ಚಾಮರಾಜನಗರ: ಕೇವಲ 17 ವರ್ಷದ ಅಪ್ರಾಪ್ತ ಬಾಲಕಿ ಹೊಟ್ಟೆನೋವಿನ ಕಾರಣ ಆಸ್ಪತ್ರೆಗೆ ತೆರಳುತ್ತಿದ್ದಾಗ ಆ್ಯಂಬುಲೆನ್ಸ್‌ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ದೇಶಿಪುರ ಗ್ರಾಮದಲ್ಲಿ ನಡೆದಿದೆ. ಈ ಘಟನೆಯ ಬೆನ್ನಲ್ಲೇ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಆಕೆಯ ಹತ್ತಿರದ ಸಂಬಂಧಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಘಟನೆಯ ಹಿನ್ನೆಲೆ
ದೇಶಿಪುರ ಗ್ರಾಮದ 17 ವರ್ಷದ ಅಪ್ರಾಪ್ತ ಬಾಲಕಿಗೆ ಕಳೆದ ಮೂರು ದಿನಗಳ ಹಿಂದೆ ತೀವ್ರವಾದ ಹೊಟ್ಟೆನೋವು ಕಾಣಿಸಿಕೊಂಡಿದೆ. ಗಾಬರಿಗೊಂಡ ಪೋಷಕರು ಕೂಡಲೇ ಬಾಲಕಿಯನ್ನು ಗುಂಡ್ಲುಪೇಟೆಯ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು, ಪರಿಸ್ಥಿತಿ ಗಂಭೀರವಾಗಿರುವುದನ್ನು ಗಮನಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರದ ಸಿಮ್ಸ್ (CIMS) ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ.
ಗುಂಡ್ಲುಪೇಟೆಯಿಂದ ಚಾಮರಾಜನಗರಕ್ಕೆ ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ಯುವ ಮಾರ್ಗಮಧ್ಯೆ ಬಾಲಕಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ವಾಹನದಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಪೋಷಕರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳೇ ದಂಗಾಗಿದ್ದಾರೆ.
ಹೆರಿಗೆಯಾದ ನಂತರ ಬಾಲಕಿಯನ್ನು ವಿಚಾರಿಸಿದಾಗ ಆಘಾತಕಾರಿ ಸತ್ಯ ಹೊರಬಿದ್ದಿದೆ. ಬಾಲಕಿಯ ಈ ಸ್ಥಿತಿಗೆ ಹತ್ತಿರದ ಸಂಬಂಧಿಯೇ ಆಗಿರುವ ದೇಶಿಪುರ ಗ್ರಾಮದ ಸುರೇಶ್ (46) ಎಂಬಾತನೇ ಕಾರಣ ಎಂದು ಬಾಲಕಿ ತನ್ನ ತಂದೆಯ ಬಳಿ ಹೇಳಿದ್ದಾಳೆ.
ಪೋಕ್ಸೋ ಅಡಿ ಪ್ರಕರಣ ದಾಖಲು
ಮಗಳ ಪರಿಸ್ಥಿತಿಯಿಂದ ನೊಂದ ತಂದೆ ಕೂಡಲೇ ಬೇಗೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಸುರೇಶ್ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇತ್ತೀಚೆಗಷ್ಟೇ ಇದೇ ಜಿಲ್ಲೆಯ ಹಸಗೂಲಿ ಗ್ರಾಮದಲ್ಲಿ ವೃದ್ಧನೋರ್ವ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಮಾಸುವ ಮುನ್ನವೇ, ಮತ್ತೊಂದು ಇಂತಹದ್ದೇ ಘಟನೆ ನಡೆದಿರುವುದು ಜಿಲ್ಲೆಯ ಜನತೆಯನ್ನು ಕಳವಳಗೊಳಿಸಿದೆ.
ಸದ್ಯ ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಅಪ್ರಾಪ್ತರ ಮೇಲೆ ನಡೆಯುತ್ತಿರುವ ಇಂತಹ ದೌರ್ಜನ್ಯಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
