ಕರ್ನಾಟಕದಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಇತರೆ ಆಹಾರ ಸಂಸ್ಥೆಗಳಲ್ಲಿ ಕೃತಕವಾಗಿ ತಯಾರಿಸಲ್ಪಡುವ `ಕೃತಕ ಪನ್ನೀರ್’ ಬಳಕೆಯನ್ನು ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ಕ್ರಮವು ಗ್ರಾಹಕರಿಗೆ ಶುದ್ಧ ಮತ್ತು ಸುರಕ್ಷಿತ ಆಹಾರ ಒದಗಿಸುವ ಉದ್ದೇಶದಿಂದ ಕೈಗೊಳ್ಳಲಾಗಿದೆ.
ಇತ್ತೀಚಿನ ದಿನಗಳಲ್ಲಿ ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ ಕೆಲವು ವ್ಯಾಪಾರಿಗಳು ಮತ್ತು ಆಹಾರ ಸಂಸ್ಥೆಗಳು ವೆಚ್ಚ ಕಡಿಮೆ ಮಾಡಲು ಹಾಗೂ ಹೆಚ್ಚು ಲಾಭ ಗಳಿಸಲು ಕೃತಕ ಪನ್ನೀರ್ ಬಳಕೆಯತ್ತ ಮುಖ ಮಾಡಿರುವುದು ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅನಲಾಗ್ ಪನ್ನೀರ್‌ನ್ನು ಹಾಲಿನ ಬದಲು ಸಸ್ಯಜನ್ಯ ಎಣ್ಣೆ, ಪಿಷ್ಟ, ಸ್ಟಾರ್ಚ್ ಮತ್ತು ವಿವಿಧ ರಾಸಾಯನಿಕ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಇದು ನೋಡಲು ಹಾಗೂ ರುಚಿಗೆ ಸಾಮಾನ್ಯ ಪನ್ನೀರ್‌ನಂತೆ ಕಂಡರೂ, ಪೌಷ್ಟಿಕಾಂಶ ಮತ್ತು ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿಯಾಗಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಸಾಮಾನ್ಯ ಪನ್ನೀರ್ ಸಂಪೂರ್ಣವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ತಯಾರಾಗುತ್ತದೆ. ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಹಾಗೂ ದೇಹಕ್ಕೆ ಅಗತ್ಯವಾದ ಹಲವು ಪೋಷಕಾಂಶಗಳು ಲಭ್ಯವಿರುತ್ತವೆ. ಆದರೆ ಕೃತಕ ಪನ್ನೀರ್‌ನಲ್ಲಿ ಬಳಸುವ ಅಗ್ಗದ ಗುಣಮಟ್ಟದ ಕೊಬ್ಬಿನಾಂಶ ಮತ್ತು ರಾಸಾಯನಿಕ ಪದಾರ್ಥಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುವ ಸಾಧ್ಯತೆ ಹೆಚ್ಚಿದೆ. ದೀರ್ಘಾವಧಿಯಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು, ಜೀರ್ಣಕ್ರಿಯೆಯ ತೊಂದರೆಗಳು ಮತ್ತು ಇತರೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಗ್ರಾಹಕರು ಸಹ ಪನ್ನೀರ್ ಖರೀದಿಸುವಾಗ ಅಥವಾ ಹೋಟೆಲ್‌ಗಳಲ್ಲಿ ಆಹಾರ ಸೇವಿಸುವಾಗ ಎಚ್ಚರಿಕೆ ವಹಿಸುವಂತೆ ಇಲಾಖೆ ಮನವಿ ಮಾಡಿದೆ. ಪನ್ನೀರ್‌ನ ಗುಣಮಟ್ಟದ ಬಗ್ಗೆ ಅನುಮಾನ ಕಂಡುಬಂದರೆ ಆಹಾರ ಸುರಕ್ಷತಾ ಇಲಾಖೆಯ ಸಹಾಯವಾಣಿ ಅಥವಾ ಸಂಬಂಧಿತ ಅಧಿಕಾರಿಗಳಿಗೆ ದೂರು ನೀಡಬಹುದು. ಸಾರ್ವಜನಿಕರ ಆರೋಗ್ಯ ರಕ್ಷಣೆ ಮತ್ತು ಆಹಾರದ ಗುಣಮಟ್ಟವನ್ನು ಖಚಿತಪಡಿಸುವ ನಿಟ್ಟಿನಲ್ಲಿ ಈ ಕ್ರಮ ಮಹತ್ವದ ಹೆಜ್ಜೆಯಾಗಿದೆ.
ಪನ್ನೀರ್ ಖರೀದಿಸುವ ಗ್ರಾಹಕರು ಪ್ಯಾಕೆಟ್‌ನ ಲೇಬಲ್, ಉತ್ಪನ್ನದ ವಿವರ ಹಾಗೂ ತಯಾರಕರ ಮಾಹಿತಿಯನ್ನು ಪರಿಶೀಲಿಸುವುದು ಮುಖ್ಯ. ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಕಾರಣಕ್ಕೆ ಅನುಮಾನಾಸ್ಪದ ಉತ್ಪನ್ನಗಳನ್ನು ಖರೀದಿಸುವ ಬದಲು, ಮಾನ್ಯತೆ ಹೊಂದಿರುವ ಮೂಲಗಳಿಂದ ಪನ್ನೀರ್ ಖರೀದಿಸುವುದು ಉತ್ತಮ.