‘ನನ್ನ ಮೇಲೆ ಚೆಕ್‌‌ ಬೌನ್ಸ್‌ ಕೇಸ್‌‌ ಹಾಕಲಾಗಿದೆ’: ಸೆಲ್ಫಿ ವಿಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ

Untitled design 2026 01 27T224036.986

ಹಾಸನ, ಜನವರಿ 27: ಸಾಲಗಾರರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೋರ್ವ ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಬೆಂಗಳೂರಿನ ನೆಲಮಂಗಲದ ನಿವಾಸಿ ಕೃಷ್ಣಪ್ಪ (47) ಮೃತ ವ್ಯಕ್ತಿ. ಹಾಸನದ ದೊಡ್ಡಪುರ ಸಮೀಪ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಘಟನೆಯು ಕುಟುಂಬಸ್ಥರನ್ನಷ್ಟೇ ಅಲ್ಲದೆ ಸಾರ್ವಜನಿಕ ವಲಯದಲ್ಲಿಯೂ ತೀವ್ರ ಆಘಾತ ಮೂಡಿಸಿದೆ.

ಮೃತ ಕೃಷ್ಣಪ್ಪ ಅವರು ಕಳೆದ ಮೂರು ವರ್ಷಗಳಿಂದ ಪತ್ನಿ ಕಾಂಚನ ಹಾಗೂ ಮಕ್ಕಳೊಂದಿಗೆ ಹಾಸನ ನಗರದಲ್ಲಿ ನೆಲೆಸಿದ್ದರು. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಅವರು ಸುಮಾರು ಒಂದು ಲಕ್ಷ ರೂಪಾಯಿ ಸಾಲ ಪಡೆದಿದ್ದರು ಎನ್ನಲಾಗಿದೆ. ಆದರೆ ಸಾಲ ನೀಡಿದವರು ಇದನ್ನು ನೆಪ ಮಾಡಿಕೊಂಡು 40 ಲಕ್ಷ ರೂಪಾಯಿಗಳ ಚೆಕ್ ಕೇಸ್ ದಾಖಲಿಸಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಒತ್ತಡವನ್ನು ತಡೆಯಲಾಗದೆ ಕೃಷ್ಣಪ್ಪ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ..

ಸಾಯುವ ಮುನ್ನ ಕೃಷ್ಣಪ್ಪ ಅವರು ತಮ್ಮ ಮೊಬೈಲ್‌ನಲ್ಲಿ ಸೆಲ್ಫಿ ವೀಡಿಯೋ ಮಾಡಿಕೊಂಡಿದ್ದು, ಅದನ್ನು ಪತ್ನಿ ಕಾಂಚನ ಅವರಿಗೆ ಕಳುಹಿಸಿದ್ದಾರೆ. ವೀಡಿಯೋದಲ್ಲಿ, “ಕಾಂಚನ, ನನ್ನನ್ನು ಕ್ಷಮಿಸಿಬಿಡು. ನಾನು ಪಡೆದಿದ್ದು ಕೇವಲ ಒಂದು ಲಕ್ಷ ರೂಪಾಯಿ ಸಾಲ. ಆದರೆ ರಮೇಶ್ ಹಾಗೂ ಮಂಜು 40 ಲಕ್ಷ ರೂಪಾಯಿಗಳ ಚೆಕ್ ಕೇಸ್ ಹಾಕಿದ್ದಾರೆ. ಜಾಮೀನು ಪಡೆಯಲು ಬೇಕಾದ ಹಣವನ್ನೂ ಒದಗಿಸಲು ನನಗೆ ಸಾಧ್ಯವಾಗುತ್ತಿಲ್ಲ. ಈ ಕಿರುಕುಳವನ್ನು ತಡೆಯಲು ಆಗುತ್ತಿಲ್ಲ. ನನ್ನ ಸಾವಿಗೆ ನೇರ ಕಾರಣ ರಮೇಶ್ ಮತ್ತು ಮಂಜು ಅಣ್ಣತಮ್ಮಂದಿರು. ನನ್ನ ಸಾವಿಗೆ ನ್ಯಾಯ ಸಿಗಬೇಕಾದರೆ ಅವರಿಗೆ ತಕ್ಕ ಶಿಕ್ಷೆಯಾಗಲಿ” ಎಂದು ಮನವಿ ಮಾಡಿಕೊಂಡಿದ್ದಾರೆ.

ಘಟನೆ ನಡೆದ ದಿನ ಹಾಸನ ಹೊರವಲಯದ ದೊಡ್ಡಪುರ ಸಮೀಪ ಕೃಷ್ಣಪ್ಪ ಅವರು ವಿಷ ಸೇವಿಸಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರೂ ಮಾರ್ಗಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ. ಈ ಸಂಬಂಧ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರು ಕಳುಹಿಸಿದ ಸೆಲ್ಫಿ ವೀಡಿಯೋವನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಲಾಗಿದೆ. ರಮೇಶ್ ಮತ್ತು ಮಂಜು ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ತನಿಖೆ ಆರಂಭಿಸಲಾಗಿದೆ. ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳನ್ನು ಪರಿಶೀಲಿಸುತ್ತಿದ್ದು, ಸಾಲ ವ್ಯವಹಾರ, ಚೆಕ್ ಕೇಸ್ ಹಿನ್ನೆಲೆ ಹಾಗೂ ಕಿರುಕುಳದ ಸ್ವರೂಪವನ್ನು ವಿವರವಾಗಿ ತನಿಖೆ ಮಾಡುತ್ತಿದ್ದಾರೆ.

 

Exit mobile version