ಬೆಂಗಳೂರು: ಕೋವಿಡ್ ಸಾಂಕ್ರಾಮಿಕದ ವೇಳೆ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿ ಮೃತಪಟ್ಟ ಸಾರಿಗೆ ಸಿಬ್ಬಂದಿಯ ಕುಟುಂಬಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲದಿರುವುದು ದುರದೃಷ್ಟಕರ. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಕರ್ನಾಟಕ ಹೈಕೋರ್ಟ್, ಪರಿಹಾರ ನೀಡಲು ಹಣವಿಲ್ಲ ಎಂಬ ಸಾರಿಗೆ ನಿಗಮಗಳ ವಾದವನ್ನು ಖಂಡಿಸಿದೆ. ಅಷ್ಟೇ ಅಲ್ಲದೆ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆಯಡಿ ನಿಗಮಗಳಿಗೆ ಬರಬೇಕಾದ ಬಾಕಿ ಹಣದ ವಿವರಗಳನ್ನು ನೀಡುವಂತೆ ಖಡಕ್ ಸೂಚನೆ ನೀಡಿದೆ.
ಪ್ರಕರಣದ ಹಿನ್ನೆಲೆ
ದಾವಣಗೆರೆಯ ತಾಹೀರ್ ಹುಸೇನ್ ಮತ್ತು ರಾಯಚೂರಿನ ಅಜೀಜ್ ಪಾಷಾ ಜಾಗೀರದಾರ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ವಿಚಾರಣೆ ನಡೆಯುತ್ತಿದೆ. ಕೋವಿಡ್ ಸಮಯದಲ್ಲಿ ಮೃತಪಟ್ಟ ನಾಲ್ಕು ಸಾರಿಗೆ ನಿಗಮಗಳ (KSRTC, BMTC, NWKRTC, KKRTC) ನೌಕರರ ಕುಟುಂಬಗಳಿಗೆ ತಲಾ 30 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ.
ವಿಚಾರಣೆ ವೇಳೆ ಸಾರಿಗೆ ನಿಗಮಗಳ ಪರ ವಕೀಲರು, ನಿಗಮಗಳು ಪ್ರಸ್ತುತ ತೀವ್ರ ಆರ್ಥಿಕ ನಷ್ಟದಲ್ಲಿವೆ. ನೌಕರರಿಗೆ ತಿಂಗಳ ವೇತನ ನೀಡುವುದೇ ಸವಾಲಾಗಿದೆ. ಅಂದು ಸರ್ಕಾರ ನೀಡಿದ ಅನುದಾನದಿಂದ ವೇತನ ನೀಡಲಾಗಿತ್ತು. ಈಗ ಮೃತರ ಕುಟುಂಬಗಳಿಗೆ ಪರಿಹಾರ ನೀಡಲು ನಮ್ಮ ಬಳಿ ಯಾವುದೇ ಆರ್ಥಿಕ ಸಂಪನ್ಮೂಲಗಳಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಸರ್ಕಾರದ ಆದೇಶವಿದ್ದರೂ ಸಂಪನ್ಮೂಲದ ಕೊರತೆಯಿಂದ ಪರಿಹಾರ ಜಾರಿಗೊಳಿಸದಿರಲು ನಿರ್ಧರಿಸಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.
ಹೈಕೋರ್ಟ್ ಚಾಟಿ
ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ನೇತೃತ್ವದ ವಿಭಾಗೀಯ ಪೀಠವು ಈ ವಾದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತು. ಸಂಪನ್ಮೂಲ ಇಲ್ಲ ಎಂದು ಹೇಳುತ್ತಿದ್ದೀರಿ, ಆದರೆ ಶಕ್ತಿ ಯೋಜನೆಯಡಿ ಲಕ್ಷಾಂತರ ಮಹಿಳೆಯರಿಗೆ ಉಚಿತ ಸೇವೆ ನೀಡುತ್ತಿದ್ದೀರಿ. ಉಚಿತ ಟಿಕೆಟ್ ನೀಡಿದ ಮೇಲೆ ಸರ್ಕಾರ ನಿಮಗೆ ಹಣ ಮರುಪಾವತಿಸಬೇಕಲ್ಲವೇ ? ಆ ಯೋಜನೆ ಹೇಗೆ ನಡೆಯುತ್ತಿದೆ ? ಸರ್ಕಾರ ಈವರೆಗೆ ಎಷ್ಟು ಹಣ ಬಿಡುಗಡೆ ಮಾಡಿದೆ ಮತ್ತು ಎಷ್ಟು ಹಣ ಬಾಕಿ ಉಳಿಸಿಕೊಂಡಿದೆ ? ಎಂದು ಸಾಲು ಸಾಲು ಪ್ರಶ್ನೆಗಳನ್ನು ಹಾಕಿತು.
ಸಾರಿಗೆ ನಿಗಮಗಳಿಗೆ ಸರ್ಕಾರ ನೀಡಬೇಕಾದ ಶಕ್ತಿ ಯೋಜನೆಯ ಬಾಕಿ ಹಣವು ನಿಗಮದ ಸಂಪನ್ಮೂಲವೇ ಆಗಿದೆ. ಆ ಹಣವನ್ನು ಬಳಸಿ ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಏಕೆ ಪರಿಹಾರ ನೀಡಬಾರದು ಎಂದು ಪೀಠವು ಪ್ರಶ್ನಿಸಿತು.
ನ್ಯಾಯಾಲಯದ ನಿರ್ದೇಶನ
ಅಂತಿಮವಾಗಿ ಹೈಕೋರ್ಟ್ ಈ ಕೆಳಗಿನ ಮಾಹಿತಿಯನ್ನು ಸಲ್ಲಿಸಲು ಸಾರಿಗೆ ನಿಗಮಗಳಿಗೆ ಆದೇಶಿಸಿದೆ:
-
ಶಕ್ತಿ ಯೋಜನೆಯಡಿ ಸರ್ಕಾರದಿಂದ ನಿಗಮಗಳಿಗೆ ಬರಬೇಕಾದ ಒಟ್ಟು ಬಾಕಿ ಮೊತ್ತದ ವಿವರ.
-
ಕೋವಿಡ್ ವೇಳೆ ಮೃತಪಟ್ಟ ಸರ್ಕಾರಿ ನೌಕರರಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರ ರೂಪಿಸಿರುವ ಯೋಜನೆಗಳ ದಾಖಲೆ.
ಈ ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಮಾರ್ಚ್ 23ಕ್ಕೆ ಮುಂದೂಡಿದೆ.
