HIV ಇದೆಯೆಂದು ತಮ್ಮನನ್ನೇ ಕೊಂದ ಅಕ್ಕ-ಭಾವ..!

Untitled design 2025 07 27t140658.406

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದಲ್ಲಿ ಒಂದು ಘೋರ ಘಟನೆ ನಡೆದಿದೆ. HIV ರೋಗಿಯಾದ ತಮ್ಮನನ್ನು ಮರ್ಯಾದೆಗೆ ಅಂಜಿ ಅಕ್ಕ ಮತ್ತು ಅಳಿಯ ಕೊಂದಿರುವುದು ತನಿಖೆಯಲ್ಲಿ ಬಂದಿದೆ. 23 ವರ್ಷದ ಯುವಕ ಮಲ್ಲಿಕಾರ್ಜುನ್ ಎಂಬಾತನನ್ನು ಅವನ ಸ್ವಂತ ಅಕ್ಕ ನಿಶಾ ಮತ್ತು ಭಾವ ಮಂಜುನಾಥ್ ಎಂಬುವವರು ಕೊಲೆ ಮಾಡಿದ್ದಾರೆ.

ಮಲ್ಲಿಕಾರ್ಜುನ್ ಅಪಘಾತವೊಂದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ. ಆತನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆಪರೇಷನ್ ಸಂದರ್ಭದಲ್ಲಿ ಆತನಿಗೆ HIV ಸೋಂಕು ಇದೆ ಎಂದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಈ ಸಂಗತಿಯನ್ನು ತಿಳಿದ ಅಕ್ಕ ನಿಶಾ ಮತ್ತು ಭಾವ ಮಂಜುನಾಥ್, ತಮ್ಮ ಕುಟುಂಬದ ಮರ್ಯಾದೆಗೆ ಧಕ್ಕೆ ಬರುತ್ತದೆ ಎಂಬ ಭಯದಿಂದ ಕೊಲೆ ಮಾಡಲು ಮುಂದಾದರು. ಆಂಬುಲೆನ್ಸ್‌ನಲ್ಲಿ ಮಲ್ಲಿಕಾರ್ಜುನ್‌ನನ್ನು ಮಣಿಪಾಲ್ ಆಸ್ಪತ್ರೆಗೆ ಸಾಗಿಸುವಾಗ, ದಾರಿಯಲ್ಲೇ ಆತನ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಈ ಕೃತ್ಯವು ಮೊದಲೇ ಪ್ಲಾನ್‌ ಆಗಿತ್ತು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಕೊಲೆಯಾದ ಮಲ್ಲಿಕಾರ್ಜುನ್‌ನ ಮೃತದೇಹವನ್ನು ದುಮ್ಮಿ ಗ್ರಾಮಕ್ಕೆ ತಂದಾಗ, ಗ್ರಾಮಸ್ಥರು ಈ ಘಟನೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದರು. ಗ್ರಾಮದ ಜನರಿಂದ ಮಾಹಿತಿ ಪಡೆದ ಪೊಲೀಸರು, ತನಿಖೆಯನ್ನು ಆರಂಭಿಸಿದರು. ಮೃತನ ತಂದೆ ನಾಗರಾಜ್, ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪೊಲೀಸರ ವಿಚಾರಣೆಯಲ್ಲಿ ಈ ಆಘಾತಕಾರಿ ಕೊಲೆಯ ರಹಸ್ಯ ಬಯಲಾಯಿತು. ಆರೋಪಿಗಳಾದ ನಿಶಾ ಮತ್ತು ಮಂಜುನಾಥ್‌ರನ್ನು ಪೊಲೀಸರು ಬಂಧಿಸಿದ್ದಾರೆ.

Exit mobile version