ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ, 8 ಕೋಟಿಯಷ್ಟು ಆದಾಯ ಬಂದಿದೆ: ಸಚಿವ ಶಿವಲಿಂಗೇಗೌಡ

Your paragraph text 2026 11 03T165959.810

ಹಾಸನ: ನಾಡಿನ ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದಾದ ಹಾಸನಾಂಬೆ ದೇವಿಯ ದರ್ಶನ ಪಡೆಯಲು ಭಕ್ತರ ದಂಡೇ ಹರಿದು ಬರುತ್ತಿದೆ. ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಧರ್ಮದರ್ಶನದ ಸರತಿ ಸಾಲು ಕಿಲೋಮೀಟರ್‌ಗಟ್ಟಲೆ ವಿಸ್ತರಿಸಿದೆ. ಈಗಾಗಲೇ ಸುಮಾರು 8.5 ಲಕ್ಷ ಭಕ್ತರು ತಾಯಿಯ ದರ್ಶನ ಪಡೆದಿದ್ದು, ದೇವಸ್ಥಾನಕ್ಕೆ ಸುಮಾರು 8 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ತಿಳಿಸಿದ್ದಾರೆ.

ಹಾಸನದಲ್ಲಿ ಮಾತನಾಡಿದ ಸಚಿವರು, ಪ್ರತಿದಿನವೂ ಪವಾಡದ ರೀತಿಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ರಾತ್ರೋರಾತ್ರಿ ಎಲ್ಲೆಲ್ಲಿಂದ ಜನರು ಬರುತ್ತಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಭಕ್ತರ ಸಂಖ್ಯೆ ಹೆಚ್ಚಾದರೂ ಅರ್ಚಕರು ಅತ್ಯಂತ ಸಮಾಧಾನದಿಂದ ದರ್ಶನಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಕಾರ್ಯಕ್ಕೆ ಮೆಚ್ಚುಗೆ

ಹಾಸನಾಂಬೆ ದರ್ಶನಕ್ಕೆ ಆಗಮಿಸುತ್ತಿರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಉತ್ತಮ ವ್ಯವಸ್ಥೆ ಮಾಡಿವೆ ಎಂದು ಸಚಿವರು ಹೇಳಿದರು. ಪೊಲೀಸ್ ಇಲಾಖೆಗೆ ವಿಶೇಷ ಧನ್ಯವಾದ ತಿಳಿಸಿದ ಅವರು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇಡೀ ರಾತ್ರಿ ನಿದ್ದೆ ಮಾಡದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳು, ಸಿಬ್ಬಂದಿ ಹಾಗೂ ಅರ್ಚಕರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಈ ಬಾರಿ ಕೈಗೊಂಡಿರುವ ವ್ಯವಸ್ಥೆ ಐತಿಹಾಸಿಕವಾಗಿದ್ದು, ಮುಂದಿನ ದಿನಗಳಲ್ಲಿಯೂ ನೆನಪಿನಲ್ಲಿ ಉಳಿಯಲಿದೆ. ಹಾಸನಾಂಬೆ ತಾಯಿಯ ದರ್ಶನದ ಮಹತ್ವ ಅಂತರರಾಷ್ಟ್ರೀಯ ಮಟ್ಟಕ್ಕೂ ತಲುಪಿದ್ದು, ಎಲ್ಲೆಡೆಯಿಂದ ಜನರು ವ್ಯವಸ್ಥೆಯನ್ನು ಕೊಂಡಾಡುತ್ತಿದ್ದಾರೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್ 6ರಂದು ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನವೆಂಬರ್ 8ರಂದು ಹಾಸನಾಂಬೆ ದರ್ಶನಕ್ಕೆ ಆಗಮಿಸಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು. ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ಪ್ರೋಟೋಕಾಲ್ ಪ್ರಕಾರ ಆಹ್ವಾನ ನೀಡುವ ವಿಚಾರದಲ್ಲಿಯೂ ಯಾವುದೇ ಗೊಂದಲವಿಲ್ಲ. ತಹಶೀಲ್ದಾರ್ ಖುದ್ದಾಗಿ ತೆರಳಿ ಆಹ್ವಾನ ನೀಡಿದ್ದಾರೆ. ಪಾಸ್ ನೀಡುವ ಸಂದರ್ಭದಲ್ಲಿ ತಹಶೀಲ್ದಾರ್ ಇಲ್ಲದ ಕಾರಣ ಮತ್ತೊಬ್ಬ ಅಧಿಕಾರಿಯನ್ನು ಕಳುಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮಳೆಗಾಗಿ ಪ್ರಾರ್ಥಿಸಿದ ವಿನಯ್ ಗುರೂಜಿ

ಹಾಸನಾಂಬೆ ದೇವಿಯ ದರ್ಶನ ಪಡೆದ ವಿನಯ್ ಗುರೂಜಿ, ಪ್ರತಿವರ್ಷದಂತೆ ಈ ಬಾರಿಯೂ ತಾಯಿಯ ದರ್ಶನ ಪಡೆದಿರುವುದಾಗಿ ತಿಳಿಸಿದರು. ಹಾಸನಾಂಬೆಯನ್ನು ಕರ್ನಾಟಕದ ವೈಷ್ಣವೀ ದೇವಿ ಎಂದು ಕರೆಯಲಾಗುತ್ತದೆ. ಒಂಬತ್ತು ದಿನಗಳ ಕಾಲ ಭಕ್ತರಿಗೆ ದರ್ಶನ ನೀಡುವ ತಾಯಿಯ ಆಶೀರ್ವಾದ ಪಡೆಯಲು ಸಂತೋಷವಾಗುತ್ತಿದೆ ಎಂದರು.

ಜಿಲ್ಲಾಡಳಿತ ಕಳೆದ ಬಾರಿಗಿಂತಲೂ ಉತ್ತಮ ವ್ಯವಸ್ಥೆ ಮಾಡಿದ್ದು, ಯಾರಿಗೂ ತೊಂದರೆಯಾಗದಂತೆ ಕ್ರಮ ಕೈಗೊಂಡಿರುವುದು ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರತಿವರ್ಷವೂ ದರ್ಶನದ ಅವಧಿಯಲ್ಲಿ ಸೇವೆ ಸಲ್ಲಿಸುವ ಕಾರ್ಮಿಕರಿಗೆ ತಮ್ಮ ಆಶ್ರಮದ ವತಿಯಿಂದ ವಸ್ತ್ರಗಳನ್ನು ನೀಡಿ ಕೃತಜ್ಞತೆ ಸಲ್ಲಿಸುವ ಸಂಪ್ರದಾಯ ಮುಂದುವರಿಸಿಕೊಂಡು ಬರುತ್ತಿರುವುದಾಗಿ ತಿಳಿಸಿದರು. ಈ ಬಾರಿ ಮಳೆಯ ಕೊರತೆಯಿಂದ ರೈತರು ತೊಂದರೆ ಅನುಭವಿಸುತ್ತಿದ್ದು, ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತರಿಗೆ ಅನುಕೂಲವಾಗಲಿ ಎಂದು ತಾಯಿಯಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.

ಕ್ಯಾಲಿಫೋರ್ನಿಯಾದಿಂದ ಬಂದ ಆನಂದನಾಥ ಸ್ವಾಮೀಜಿ

ಹಾಸನಾಂಬೆ ದರ್ಶನಕ್ಕಾಗಿ ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್‌ಹೋಸೆಯಿಂದಲೂ ಸ್ವಾಮೀಜಿಯೊಬ್ಬರು ಆಗಮಿಸಿದ್ದಾರೆ. ಅಲ್ಲಿನ ಬಾಲಾಜಿ ಮಠದೊಂದಿಗೆ ಸಂಬಂಧ ಹೊಂದಿರುವ ಆನಂದನಾಥ ಸ್ವಾಮೀಜಿ ತಾಯಿಯ ದರ್ಶನ ಪಡೆದು ಸಂತಸ ವ್ಯಕ್ತಪಡಿಸಿದರು. ಬಾಲಗಂಗಾಧರನಾಥ ಸ್ವಾಮೀಜಿಯವರಿಂದ ದೀಕ್ಷೆ ಪಡೆದಿರುವ ಅವರು, ಹಾಸನಾಂಬೆ ದರ್ಶನ ಪಡೆಯುವ ಉದ್ದೇಶದಿಂದಲೇ ಭಾರತಕ್ಕೆ ಆಗಮಿಸಿರುವುದಾಗಿ ತಿಳಿಸಿದರು.

ಹಾಸನಾಂಬೆ ದರ್ಶನದ ವಿಚಾರ ದೇಶ-ವಿದೇಶಗಳಲ್ಲಿಯೂ ಸುದ್ದಿಯಾಗುತ್ತಿರುವುದು ಸಂತಸದ ಸಂಗತಿ ಎಂದು ಅವರು ಹೇಳಿದರು. ಹೀಗೆ ಭಕ್ತರು, ಗಣ್ಯರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ಹಾಸನಾಂಬೆ ಸನ್ನಿಧಿಗೆ ಆಗಮಿಸುತ್ತಿದ್ದು, ತಾಯಿಯ ದರ್ಶನೋತ್ಸವ ಭಕ್ತಿಭಾವದಿಂದ ಮುಂದುವರಿದಿದೆ.

Exit mobile version