ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲು ನಿರಾಕರಿಸಿದ್ದಾರೆ. ಸಂವಿಧಾನದ ವಿಧಿ 176ರ ಪ್ರಕಾರ, ರಾಜ್ಯಪಾಲರು ವರ್ಷದ ಮೊದಲ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವುದು ಕಡ್ಡಾಯವಾಗಿದೆ.
ಸಂವಿಧಾನದ 176ನೇ ವಿಧಿಯ ಸ್ಪಷ್ಟತೆ
ಸಂವಿಧಾನದ 176ನೇ ವಿಧಿಯ ಪ್ರಕಾರ, ಪ್ರತಿ ವರ್ಷದ ಆರಂಭದಲ್ಲಿ ಅಥವಾ ಸಾಮಾನ್ಯ ಚುನಾವಣೆಯ ನಂತರದ ಮೊದಲ ಅಧಿವೇಶನದಲ್ಲಿ ರಾಜ್ಯಪಾಲರು ವಿಧಾನಸಭೆ ಅಥವಾ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲೇಬೇಕು. ಈ ಭಾಷಣವು ಸಂಪೂರ್ಣವಾಗಿ ಸಚಿವ ಸಂಪುಟದ ಸಲಹೆಯ ಮೇರೆಗೆ ರಚಿಸಲಾದ ಸರ್ಕಾರದ ನೀತಿ ಘೋಷಣೆಯಾಗಿದೆ. ಇದರಲ್ಲಿ ರಾಜ್ಯಪಾಲರಿಗೆ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುವ ಅಥವಾ ಕೆಲವು ಅಂಶಗಳನ್ನು ಕೈಬಿಡುವ ಸ್ವತಂತ್ರತೆ ಇಲ್ಲ.
ಸರ್ಕಾರದ ಮೊದಲ ಆಯ್ಕೆ: ಸಂವಿಧಾನಾತ್ಮಕ ವಾದ
ರಾಜ್ಯಪಾಲರ ನಿರಾಕರಣೆ ಹಿನ್ನೆಲೆಯಲ್ಲಿ ಸರ್ಕಾರವು ಮೊದಲಿಗೆ “176ನೇ ವಿಧಿಯಂತೆ ಭಾಷಣ ಕಡ್ಡಾಯ” ಎಂಬ ವಾದವನ್ನು ಮುಂದಿಟ್ಟು, ಇದು ರಾಜ್ಯಪಾಲರ ಕರ್ತವ್ಯ ಎಂದು ಸ್ಪಷ್ಟಪಡಿಸಬಹುದು. ಭಾಷಣದ ವಿಷಯಕ್ಕೆ ಸಂಬಂಧಿಸಿ ರಾಜ್ಯಪಾಲರಿಗೆ ಸ್ವತಂತ್ರ ನಿರ್ಣಯ ಕೈಗೊಳ್ಳುವ ಹಕ್ಕಿಲ್ಲ ಎಂಬುದನ್ನು ಸರ್ಕಾರ ಪ್ರತಿಪಾದಿಸಬಹುದು.
ಎರಡನೇ ಆಯ್ಕೆ: ಮನವೊಲಿಕೆ ಯತ್ನ
ಸಂವಿಧಾನಾತ್ಮಕ ಸಂಘರ್ಷವನ್ನು ತಗ್ಗಿಸುವ ದೃಷ್ಟಿಯಿಂದ ಸರ್ಕಾರ ರಾಜ್ಯಪಾಲರನ್ನು ಮನವೊಲಿಸಲು ಪ್ರಯತ್ನಿಸಬಹುದು. ಈ ಹಂತದಲ್ಲಿ ಕೆಲ ವಿವಾದಾತ್ಮಕ ಅಂಶಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆಯೂ ಇದೆ. ನರೇಗಾ ಯೋಜನೆಗೆ ಸಂಬಂಧಿಸಿದ ಅಂಶವನ್ನು ಭಾಷಣದಲ್ಲಿ ಸೇರಿಸಬಾರದೆಂದು ರಾಜ್ಯಪಾಲರು ಪಟ್ಟು ಹಿಡಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸಚಿವ ಸಂಪುಟದ ತುರ್ತು ಸಭೆ
ರಾಜ್ಯಪಾಲರ ನಿಲುವು ಬದಲಾಗದಿದ್ದರೆ, ಸರ್ಕಾರ ತುರ್ತು ಸಚಿವ ಸಂಪುಟ ಸಭೆ ಕರೆಯುವ ಆಯ್ಕೆಯೂ ಹೊಂದಿದೆ. ಅಗತ್ಯವಿದ್ದರೆ ವಿಶೇಷ ಅಧಿವೇಶನವನ್ನು ಕೆಲಕಾಲ ಮುಂದೂಡಿ, ಈ ಸಭೆಯಲ್ಲಿ ಮುಂದಿನ ಕಾನೂನು ಹಾಗೂ ರಾಜಕೀಯದ ಕುರಿತು ತೀರ್ಮಾನ ಕೈಗೊಳ್ಳಬಹುದು.
ನಿರ್ಣಯ ಮತ್ತು ಕೇಂದ್ರ–ರಾಷ್ಟ್ರಪತಿ ಹಂತ
ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ನಡೆಗೆ ವಿರೋಧವಾಗಿ ನಿರ್ಣಯ ಕೈಗೊಳ್ಳುವ ಅವಕಾಶ ಸರ್ಕಾರಕ್ಕಿದೆ. ಈ ನಿರ್ಣಯವನ್ನು ಆಧರಿಸಿ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬಹುದು. ಜೊತೆಗೆ, ರಾಜ್ಯಪಾಲರ ನಡೆ ಸಂವಿಧಾನ ವಿರೋಧಿಯಾಗಿದೆ ಎಂದು ರಾಷ್ಟ್ರಪತಿಗಳಿಗೆ ಅಧಿಕೃತ ದೂರು ಸಲ್ಲಿಸುವ ಅವಕಾಶವೂ ಇದೆ.
ಕಾನೂನು ಹೋರಾಟ
ಜೊತೆಗೆ, ಸರ್ಕಾರ ಕಾನೂನಾತ್ಮಕ ಹೋರಾಟಕ್ಕೂ ಮುಂದಾಗಬಹುದು. ರಾಜ್ಯಪಾಲರು ಸದನಕ್ಕೆ ಹಾಜರಾಗಲು ಅಥವಾ ಭಾಷಣ ಮಾಡಲು ನಿರಾಕರಿಸುವುದು ಕಾನೂನುಬಾಹಿರಕ್ಕಿಂತಲೂ ಹೆಚ್ಚು ಸಾಂವಿಧಾನಿಕ ಕರ್ತವ್ಯದ ನಿರಾಕರಣೆ ಎಂದು ನ್ಯಾಯಾಲಯದಲ್ಲಿ ವಾದಿಸಬಹುದು.
ನಿಯಮಾವಳಿಗಳ ಪ್ರಕಾರ ರಾಜ್ಯಪಾಲರು ಸದನಕ್ಕೆ ಹಾಜರಾಗುವುದಿಲ್ಲ ಎಂದು ನಿರಾಕರಿಸಲು ಸಾಧ್ಯವಿಲ್ಲ. ರಾಜ್ಯಪಾಲರ ಕಡ್ಡಾಯ ಕರ್ತವ್ಯಗಳಲ್ಲಿ ಸದನವನ್ನು ಉದ್ದೇಶಿಸಿ ಭಾಷಣ ಮಾಡುವುದೂ ಕೂಡ ಒಂದು. 176(1) ರ ವಿಧಿಯ ಪ್ರಕಾರ ರಾಜ್ಯಪಾಲರು ಸದನವನ್ನು ಉದ್ದೇಶಿಸಿ ಭಾಷಣ ಮಾಡಬೇಕು. ವರ್ಷದ ಪ್ರಾರಂಭದ ಮೊದಲ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವುದು ಕಡ್ಡಾಯ. ಭಾಷಣದ ವಿಷಯದ ಮೇಲೆ ರಾಜ್ಯಪಾಲರು ಸ್ವತಂತ್ರ ನಿರ್ಣಯ ಕೈಗೊಳ್ಳುವಂತಿಲ್ಲ. ರಾಜ್ಯಪಾಲರು ಹೀಗೆ ನಿರಾಕರಿಸಿದರೆ ಅದು ಸಾಂವಿಧಾನಿಕ ಬಿಕ್ಕಟ್ಟಿಗೆ ದಾರಿ ಮಾಡಿಕೊಡುತ್ತವೆ. ಕಾನೂನು ಬಾಹಿರ ಎಂಬುದಕ್ಕಿಂತ ಹೆಚ್ಚಾಗಿ ಇದು ಸಾಂವಿಧಾನಿಕ ಕರ್ತವ್ಯದ ನಿರಾಕರಣೆ. ಈ ರೀತಿಯ ಬೆಳವಣಿಗೆಯ ಕುರಿತು ಸುಪ್ರೀಂ ಕೋರ್ಟ್ 1966ರಲ್ಲೇ ಸ್ಪಷ್ಟ ತೀರ್ಪು ನೀಡಿದೆ.
