ಹಾಸನ: ನಗರದಲ್ಲಿ ಕಳೆದ ಕೆಲವು ದಿನಗಳಿಂದ ಶಾಲಾ ಬಾಲಕಿಯೊಬ್ಬಳನ್ನು ನಿರಂತರವಾಗಿ ಹಿಂಬಾಲಿಸಿ ಪೋಷಕರಲ್ಲಿ ಮತ್ತು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದ್ದ ದುಷ್ಕರ್ಮಿಯನ್ನ ಪೆನ್ಷನ್ ಮೊಹಲ್ಲಾ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ:
ನಗರದ ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯೊಬ್ಬಳು ಶಾಲೆಯಿಂದ ಮನೆಗೆ ಬರುವಾಗ ಈ ಕಿಡಿಗೇಡಿಯು ಬಾಲಕಿಯನ್ನ ಹಿಂಬಾಲಿಸುತ್ತಿದ್ದ. ಬಾಲಕಿ ರಸ್ತೆಯಲ್ಲಿ ವೇಗವಾಗಿ ಹೆಜ್ಜೆ ಹಾಕುತ್ತಿದ್ದರೂ ಸಹ, ಈತ ಆಕೆಯನ್ನು ಬಿಡದೆ ಮನೆಬಾಗಿಲವರೆಗೂ ಬೆನ್ನಟ್ಟಿಕೊಂಡು ಬಂದಿದ್ದ. ಇದನ್ನ ಕಂಡ ಆಕೆಯ ತಾಯಿ ಕಿರುಚಿದದ್ದಳು ಬಳಿಕ ಆತ ಅಲ್ಲಿಂದ ಪರಾರಿಯಾಗಿದ್ದ.
ಪೊಲೀಸರ ಮಿಂಚಿನ ಕಾರ್ಯಾಚರಣೆ
ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಪೋಷಕರು ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಚ್ಚೆತ್ತ ಹಾಸನ ಪೊಲೀಸರು ವಿಶೇಷ ತಂಡವನ್ನು ರಚಿಸಿ ಕಿರಾತಕನ ಪತ್ತೆಗೆ ಬಲೆ ಬೀಸಿದ್ದರು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತಾಂತ್ರಿಕ ತನಿಖೆ ನಡೆಸಿದ ಪೊಲೀಸರು, ಇಂದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ವ್ಯಕ್ತಿಯನ್ನು ಸದ್ಯ ವಿಚಾರಣೆಗೆ ಒಳಪಡಿಸಲಾಗಿದೆ. ಈತ ಕೇವಲ ಈ ಬಾಲಕಿಯನ್ನು ಮಾತ್ರ ಹಿಂಬಾಲಿಸುತ್ತಿದ್ದನೇ ಅಥವಾ ಇತರ ಶಾಲಾ ಮಕ್ಕಳಿಗೂ ಇಂತಹ ತೊಂದರೆ ನೀಡುತ್ತಿದ್ದನೇ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಪೆನ್ಷನ್ ಮೊಹಲ್ಲಾ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಯ ಹಿನ್ನೆಲೆಯನ್ನು ಜಾಲಾಡುತ್ತಿದ್ದಾರೆ.
ಕಿಡಿಗೇಡಿಯ ಬಂಧನದಿಂದ ಹಾಸನ ನಗರದ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಇಂತಹ ಘಟನೆಗಳು ಮರುಕಳಿಸದಂತೆ ಶಾಲಾ ಆವರಣ ಮತ್ತು ರಸ್ತೆಗಳಲ್ಲಿ ಪೊಲೀಸ್ ಗಸ್ತನ್ನು ಹೆಚ್ಚಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಶಾಲಾ ಬಾಲಕಿಯ ಬೆನ್ನಟ್ಟಿದ ಕಿಡಿಗೇಡಿ: ಬೆಚ್ಚಿಬೀಳಿಸುವ ಸಿಸಿಟಿವಿ ದೃಶ್ಯ ವೈರಲ್
ಹಾಸನ: ನಗರದಲ್ಲಿ ಶಾಲಾ ಬಾಲಕಿಯೊಬ್ಬಳನ್ನು ದುಷ್ಕರ್ಮಿಯೊಬ್ಬ ಹಾಡಹಗಲೇ ಹಿಂಬಾಲಿಸಿ ಮನೆ ಬಾಗಿಲವರೆಗೂ ಬಂದಿರುವ ಘಟನೆ ನಗರದ 80 ಅಡಿ ರಸ್ತೆಯಲ್ಲಿ ನಡೆಯಲ್ಲಿ ನಡೆದಿದೆ.
ಕಳೆದ ಜನವರಿ 17ರ ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು,ಬಾಲಕಿ ಶಾಲೆಯಿಂದ ಮನೆಗೆ ಬರುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಹಿಂಬಾಲಿಸಿಕೊಂಡು ಬಂದಿದ್ದಾನೆ. ಬಾಲಕಿ, ಯಾರೋ ತನ್ನನ್ನು ಬೆನ್ನಟ್ಟುತ್ತಿದ್ದಾರೆ ಎಂಬುದು ತಿಳಿಯುತ್ತಿದ್ದಂತೆ ತಕ್ಷಣ, ಆಕೆ ಭಯದಿಂದ ಮನೆಗೆ ಓಡಿದ್ದಾಳೆ. ಆದರೂ ಕಿಡಿಗೇಡಿ ಮನೆ ಬಾಗಿಲಿನವರೆಗೂ ಬಂದಿದ್ದಾನೆ.
ಬಾಲಕಿ ತಕ್ಷಣ ಮನೆ ಆವರಣಕ್ಕೆ ಬಂದು ಗೇಟ್ ಲಾಕ್ ಮಾಡಿಕೊಂಡಿದ್ದಾಳೆ. ಆದರೂ ಬಿಡದ ವ್ಯಕ್ತಿ, ಗೇಟ್ ಬಳಿ ಬಂದು ಒಳಗೆ ಇಣುಕಿ ನೋಡಿದ್ದಾನೆ. ಈ ವೇಳೆ ಗಾಬರಿಗೊಂಡ ಬಾಲಕಿ, ಅಮ್ಮಾ ಬಾಗಿಲು ತೆಗಿ ಎಂದು ಜೋರಾಗಿ ಕಿರುಚಾಡಿದ್ದಾಳೆ. ತಕ್ಷಣ ಬಾಲಕಿಯ ತಾಯಿ ಬಂದು ಬಾಗಿಲು ತೆಗೆದಿದ್ದಾರೆ. ಆ ವೇಳೆ ವ್ಯಕ್ತಿಯನ್ನ ಕಂಡ ತಾಯಿ, ಯಾರೋ ನೀನು ಎಂದು ಕಿರುಚಿದ್ದಾಳೆ ಆಕೆಯ ಕೂಗು ಕೇಳುತ್ತಿದ್ದಂತೆ ತಕ್ಷಣ ಆ ವ್ಯಕ್ತಿ ಅಲ್ಲಿಂದ ಓಡಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಮಾಹಿತಿ ತಿಳಿಯುತ್ತಿದ್ದಂತೆ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಿಡಿಗೇಡಿಯ ಕೃತ್ಯವು ಮನೆಯ ಸಮೀಪವಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಗಳನ್ನಾಧರಿಸಿ ಪೊಲೀಸರು ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ.
