ಯುವ ಈಜುಪಟುಗಳ ಸಾಧನೆಗೆ ಡಾ. ವಿ.ಎಸ್.ವಿ ಪ್ರಸಾದ್ ಮೆಚ್ಚುಗೆ: ಪ್ರತಿಭೆಗಳಿಗೆ ನೆರವಿನ ಭರವಸೆ

Your paragraph text 2026 11 25T164015.286

ಹುಬ್ಬಳ್ಳಿ: ಹುಬ್ಬಳ್ಳಿಯ ಯುವ ಈಜುಪಟುಗಳು ಗೋವಾದಲ್ಲಿ ಸಾಧನೆ ಮಾಡುವ ಮೂಲಕ ನಗರಕ್ಕೆ ಕೀರ್ತಿ ತಂದಿದ್ದಾರೆ. ಇಂತಹ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಹಾಗೂ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಖ್ಯಾತ ಉದ್ಯಮಿ ಡಾ. ಚ.ವಿ.ಎಸ್.ವಿ. ಪ್ರಸಾದ್ ಹೇಳಿದರು.

ನಗರದಲ್ಲಿ ಎಂ.ಆರ್. ಅಕಾಡೆಮಿ ಹಾಗೂ ನವೀನ್ ಪಾರ್ಕ್ ನಿವಾಸಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಗೋವಾದ ಬಂಬೋಲಿಮ್ ಬೀಚ್‌ನಲ್ಲಿ ನ.14ರಂದು ನಡೆದ ಆಕ್ವಾ ಮೊಗಾ ಓಪನ್ ವಾಟರ್ ಈಜು ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಯುವ ಈಜುಪಟುಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಕ್ಕಳು ತಮ್ಮ ಪರಿಶ್ರಮ, ಶಿಸ್ತು ಮತ್ತು ಕ್ರೀಡಾಸಕ್ತಿಯಿಂದ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಹುಬ್ಬಳ್ಳಿಯ ಮಕ್ಕಳ ಈ ಸಾಧನೆ ಇಡೀ ನಗರ ಹೆಮ್ಮೆಪಡುವಂತಹದ್ದು. ಕ್ರೀಡೆಯಲ್ಲಿ ಮಕ್ಕಳನ್ನು ಬೆಳೆಸುವಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅವರ ನಿರಂತರ ಪ್ರೋತ್ಸಾಹ ಮತ್ತು ತ್ಯಾಗವನ್ನು ಮರೆಯುವಂತಿಲ್ಲ ಎಂದರು.

ಯುವ ಪ್ರತಿಭೆಗಳಿಗೆ ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ಅವಕಾಶಗಳು ದೊರೆಯಬೇಕು. ಅವರ ಪ್ರತಿಭೆ ಪ್ರದರ್ಶಿಸಲು ಅಗತ್ಯವಾದ ನೆರವು ಮತ್ತು ಮಾರ್ಗದರ್ಶನ ನೀಡಲು ತಾವು ಸಂತೋಷದಿಂದ ಸಿದ್ಧರಿರುವುದಾಗಿ ಡಾ. ಪ್ರಸಾದ್ ಭರವಸೆ ನೀಡಿದರು.

ಗೋವಾದಲ್ಲಿ ನಡೆದ 1 ಕಿ.ಮೀ. ಈಜು ಸ್ಪರ್ಧೆಯಲ್ಲಿ ಆಯ್ರಾ ನಾಗತಾಣ ಪ್ರಥಮ ಸ್ಥಾನ ಪಡೆದು, 19 ನಿಮಿಷಗಳಲ್ಲಿ ಗುರಿ ತಲುಪುವ ಮೂಲಕ ವೇಗದ ಮಹಿಳಾ ಈಜುಪಟು ಎಂಬ ಗೌರವ ಗಳಿಸಿದ್ದಾರೆ. ಜೇಡನ್ ಆರ್. ದ್ವಿತೀಯ, ಎಂ. ಶಿವರಾಮ ಪ್ರಸಾದ್ ತೃತೀಯ ಹಾಗೂ ಓಂಕಾರ ಹಬೀಬ್ ಪ್ರಥಮ ಸ್ಥಾನ ಪಡೆದಿದ್ದಾರೆ. ಅನ್ಮೋಲ್ ಪಾಟೀಲ, ಪರಶುರಾಮ ಬೀಳಗಿ 1 ಕಿ.ಮೀ. ಹಾಗೂ ರೆವಿಲಾ ನಾಗತಾಣ, ಎಂ. ಸಂಯುಕ್ತಾ ಮತ್ತು ಅರ್ಡಾಸ್ ಪುಪ್ನೇಜಾ 250 ಮೀಟರ್ ಈಜು ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಎಂ.ಆರ್. ಅಕಾಡೆಮಿ ಹಾಗೂ ನವೀನ್ ಪಾರ್ಕ್ ನಿವಾಸಿಗಳ ಸಂಘದ ವತಿಯಿಂದ ಎಲ್ಲ ಸಾಧಕ ಈಜುಪಟುಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಪೋಷಕರು, ತರಬೇತುದಾರರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version