆ ತೀವ್ರವಾಗಿದೆ. ಇಂದಿನಿಂದ ನವೆಂಬರ್ 2ರವರೆಗೆ ವ್ಯಾಪಕ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡಗಳಲ್ಲಿ ಭಾರೀ ಮಳೆಯ ಸಾಧ್ಯತೆ ಹೆಚ್ಚು.
ಜಿಲ್ಲಾವಾರು ಮುನ್ಸೂಚನೆ: ಯಾವೆಲ್ಲ ಕಡೆ ಗುಡುಗು-ಮಳೆ?
ಐಎಂಡಿಯ ಪ್ರಕಾರ ಏಳು ದಿನಗಳು ಜಿಲ್ಲಾವಾರು ಅಂದಾಜು ಮಳೆ:
- ಹಗುರದಿಂದ ಮಧ್ಯಮ ಮಳೆ/ಗುಡುಗು ಸಹಿತ ಮಳೆ: ಬಳ್ಳಾರಿ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ.
- ವ್ಯಾಪಕ ಮಳೆಯ ಸಾಧ್ಯತೆ: ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಗದಗ.
ಬೆಂಗಳೂರಿನಲ್ಲಿ ಸಂಜೆಯವರೆಗೂ ಮಳೆಯಾಗಿಲ್ಲ, ಆದರೆ ಮೋಡ ಕವಿದ ವಾತಾವರಣವಿದ್ದು, ಇಂದು ಯಾವುದೇ ಕ್ಷಣದಲ್ಲಿ ಮಳೆಯಾಗಬಹುದು.
ಸಾರ್ವಜನಿಕರಿಗೆ ಎಚ್ಚರಿಕೆ:
ಚಂಡಮಾರುತದ ಪರಿಣಾಮದಿಂದ ಗಾಳಿ ವೇಗ ಹೆಚ್ಚಾಗಬಹುದು, ಮರಗಳ ಕೆಳಗೆ ನಿಲ್ಲಬೇಡಿ.
ರಾಜ್ಯದ ಜನತೆ ಈ ನಾಲ್ಕು ದಿನಗಳ ಕಾಲ ಎಚ್ಚರಿಕೆಯಿಂದಿರಲಿ. ಮಳೆಯ ಸುದ್ದಿಗಾಗಿ ನಿಮ್ಮ ಸ್ಥಳೀಯ ಹವಾಮಾನ ವರದಿಯನ್ನು ಗಮನಿಸಿ.
