ಹಾಸನ: ಹಾಸನಾಂಬಾ ದೇವಿಯ ದ್ವೈವಾರ್ಷಿಕ ದರ್ಶನೋತ್ಸವ ಪ್ರಾರಂಭವಾಗಿ ಕೇವಲ ಒಂದು ವಾರದೊಳಗೆ ಹಲವಾರು ದಾಖಲೆಗಳನ್ನು ಸೃಷ್ಟಿಸಿದೆ. ದರ್ಶನ ಆರಂಭವಾಗಿ 8ನೇ ದಿನದೊಳಗಾಗಿ 15 ಲಕ್ಷ 30 ಸಾವಿರಕ್ಕೂ ಅಧಿಕ ಭಕ್ತರು ಹಾಸನಾಂಬೆಯ ದರ್ಶನ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ದೇವಸ್ಥಾನದ ಧರ್ಮಾಧಾರಕ್ಕೆ 10 ಕೋಟಿ 50 ಲಕ್ಷ ರೂಪಾಯಿಗಳಷ್ಟು ಆದಾಯ ದೊರೆತಿದೆ.
ಈ ಬಾರಿ ವಿಐಪಿ ಮತ್ತು ವಿವಿಐಪಿ ದರ್ಶನ ಪಾಸ್‌ಗಳನ್ನು ಸಂಪೂರ್ಣವಾಗಿ ರದ್ದುಪಡಿಸಿರುವುದು ಈ ಯಶಸ್ಸಿನ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಈ ನಿರ್ಧಾರದಿಂದಾಗಿ ಎಲ್ಲಾ ಭಕ್ತರು ಸಮಾನವಾಗಿ ಮತ್ತು ಸುಗಮವಾಗಿ ದರ್ಶನ ಪಡೆಯಲು ಅವಕಾಶ ಸಿಕ್ಕಿತು. ಇದರಿಂದ ಸಾಮಾನ್ಯ ಭಕ್ತರಲ್ಲಿ ಬಹುಮತದವರೆಗೆ ಸಂತೃಪ್ತಿ ಮೂಡಿದೆ. ರಾಜ್ಯದ ಎಲ್ಲಾ ಭಾಗಗಳಿಂದ ಭಕ್ತರು ಹಾಸನಾಂಬ ದೇವಾಯಕ್ಕೆ ಬಂದಿದ್ದರು. ಇನ್ನೂ ಐದು ದಿನಗಳ ಕಾಲ ಜಾತ್ರಾ ಮಹೋತ್ಸವ ಮುಂದುವರೆಯಲಿದ್ದು, ಈ ಸಮಯದಲ್ಲಿ ಇನ್ನೂ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ಬೃಹತ್ ಭಕ್ತರ ಸಂಚಾರವನ್ನು ನಿರ್ವಹಿಸುವುದು ಜಿಲ್ಲಾಡಳಿತಕ್ಕೆ ಒಂದು ಸವಾಲಾಗಿದೆ ಎಂದು ತಿಳಿಸಿದರು. ಶುಕ್ರವಾರ ರಾತ್ರಿ ಹಿನ್ನೆಲೆಯಲ್ಲಿ ಭಕ್ತರು ಹೇಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಇಂದು ಮಾತ್ರ 1,60,000 ಭಕ್ತರು ದರ್ಶನ ಮಾಡಿದ್ದಾರೆ. ಎಲ್ಲಾ ಸರತಿ ಸಾಲುಗಳು ಸಂಪೂರ್ಣ ಭರ್ತಿಯಾಗಿವೆ. ಇಂದು 4 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆಯುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ತಾವೇ ಧರ್ಮ ದರ್ಶನದ ಸಾಲಿನಲ್ಲಿ ಸೇರಿ 3 ಗಂಟೆ ನಂತರ ದರ್ಶನ ಪಡೆದ ಅನುಭವವನ್ನು ಹಂಚಿಕೊಂಡ ಲತಾಕುಮಾರಿ, ಬೆಳಗ್ಗೆ 7 ಗಂಟೆಗೆ ಸಾಲಿನಲ್ಲಿ ನಿಂತ ಭಕ್ತರು ಸಂಜೆ 4 ಗಂಟೆಗೆ ದರ್ಶನ ಪಡೆದಿದ್ದಾರೆ. ಕೆಲವು ಭಕ್ತರು ಗರ್ಭಗುಡಿ ಬಳಿ ತಳ್ಳುವಿಕೆ ಇದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಭಕ್ತರು ಶಾಂತಿಯಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು.
ವಿವಿಧ ಟಿಕೆಟ್ ವ್ಯವಸ್ಥೆಯ ಪ್ರಕಾರ ದರ್ಶನದ ಸಮಯದಲ್ಲಿ ವ್ಯತ್ಯಾಸ ಕಾಣುತ್ತಿದೆ. ಧರ್ಮ ದರ್ಶನದ ಸಾಲಿನಲ್ಲಿ ಬರುತ್ತಿರುವ ಭಕ್ತರಿಗೆ 7-8 ಗಂಟೆ, 1000 ರೂಪಾಯಿ ಟಿಕೆಟ್ ಪಡೆದವರಿಗೆ 3-4 ಗಂಟೆ, ಮತ್ತು 300 ರೂಪಾಯಿ ಟಿಕೆಟ್ ಪಡೆದವರಿಗೆ 6-7 ಗಂಟೆ ಸಮಯ ಬೇಕಾಗುತ್ತಿದೆ.
ಭಕ್ತರಿಗೆ ಸುರಕ್ಷಿತ ಮತ್ತು ಶಾಂತಿಯುತ ದರ್ಶನ ಅನುಭವವಾಗಲಿ ಎಂದು ಜಿಲ್ಲಾಧಿಕಾರಿ ಹಲವಾರು ಸೂಚನೆಗಳನ್ನು ನೀಡಿದ್ದಾರೆ. ಹಾಸನಾಂಬೆ ದರ್ಶನಕ್ಕೆ ನಿಮಗೆ ಸಿಗುವುದು ಕೆಲವೇ ಸೆಕೆಂಡ್ಗಳು. ಪೂರ್ವ ತಯಾರಿ ಮಾಡಿಕೊಂಡು ಬಂದು ಆಶೀರ್ವಾದ ಪಡೆಯಿರಿ. ಮೊದಲು ತಾಳ್ಮೆ ಕಲಿಯಿರಿ, ಮೊಬೈಲ್ ಫೋನ್ ಬಳಸಬೇಡಿ. ಮಕ್ಕಳನ್ನು ಮೇಲೆತ್ತಿಕೊಂಡು ಬನ್ನಿ. ತುಂಬಾ ಒತ್ತಡ ಇದೆ. ದ್ವಾರ ಬಾಗಿಲು ಬಂದ ವೇಳೆಯೇ ದೇವಿ ಕಡೆಗೆ ನೋಡಿ ಎಂದು ಭಕ್ತರಿಗೆ ಮನವಿ ಮಾಡಿದರು.