ಯುೂಟರ್ನ್ ಹೊಡೆದ ಬಸವರಾಜ ರಾಯರೆಡ್ಡಿಗೆ ಟಾಂಗ್ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

Untitled design 2025 04 10t210752.369

ಬೆಂಗಳೂರು: ರಾಜ್ಯವು ಭ್ರಷ್ಟಾಚಾರದಲ್ಲಿ ದೇಶದಲ್ಲಿಯೇ ನಂಬರ್ ಒನ್ ಆಗಿದೆ ಎಂದು ಹೇಳಿದ್ದ ಬಸವರಾಜ ರಾಯರೆಡ್ಡಿ ಯುೂ ಟರ್ನ್ ಹೊಡೆದಿರುವ ಬಗ್ಗೆ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.

ಅಲ್ಲದೆ, ಮುಖ್ಯಮಂತ್ರಿ ಗುಣಗಾನ ಮಾಡಿರುವ ಅವರಿಗೆ ಟಾಂಗ್ ಕೊಟ್ಟಿರುವ ಸಚಿವರು; ಸರಣಿ ಹಗರಣಗಳ ಸಿದ್ವಿಲಾಸಿ ಸಿಎಂ ಬಗ್ಗೆ ನಿಮಗೆ ಗೊತ್ತಿಲ್ಲವೇ ಎಂದು ಕಾಲೆಳೆದಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು; ಘನತವೇತ್ತ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಯೂ ಟರ್ನ್ ಹೊಡೆಯುವ ಅಗತ್ಯವೇ ಇಲ್ಲ. ಅವರು ಸತ್ಯವನ್ನೇ ನುಡಿದಿದ್ದಾರೆ! ಮಹಾತ್ಮ ಗಾಂಧೀಜಿ ಅವರ ಸತ್ಯಮೇವ ಜಯತೇ ಘೋಷ ವಾಕ್ಯವನ್ನು ಕಾಂಗ್ರೆಸ್ ನಾಯಕರು ಅದೆಷ್ಟು ಶ್ರದ್ಧಾಭಕ್ತಿಯಿಂದ ಪರಿಪಾಲನೆ ಮಾಡುತ್ತಿದ್ದಾರೆ (!?) ಎಂಬುದಕ್ಕೆ ರಾಯರೆಡ್ಡಿ ಅವರ ಹೇಳಿಕೆಯೇ ಸಾಕ್ಷಿ ಎಂದು ಹೇಳಿದ್ದಾರೆ.

ಗುತ್ತಿಗೆಯಲ್ಲಿ ಪರ್ಸಂಟೇಜ್, ಕಮಿಷನ್ ದಂಧೆ ಆರಂಭಿಸಿದ್ದು ಅನ್ಯಪಕ್ಷಗಳ ಸರಕಾರಗಳೇ ಹೊರತು ಜೆಡಿಎಸ್ ಸರಕಾರವಲ್ಲ. ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಗುತ್ತಿಗೆದಾರರಿಗೆ ನಿಯಮಿತವಾಗಿ ಹಣ ಪಾವತಿ ಆಗುತ್ತಿತ್ತು, ವಿಳಂಬ ಎನ್ನುವ ಪ್ರಶ್ನೆಯೇ ಇರಲಿಲ್ಲ. ನನ್ನ ಆಡಳಿತದಲ್ಲಿ ಕಮಿಷನ್ ದಂಧೆ ವಿಧಾನಸೌಧದ ಮೆಟ್ಟಿಲು ಮುಟ್ಟಲು ಬಿಟ್ಟಿರಲಿಲ್ಲ. ಸೋ ಕಾಲ್ಡ್ ಸತ್ಯಸಂಧರಾದ ಕಾಂಗ್ರೆಸ್ಸಿಗರು ಅರ್ಥ ಮಾಡಿಕೊಳ್ಳಬೇಕು ಎಂದು ಜೆಡಿಎಸ್ ಬಗ್ಗೆ ಹೇಳಿಕೆ ನೀಡಿದ್ದ ರಾಯರೆಡ್ಡಿ ಅವರಿಗೆ ತಿರುಗೇಟು ನೋಡಿದ್ದಾರೆ ಕೇಂದ್ರ ಸಚಿವರು.

ಭ್ರಷ್ಟಾಚಾರದ ವಿರುದ್ಧ ಸಿದ್ದರಾಮಯ್ಯ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ರಾಯರೆಡ್ಡಿ ಹೇಳಿದ್ದಾರೆ! ಪಾಪ.. ಅವರು ಏಕಿಷ್ಟು ಹೆದರಿದರು ಎನ್ನುವುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಅಧಿಕಾರ ಮತ್ತು ಆಸರೆ ನಾಲಿಗೆಯ ಶಕ್ತಿಯನ್ನು ಕುಂದಿಸುತ್ತವೆ ಎಂದು ರಾಯರೆಡ್ಡಿ ಅವರ ಅಸಹಾಯಕತೆ ಬಗ್ಗೆ ಕುಮಾರಸ್ವಾಮಿ ಅವರು ಲೇವಡಿ ಮಾಡಿದ್ದಾರೆ.

ಸಿಎಂ ಸಾಹೇಬರ ಸರಣಿ ಹಗರಣಗಳ ಸಿದ್ವಿಲಾಸದ ಬಗ್ಗೆ ಅರಿಯದಷ್ಟು ಮುಗ್ಧರೇ ರಾಯರೆಡ್ಡಿ!! ಕರ್ನಾಟಕವನ್ನು ಕೊಳ್ಳೆ ಹೊಡೆಯುತ್ತಿರುವ ಕಾಂಗ್ರೆಸ್ ಈಸ್ಟ್ ಇಂಡಿಯಾ ಕಂಪನಿ ಸರಕಾರದ ಭಾಗವಾಗಿರುವ ಅವರಿಗೆ ಜೆಡಿಎಸ್ ಕುರಿತು ಟೀಕಿಸುವ ನೈತಿಕತೆ ಎಲ್ಲಿದೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version