ಮಲ್ಲೇಶ್ವರ ಗುಡ್ಡಕ್ಕೆ ಬೆಂಕಿಯಿಟ್ಟ ಕಿಡಿಗೇಡಿಗಳು: ಸುಟ್ಟು ಭಸ್ಮವಾದ ಅಪರೂಪದ ಗಿಡಮೂಲಿಕೆಗಳು

Untitled design 2026 03 22T071254.853

ಹಾವೇರಿ: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಪ್ರಮುಖ ಐತಿಹಾಸಿಕ ಮತ್ತು ಪರಿಸರ ತಾಣವಾದ ಮಲ್ಲೇಶ್ವರ ಗುಡ್ಡಕ್ಕೆ ಕಿಡಿಗೇಡಿಗಳು ಬೆಂಕಿಯಿಟ್ಟಿದ್ದು, ಅರಣ್ಯ ಪ್ರದೇಶದ ಬಹುಪಾಲು ಭಾಗ ಭಸ್ಮವಾಗಿದೆ. ಆರೇಮಲ್ಲಾಪುರ ಮತ್ತು ಐರಣಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ಈ ಗುಡ್ಡದಲ್ಲಿ ಕಳೆದ ನಾಲ್ಕು ಗಂಟೆಗಳಿಂದ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ನೈಸರ್ಗಿಕ ಸಂಪತ್ತು ನಾಶವಾಗಿದೆ.

ಮಲ್ಲೇಶ್ವರ ಗುಡ್ಡವು ಕೇವಲ ಒಂದು ಅರಣ್ಯ ಪ್ರದೇಶವಲ್ಲ, ಇದು ಅಪರೂಪದ ವನಸ್ಪತಿ ಮತ್ತು ಗಿಡಮೂಲಿಕೆಗಲಿಂದ ಕೂಡಿದೆ. ಈ ಭಾಗದಲ್ಲಿರುವ ನೂರಾರು ವರ್ಷಗಳ ಹಳೆಯ ಮರಗಳು ಹಾಗೂ ವೈವಿಧ್ಯಮಯ ಔಷಧೀಯ ಸಸ್ಯಗಳು ಬೆಂಕಿಯ ಜ್ವಾಲೆಗೆ ಸಿಲುಕಿ ಸುಟ್ಟು ಕರಕಲಾಗಿವೆ. ನಾಲ್ಕು ಗಂಟೆಗಳ ಕಾಲ ಸತತವಾಗಿ ಉರಿದ ಬೆಂಕಿಯಿಂದಾಗಿ ಇಡೀ ಗುಡ್ಡ ಪ್ರದೇಶ ದಟ್ಟವಾದ ಹೊಗೆಯಿಂದ ಆವೃತವಾಗಿತ್ತು.

ಈ ಮಲ್ಲೇಶ್ವರ ಅರಣ್ಯ ಪ್ರದೇಶವು ಪ್ರಸಿದ್ಧ ಕೃಷ್ಣಮೃಗ ಅಭಯಾರಣ್ಯದ ಭಾಗವಾಗಿದ್ದು, ಇಲ್ಲಿ ನೂರಾರು ಕೃಷ್ಣಮೃಗಗಳು, ಪ್ರಾಣಿ-ಪಕ್ಷಿಗಳು ವಾಸಿಸುತ್ತಿವೆ. ಕಿಡಿಗೇಡಿಗಳ ಈ ಕೃತ್ಯದಿಂದಾಗಿ ವನ್ಯಜೀವಿಗಳು ಜೀವಭಯದಿಂದ ದಿಕ್ಕಾಪಾಲಾಗಿ ಓಡಿವೆ. ಕೆಲವು ಪ್ರಾಣಿಗಳು ಬೆಂಕಿಯ ಜ್ವಾಲೆಗೆ ಸಿಲುಕಿ ಗಾಯಗೊಂಡಿರುವ ಸಾಧ್ಯತೆಯೂ ಇದೆ. ಈ ಭಾಗವು ಪ್ರಾಣಿಗಳಿಗೆ ಆಶ್ರಯ ತಾಣವಾಗಿದ್ದು, ಈಗ ಅವುಗಳ ವಾಸಸ್ಥಾನವೇ ಬೆಂಕಿಗೆ ಆಹುತಿಯಾಗಿರುವುದು ಪರಿಸರ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.

ವಿಶೇಷವೆಂದರೆ, ಈ ಐತಿಹಾಸಿಕ ಮಲ್ಲೇಶ್ವರ ಗುಡ್ಡವನ್ನು ರಾಜ್ಯ ಸರ್ಕಾರವು ಇತ್ತೀಚೆಗಷ್ಟೇ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಆಯ್ಕೆ ಮಾಡಿತ್ತು. ಇಲ್ಲಿನ ನೈಸರ್ಗಿಕ ಸೌಂದರ್ಯವನ್ನು ಕಾಪಾಡಿ ಪ್ರವಾಸಿಗರನ್ನು ಸೆಳೆಯಲು ಯೋಜನೆಗಳನ್ನು ರೂಪಿಸಲಾಗುತ್ತಿತ್ತು. ಆದರೆ, ಅಭಿವೃದ್ಧಿ ಕಾರ್ಯಗಳು ಆರಂಭವಾಗುವ ಮುನ್ನವೇ ಕಿಡಿಗೇಡಿಗಳು ಇಡೀ ಅರಣ್ಯಕ್ಕೆ ಬೆಂಕಿಯಿಟ್ಟಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಕಡಿದಾದ ಗುಡ್ಡ ಪ್ರದೇಶವಾದ್ದರಿಂದ ಬೆಂಕಿ ನಂದಿಸುವ ಕಾರ್ಯ ಸವಾಲಾಗಿತ್ತು. ಆದರೂ ಸಿಬ್ಬಂದಿಗಳು ಸತತ ಪರಿಶ್ರಮದಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಪಟ್ಟು ಯಶಸ್ವಿಯಾಗಿದ್ದಾರೆ. ಈ ಘಟನೆಯು ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಿಡಿಗೇಡಿಗಳ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.

Exit mobile version