ಹಾಸನ, ಏಪ್ರಿಲ್ 13: ಹಾಸನ ಜಿಲ್ಲೆಯಲ್ಲಿ ಗೃಹಿಣಿಯೊಬ್ಬಳು ತನ್ನ ಪತಿ ಹಾಗೂ ಚಿಕ್ಕ ಮಗನನ್ನು ಬಿಟ್ಟು ಪ್ರಿಯಕರನ ಜೊತೆ ಕಾರಿನಲ್ಲೇ ಮದುವೆಯಾಗಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಎಂಟು ವರ್ಷಗಳ ದಾಂಪತ್ಯ, ಏಳು ವರ್ಷದ ಮಗನನ್ನು ತೊರೆದು, ಗೃಹಿಣಿ ಹರ್ಷಿತಾ ಎಂಬುವವರು ತಮ್ಮ ಪ್ರಿಯಕರ ಸಚಿನ್ ಜೊತೆ ಕಾರಿನಲ್ಲೇ ಮದುವೆಯಾಗಿರುವ ಘಟನೆ ಸಂಚಲನ ಸೃಷ್ಟಿಸಿದೆ.
ಪ್ರೀತಿಯ ಹೆಸರಲ್ಲಿ ಪತಿ, ಮಗನನ್ನು ಬಿಟ್ಟು ಪರಾರಿ
ಹರ್ಷಿತಾ ಅವರಿಗೆ 2017ರಲ್ಲಿ ಅವರ ಅತ್ತೆಯ ಮಗ ಪ್ರಕಾಶ್ ಜೊತೆ ವಿವಾಹವಾಗಿತ್ತು. ದಂಪತಿಗೆ ಈಗ ಏಳು ವರ್ಷದ ಗಂಡು ಮಗನಿದ್ದಾನೆ. ಮಾರ್ಚ್ 30ರಂದು ‘ಆಸ್ಪತ್ರೆಗೆ ಹೋಗಿ ಬರುತ್ತೇನೆ’ ಎಂದು ಹೇಳಿ ಮನೆಯಿಂದ ಹೊರಟ ಹರ್ಷಿತಾ ಹಿಂದಿರುಗಲೇ ಇಲ್ಲ. ಕುಟುಂಬಸ್ಥರು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪೊಲೀಸರು ಆಕೆಯನ್ನು ಪತ್ತೆ ಹಚ್ಚಿ ಠಾಣೆಗೆ ಕರೆತಂದರು. ಆದರೆ ಅಲ್ಲಿ ಆಕೆ ಪತಿ ಪ್ರಕಾಶ್ ಜೊತೆ ಹೋಗಲು ನಿರಾಕರಿಸಿ, ಪ್ರಿಯಕರ ಸಚಿನ್ ಜೊತೆ ಹೋಗುವುದಾಗಿ ಹಠ ಹಿಡಿದರು.
ಸಾಂತ್ವನ ಕೇಂದ್ರದಿಂದ ಹೇಗೆ ತಪ್ಪಿಸಿಕೊಂಡಳು?
ಈ ಪರಿಸ್ಥಿತಿ ಅರಿತ ಪೊಲೀಸರು ಹರ್ಷಿತಾಳನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದರು. ಅಲ್ಲಿ ಕೆಲವು ದಿನ ಇದ್ದ ಆಕೆ, ‘ತನಗೆ ಅತಿಯಾದ ರಕ್ತಸ್ರಾವವಾಗುತ್ತಿದೆ’ ಎಂದು ನಟಿಸಿ ಆಸ್ಪತ್ರೆಗೆ ಹೋಗುವ ನೆಪದಲ್ಲಿ ಹೊರಬಂದಳು. ಬಳಿಕ ಅಲ್ಲಿಂದಲೇ ಪ್ರಿಯಕರ ಸಚಿನ್ ಜೊತೆ ಕಾರಿನಲ್ಲಿ ತೆರಳಿ ಧಾರ್ಮಿಕವಾಗಿ ಮದುವೆಯಾದಳು. ಇಬ್ಬರೂ ಪ್ರೇಮಿಗಳು ತಾರ್ ಜೀಪ್‌ನಲ್ಲೇ ಮದ್ವೆಯಾಗಿದ್ದು, ಆಕೆ ಕಾರಿನಲ್ಲೇ ತಾಳಿ ಕಟ್ಟಿಸಿಕೊಂಡಳು.
ಮನೆಗೆ ಬಂದಳು, ಮಧ್ಯರಾತ್ರಿ ಮತ್ತೆ ಪರಾರಿ!
ಇಷ್ಟಕ್ಕೂ ಕಥೆ ಮುಗಿಯಲಿಲ್ಲ. ತನ್ನ ಎರಡನೇ ಮದುವೆಯ ಬಳಿಕ ಹರ್ಷಿತಾ ಮೊದಲ ಪತಿ ಪ್ರಕಾಶ್‌ಗೆ ಫೋನ್ ಮಾಡಿ, “ನಂದೂ ತಪ್ಪಾಯಿತು, ನನ್ನನ್ನು ಕ್ಷಮಿಸಿ, ಮಗನಿಗೆ ಅಮ್ಮನ ಅಗತ್ಯವಿದೆ” ಎಂದು ಕಂಬನಿ ಮಿಡಿದಳು. ಅವಳಲ್ಲಿ ತಪ್ಪಿನ ಅರಿವಾಗಿದೆ ಎಂದು ಪ್ರಕಾಶ್ ಆಕೆಯನ್ನು ಮತ್ತೆ ಮನೆಗೆ ಕರೆದುಕೊಂಡು ಬಂದ. ಆದರೆ ಅದೇ ಮಧ್ಯರಾತ್ರಿ ಹರ್ಷಿತಾ ಮತ್ತೆ ಮನೆ ಬಿಟ್ಟು, ತನ್ನ ಪ್ರಿಯಕರ ಸಚಿನ್ ಜೊತೆ ಪರಾರಿಯಾಗಿದ್ದಾಳೆ. ತಾಯಿಯನ್ನು ಕಳೆದುಕೊಂಡ ಏಳು ವರ್ಷದ ಮಗ ‘ಅಮ್ಮ ಬೇಕು, ಅಮ್ಮ ಬೇಕು’ ಎಂದು ಅತ್ತುಕೊಂಡಿದ್ದಾನೆ. ಮಗನ ದುಃಖ ನೋಡಿ ಸಹಿಸಲಾಗದ ಪ್ರಕಾಶ್ ಮತ್ತೆ ಪೊಲೀಸರ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಮೊದಲ ಬಾರಿಗೆ ಹರ್ಷಿತಾಳನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದ ಪೊಲೀಸರು, ಈಗ ಮಹಿಳೆ ಎರಡನೇ ಮದುವೆಯಾಗಿ, ಮತ್ತೆ ಪತಿ-ಮಗನನ್ನು ತೊರೆದ ಹಿನ್ನೆಲೆ ಕಾನೂನು ಕ್ರಮ ಕೈಗೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.