ರೇವಣ್ಣ ಕುಟುಂಬ ಮುಗಿಸಲು ಬಂದ ಎಸ್‌ಐಟಿಗೆ ಉಡುಗೊರೆ ನೀಡಿದ್ದಾರೆ: ಕೈ ಸರ್ಕಾರದ ವಿರುದ್ದ ಗುಡುಗಿದ ಹೆಚ್.ಡಿ. ದೇವೇಗೌಡರು

Untitled design 2026 01 24T195222.775

ಹಾಸನ: ರೇವಣ್ಣ ಅವರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಎದುರಾಳಿಗಳು ಎಸ್‌ಐಟಿಯನ್ನು ಬಳಸಿಕೊಂಡಿದ್ದಾರೆ. ಈ ಪಿತೂರಿಗೆ ಸಾಥ್ ನೀಡಿದವರಿಗೆ ಸರ್ಕಾರ ಈಗ ಉಡುಗೊರೆಗಳನ್ನು ನೀಡುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಹಾಸನದ ಬೂವನಹಳ್ಳಿ ಬಳಿ ಹಮ್ಮಿಕೊಂಡಿದ್ದ ಬೃಹತ್ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ವಯೋಸಹಜ ಅನಾರೋಗ್ಯದ ನಡುವೆಯೂ ಜೆಡಿಸ್‌ನ ಮುಂದಿನ ನಡೆ ಹಾಗೂ ಇಲ್ಲಿಯವರೆಗೂ ಆದ ಘಟನೆಗಳ ಬಗ್ಗೆ ಮಾತನಾಡಿದ್ದಾರೆ.

ಅನಾರೋಗ್ಯ ಮರೆತು ಸಮಾವೇಶಕ್ಕೆ ಬಂದ ದೊಡ್ಡಗೌಡರು

ನನಗೆ ಈಗ 93 ವರ್ಷ ವಯಸ್ಸು. ಕಿಡ್ನಿ ಸಮಸ್ಯೆಯಿಂದಾಗಿ ವಾರದಲ್ಲಿ ಮೂರು ದಿನ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದೇನೆ. ನಿನ್ನೆಯಷ್ಟೇ ಡಯಾಲಿಸಿಸ್ ಆಗಿದ್ದರೂ, ನಿಮ್ಮೆಲ್ಲರನ್ನು ನೋಡಲು ಬಂದಿದ್ದೇನೆ. ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಅನ್ನು ಮುಗಿಸಲು ಕಾಂಗ್ರೆಸ್‌ನವರು ಎರಡು ಬಾರಿ ಬೃಹತ್ ಸಮಾವೇಶಗಳನ್ನು ಮಾಡಿದರು. ಆದರೆ ಇಲ್ಲಿ ನೆರೆದಿರುವ ಜನರನ್ನು ನೋಡಿದರೆ ಆಡಳಿತ ನಡೆಸುವವರಿಗೆ ಉತ್ತರ ಸಿಕ್ಕಂತಾಗಿದೆ ಎಂದು ಕಾಂಗ್ರೆಸ್‌ ನಾಯಕರಿಗೆ ಟಾಂಗ್‌ ಕೊಟ್ಟಿದ್ದಾರೆ.

ಹಾಸನ ಜಿಲ್ಲೆಯೊಂದಿಗಿನ ತಮ್ಮ ಅವಿನಾಭಾವ ಸಂಬಂಧವನ್ನು ಸ್ಮರಿಸಿದ ಗೌಡರು, ಒಂದು ಕಾಲದಲ್ಲಿ ನನ್ನನ್ನು ಇಲ್ಲಿ ಸೋಲಿಸಲಾಗಿತ್ತು. ಆದರೆ 1991ರಲ್ಲಿ ಅದೇ ಜನರು ನನ್ನನ್ನು ಲೋಕಸಭೆಗೆ ಕಳುಹಿಸಿದರು. ಯಾವ ಜನ ನನ್ನನ್ನು ತುಳಿಯಲು ಕೇಸ್‌ಗಳನ್ನು ಹಾಕಿಸಿದರೋ, ಅವನ್ನೆಲ್ಲಾ ಮೆಟ್ಟಿನಿಂತು ರಾಜಕೀಯ ಮಾಡಿದ್ದೇನೆ. ಕುಮಾರಸ್ವಾಮಿ ಅವರು ಹಣ ಕೊಟ್ಟು ಜಮೀನು ಖರೀದಿಸಿದರೂ, ಅದು ಗೋಮಾಳ ಜಾಗ ಎಂದು ಸುಳ್ಳು ದಾಖಲೆ ಸೃಷ್ಟಿಸಿ ತನಿಖೆ ಮಾಡಿಸಲಾಯಿತು ಎಂದು ಆಕ್ರೋಶ ಹೊರಹಾಕಿದರು.

ರಾಹುಲ್ ಗಾಂಧಿ ಅವರ ಬಿಜೆಪಿಯ ಬಿ-ಟೀಂ ಎಂಬ ಹೇಳಿಕೆಯನ್ನು ಪ್ರಸ್ತಾಪಿಸಿದ ದೇವೇಗೌಡರು, ಹತ್ತು ವರ್ಷಗಳ ಹಿಂದೆ ರಾಹುಲ್ ಗಾಂಧಿ ಇಲ್ಲಿಗೆ ಬಂದು ಜೆಡಿಎಸ್ ಅನ್ನು ಬಿಜೆಪಿಯ ಬಿ-ಟೀಂ ಎಂದಿದ್ದರು. ಆದರೆ ಇಂದು ನಾವು ಎನ್‌ಡಿಎ ಪಾಲುದಾರರಾಗಿದ್ದು, ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ವೋಟ್ ಚೋರಿ ಎಂದವರಿಗೆ ಕೇವಲ ಆರು ಸೀಟು ಬಂದಿದೆ. ಕಾಂಗ್ರೆಸ್ ಈಗ ಕೇವಲ ಮೂರೇ ರಾಜ್ಯಗಳಲ್ಲಿದೆ ಎಂದು ಲೇವಡಿ ಮಾಡಿದರು.

ಇನ್ನು ಹಾಸನದ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಅವರು, ನನ್ನದೊಂದು ಆಸೆಯಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಸನಕ್ಕೆ ಕರೆಸಿ, ಇಲ್ಲಿನ ಐಐಟಿ ಸ್ಥಾಪನೆ ಹಾಗೂ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಿಸುತ್ತೇನೆ. ಕುಮಾರಸ್ವಾಮಿಯವರು ಇಂಡಸ್ಟ್ರಿಯಲ್ ಕ್ಲಸ್ಟರ್ ನಿರ್ಮಾಣ ಮಾಡುವ ದೊಡ್ಡ ಕನಸು ಕಂಡಿದ್ದಾರೆ ಎಂದು ಭವಿಷ್ಯದ ಯೋಜನೆಗಳನ್ನ ಬಗ್ಗೆ ಮಾತನಾಡಿದರು.

Exit mobile version