ಹಾವೇರಿ (ಫೆ.19): ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ (Rattihalli Taluk) ಹಿರೇ ಯಡಚಿ (Hire Yadachi) ಮತ್ತು ಕ್ಯಾತನಕೇರಿ (Kyatanakeri) ಗ್ರಾಮಗಳ ನಡುವೆ ಗುರುವಾರ ಭೀಕರ ಸಂಘರ್ಷ ನಡೆದಿದೆ. ಗುಡ್ಡದ ದುರಗಮ್ಮ (Guddada Durgamma) ದೇವಸ್ಥಾನದ ಹಕ್ಕು ಮತ್ತು ಆಡಳಿತದ ವಿಚಾರವಾಗಿ ದಶಕಗಳಿಂದಲೂ ಇದ್ದ ಕಿಡಿ ಇದೀಗ ಜ್ವಾಲೆಯಾಗಿ ಸ್ಫೋಟಗೊಂಡಿದೆ. ಕಲ್ಲು ತೂರಾಟ ನಡೆದಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇದರಿಂದ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಮತ್ತು ಹಲವು ವಾಹನಗಳು ಪುಡಿಪುಡಿಯಾಗಿವೆ.
ದಶಕಗಳ ವಿವಾದಕ್ಕೆ ಹೊಸ ತಿರುವು
ಹಿರೇ ಯಡಚಿ ಮತ್ತು ಕ್ಯಾತನಕೇರಿ ಗ್ರಾಮಗಳ ಮಧ್ಯದಲ್ಲಿರುವ ಗುಡ್ಡದ ಮೇಲಿರುವ ‘ಗುಡ್ಡದ ದುರಗಮ್ಮ’ ದೇವಾಲಯವನ್ನು ಎರಡು ಗ್ರಾಮಸ್ಥರೂ ತಮ್ಮದಾಗಿಯೇ ಪರಿಗಣಿಸುತ್ತಿದ್ದರು. ದೇವಾಲಯದ ಆಡಳಿತ ಮತ್ತು ಹಕ್ಕಿನ ವಿಚಾರದಲ್ಲಿ ದಶಕಗಳಿಂದಲೂ ಎರಡೂ ಗ್ರಾಮಗಳ ನಡುವೆ ಶೀತಲ ಸಮರ ನಡೆಯುತ್ತಿತ್ತು. ಆದರೆ ಇತ್ತೀಚೆಗೆ ಹಿರೇ ಯಡಚಿ ಗ್ರಾಮಸ್ಥರು ಹಳೆಯ ದೇವಸ್ಥಾನದ ಪಕ್ಕದಲ್ಲೇ ಹೊಸ ದೇವಸ್ಥಾನ ನಿರ್ಮಿಸಲು ಮುಂದಾಗಿರುವುದು ವಿವಾದಕ್ಕೆ ಹೊಸ ತಿರುವು ನೀಡಿತು.
ಬರುವ ಮಾರ್ಚ್ 9 ನಿಂದ ಅದ್ಧೂರಿಯಾಗಿ ದುರಗಮ್ಮ ಜಾತ್ರೆ ನಡೆಸಲು ಹಿರೇ ಯಡಚಿ ಗ್ರಾಮಸ್ಥರು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಗುಡ್ಡದ ಮೇಲೆ ಮಂಟಪ ನಿರ್ಮಾಣ ಕಾರ್ಯ ಆರಂಭಿಸಿದ್ದರು. ಇದನ್ನು ಕ್ಯಾತನಕೇರಿ ಗ್ರಾಮಸ್ಥರು ವಿರೋಧಿಸಿದರು.
ಮಂಟಪ ನಿರ್ಮಾಣ ನಡೆಯುತ್ತಿರುವುದು ತಿಳಿದು ಸ್ಥಳಕ್ಕೆ ಆಗಮಿಸಿದ ಕ್ಯಾತನಕೇರಿ ಗ್ರಾಮಸ್ಥರು, “ನಮ್ಮ ಅನುಮತಿ ಪಡೆಯದೇ ದೇವಸ್ಥಾನ ನಿರ್ಮಾಣ ಹೇಗೆ ಮಾಡಬಹುದು? ಇಲ್ಲಿ ಯಾವುದೇ ಕಾರ್ಯ ಕೈಗೊಳ್ಳಬೇಕಾದರೂ ನಮ್ಮ ಪರ್ಮಿಷನ್ ಅಗತ್ಯ,” ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವಿಚಾರವಾಗಿ ಮಾತಿಗೆ ಮಾತು ಬೆಳೆದು ವಾಗ್ವಾದ ತೀವ್ರಗೊಂಡಿತು.
ನಂತರ ಎರಡು ಗುಂಪುಗಳ ನಡುವೆ ಕಲ್ಲುತೂರಾಟ ಪ್ರಾರಂಭವಾಯಿತು. ಕ್ಯಾತನಕೇರಿ ಗ್ರಾಮಸ್ಥರು ಹಿರೇ ಯಡಚಿ ಜನರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ರೊಚ್ಚಿಗೆದ್ದ ಗುಂಪು ಅಲ್ಲಿ ನಿಲ್ಲಿಸಿದ್ದ ಬೈಕ್‌ಗಳು ಹಾಗೂ ವಾಹನಗಳ ಮೇಲೆ ಬೃಹತ್ ಕಲ್ಲುಗಳನ್ನು ಎತ್ತಿ ಎಸೆದು ಜಖಂಗೊಳಿಸಿದ್ದಾರೆ.
ವಾಹನಗಳ ನಾಶ, ಜೆಸಿಬಿ ಹಾನಿ
ಘಟನೆಯಲ್ಲಿ ಒಂದು ಜೆಸಿಬಿ ಯಂತ್ರ ಸೇರಿದಂತೆ 7ಕ್ಕೂ ಹೆಚ್ಚು ಬೈಕ್‌ಗಳು ಸಂಪೂರ್ಣ ಹಾನಿಯಾಗಿದೆ. ಪಕ್ಕದಲ್ಲಿ ನಿಲ್ಲಿಸಿದ್ದ ಇನ್ನೂ ಹಲವಾರು ವಾಹನಗಳಿಗೂ ಹಾನಿಯಾಗಿದೆ. ಕಲ್ಲು ತೂರಾಟದ ವೇಳೆ ಎರಡು ಗ್ರಾಮಗಳ ಸುಮಾರು 10ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು
ಘಟನೆಯ ಮಾಹಿತಿ ತಿಳಿದ ತಕ್ಷಣ ರಟ್ಟಿಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದರು. ಜನರನ್ನು ಚದುರಿಸಿ, ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಸದ್ಯ ಗುಡ್ಡದ ಪ್ರದೇಶ ಹಾಗೂ ಎರಡೂ ಗ್ರಾಮಗಳಲ್ಲಿ ಪೊಲೀಸ್ ಕಾವಲು ಮುಂದುವರಿದಿದೆ.
