ಬೆಂಗಳೂರಿನಲ್ಲಿದ್ದಾರೆ ನೂರಾರು ಪಾಕ್ & ಬಾಂಗ್ಲಾ ಪ್ರಜೆಗಳು: 200ಕ್ಕೂ ಹೆಚ್ಚು ವಿದೇಶಿಗರ ಬಂಧನ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಾನೂನುಬಾಹಿರವಾಗಿ ನೆಲೆಸಿರುವ ವಿದೇಶಿಯರ ಪತ್ತೆಗೆ ರಾಜ್ಯ ಪೊಲೀಸ್ ಇಲಾಖೆ ಮತ್ತು ಗೃಹ ಸಚಿವಾಲಯ ತೀವ್ರ ಕಾರ್ಯಾಚರಣೆ ನಡೆಸುತ್ತಿದೆ.  ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆಸಿದ ದಾಳಿಯಲ್ಲಿ ಸುಮಾರು 200 ಕಾನೂನುಬಾಹಿರ ವಿದೇಶಿಗರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಹೆಚ್ಚಿನವರು ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮೂಲದವರಾಗಿದ್ದು, ಈ ಪೈಕಿ 300ಕ್ಕೂ ಹೆಚ್ಚು ಮಂದಿಯನ್ನು ದೇಶದಿಂದ ಗಡಿಪಾರು ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ರಾಷ್ಟ್ರೀಯ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಗೃಹ ಇಲಾಖೆ ವಿಶೇಷ ತಂಡಗಳನ್ನು ರಚಿಸಿ ಪರಿಶೀಲನೆ ನಡೆಸುತ್ತಿದೆ. ವೀಸಾ ಅವಧಿ ಮುಗಿದರೂ ದೇಶವನ್ನು ತೊರೆಯದೆ ಉಳಿದಿರುವವರು, ನಕಲಿ ದಾಖಲೆಗಳ ಮೂಲಕ ನೆಲೆಸಿರುವವರು ಹಾಗೂ ಅಕ್ರಮವಾಗಿ ಉದ್ಯೋಗ ಮಾಡುತ್ತಿರುವವರನ್ನು ಗುರುತಿಸಲು ಪೊಲೀಸರು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ದಾಳಿ ನಡೆಸಿದ್ದಾರೆ.

ಈ ಕಾರ್ಯಾಚರಣೆಯ ವೇಳೆ ಹಲವಾರು ವಿದೇಶಿಗರು ತಮ್ಮ ಬಳಿ ಮಾನ್ಯ ದಾಖಲೆಗಳನ್ನು ಹೊಂದಿರಲಿಲ್ಲ ಎಂಬುದು ಬಹಿರಂಗವಾಗಿದೆ. ಕೆಲವರು ಪ್ರವಾಸಿ ವೀಸಾದ ಮೂಲಕ ಭಾರತಕ್ಕೆ ಬಂದು ನಂತರ ಅವಧಿ ಮುಗಿದರೂ ದೇಶವನ್ನು ತೊರೆಯದೆ ಇಲ್ಲಿ ವಾಸವಾಗಿದ್ದರೆಂಬ ಆರೋಪವೂ ಕೇಳಿಬಂದಿದೆ. ಮತ್ತೊಂದೆಡೆ ಕೆಲವು ವಿದೇಶಿಗರು ಸ್ಥಳೀಯರ ಸಹಾಯದಿಂದ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೆಂಬ ಮಾಹಿತಿಯೂ ಪೊಲೀಸರಿಗೆ ದೊರೆತಿದೆ.

ಬಂಧಿಸಲಾದ ವಿದೇಶಿಗರನ್ನು ಮೊದಲಿಗೆ ವಿಚಾರಣೆ ನಡೆಸಿ ಅವರ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಸರಿಯಾದ ದಾಖಲೆಗಳಿಲ್ಲದವರು ಹಾಗೂ ವೀಸಾ ನಿಯಮ ಉಲ್ಲಂಘನೆ ಮಾಡಿದವರನ್ನು ಕಾನೂನು ಪ್ರಕಾರ ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಸುಮಾರು 300ಕ್ಕೂ ಹೆಚ್ಚು ವಿದೇಶಿಗರನ್ನು ತಮ್ಮ ಮೂಲ ದೇಶಗಳಿಗೆ ಗಡಿಪಾರು ಮಾಡುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿಸಲಾಗಿರುವ ವಿದೇಶಿಗರನ್ನು ತಾತ್ಕಾಲಿಕವಾಗಿ ಇರಿಸಲು ಬೆಂಗಳೂರು ಸಮೀಪದ ನೆಲಮಂಗಲದಲ್ಲಿ ವಿಶೇಷ ಡಿಟೆಂಷನ್ ಕೇಂದ್ರವನ್ನು ವ್ಯವಸ್ಥೆ ಮಾಡಲಾಗಿದೆ. ಗಡಿಪಾರು ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಅವರನ್ನು ಇಲ್ಲಿ ಸುರಕ್ಷಿತವಾಗಿ ಇರಿಸಲಾಗುತ್ತದೆ. ಇಲ್ಲಿ ವಿದೇಶಿಗರಿಗೆ ಮೂಲಭೂತ ಸೌಲಭ್ಯಗಳಾದ ವಸತಿ, ಆಹಾರ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಲ್ಲದೆ ಮಹಿಳಾ ವಿದೇಶಿಗರಿಗಾಗಿ ತುಮಕೂರಿನಲ್ಲಿ ವಿಶೇಷ ಡಿಟೆಂಷನ್ ಕೇಂದ್ರವನ್ನು ಕೂಡ ಸಿದ್ಧಪಡಿಸಲಾಗಿದೆ. ಮಹಿಳಾ ಬಂಧಿತರ ಸುರಕ್ಷತೆ ಹಾಗೂ ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಗೃಹ ಇಲಾಖೆಯ ಅಧಿಕಾರಿಗಳ ಪ್ರಕಾರ, ಮಾನ್ಯ ದಾಖಲೆಗಳೊಂದಿಗೆ ಭಾರತದಲ್ಲಿ ವಾಸಿಸುವ ವಿದೇಶಿಗರ ಮೇಲೂ ನಿಯಮಿತ ನಿಗಾವಹಿಸಲಾಗುತ್ತಿದೆ. ವೀಸಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ. ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ಕೂಡ ಕಟ್ಟುನಿಟ್ಟಿನ ಗಮನ ಹರಿಸಲಾಗುತ್ತಿದೆ.

ರಾಜ್ಯದಲ್ಲಿ ಅಕ್ರಮ ವಲಸೆಯನ್ನು ತಡೆಯಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಪೊಲೀಸ್ ಇಲಾಖೆ ಮತ್ತು ವಿದೇಶಿ ನಾಗರಿಕರ ನೋಂದಣಿ ಕಚೇರಿ (FRRO) ಸಹಕಾರದೊಂದಿಗೆ ಕಾರ್ಯಾಚರಣೆ ಮುಂದುವರಿಸುತ್ತಿದೆ.

Exit mobile version