ಜನಾರ್ದನ ರೆಡ್ಡಿಗೆ ಬಿಗ್ ಶಾಕ್: 884 ಕೋಟಿ ಲೂಟಿ ಹಣ ವಸೂಲಿಗೆ ಸರ್ಕಾರ ಮಾಸ್ಟರ್ ಪ್ಲಾನ್..!

Untitled design 2026 02 27T202345.670

ಬಳ್ಳಾರಿಯ ಗಣಿ ಧಣಿ ಜನಾರ್ದನ ರೆಡ್ಡಿ ವಿರುದ್ಧದ ಅಕ್ರಮ ಗಣಿಗಾರಿಕೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಅಕ್ರಮ ಗಣಿಗಾರಿಕೆ ಸಾಬೀತಾಗಿರುವ ಬೆನ್ನಲ್ಲೇ, ಸರ್ಕಾರದ ಬೊಕ್ಕಸಕ್ಕೆ ಉಂಟಾಗಿರುವ 884 ಕೋಟಿ ರೂಪಾಯಿ ನಷ್ಟವನ್ನು ರೆಡ್ಡಿಯವರಿಂದಲೇ ವಸೂಲಿ ಮಾಡುವ ಪ್ರಕ್ರಿಯೆ ಆರಂಭವಾಗುವ ಲಕ್ಷಣಗಳು ಕಾಣುತ್ತಿವೆ.

ಏನಿದು ಪ್ರಕರಣ?

ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿ ಭಾಗದ ಹಿರೇಹಾಳ್-ಸಿದ್ದಾಪುರ ಬಳಿಯ ಓಬಳಾಪುರಂ (OMC) ಬೆಟ್ಟದಲ್ಲಿ ನಡೆದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಜನಾರ್ದನ ರೆಡ್ಡಿ ಹಾಗೂ ಅವರ ಆಪ್ತ ಶ್ರೀನಿವಾಸರೆಡ್ಡಿ ಮುಖ್ಯಸ್ಥರಾಗಿದ್ದ ಓಎಂಸಿ ಕಂಪನಿಯು, ಗಣಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಶಾಮೀಲಾಗಿ ನಿಯಮ ಬಾಹಿರವಾಗಿ ಗಣಿಗಾರಿಕೆ ನಡೆಸಿತ್ತು.

ವರದಿಗಳ ಪ್ರಕಾರ, ಈ ಕಂಪನಿಯು ಸುಮಾರು 29 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಅಕ್ರಮವಾಗಿ ಸಾಗಾಟ ಮಾಡಿದೆ. ಇದರಿಂದಾಗಿ ಸರ್ಕಾರಕ್ಕೆ ಸಲ್ಲಬೇಕಿದ್ದ 884 ಕೋಟಿ ರೂಪಾಯಿ ಆದಾಯ ಲೂಟಿಯಾಗಿದೆ ಎಂಬ ಗಂಭೀರ ಆರೋಪವಿದೆ. ಈ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಮಾತ್ರವಲ್ಲದೆ, ಆಂಧ್ರದ ಮಾಜಿ ಸಚಿವೆ ಸಬಿತಾ ಇಂದ್ರಾರೆಡ್ಡಿ ಹಾಗೂ ಹಲವು ಐಎಎಸ್ ಅಧಿಕಾರಿಗಳ ಹೆಸರೂ ಶಾಮೀಲಾಗಿದೆ.

ಅಕ್ರಮ ಗಣಿಗಾರಿಕೆ ವಿರುದ್ಧ ಸುದೀರ್ಘ ಹೋರಾಟ ನಡೆಸುತ್ತಿರುವ ಟಪಾಲ್ ಗಣೇಶ್, ಸರ್ಕಾರದ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ಜನಾರ್ದನ ರೆಡ್ಡಿಯಿಂದಲೇ ವಸೂಲಿ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವು ಈಗ ವರದಿ ತರಿಸಿಕೊಳ್ಳಲು ಮುಂದಾಗಿದೆ.

ಸಂಡೂರು ಕ್ಲಸ್ಟರ್‌ನಲ್ಲಿ ರೆಡ್ಡಿ ನಡೆಸಿದ ಗಣಿಗಾರಿಕೆಯ ಕುರಿತು ಸಮಗ್ರ ವರದಿ ನೀಡುವಂತೆ ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಅಧೀನ ಕಾರ್ಯದರ್ಶಿಗಳು, ಬಳ್ಳಾರಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ವರದಿ ಸಲ್ಲಿಕೆಯಾದ ನಂತರ ಅಧಿಕೃತವಾಗಿ ವಸೂಲಾತಿ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ.

ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2011ರಲ್ಲಿ ಬಂಧಿತರಾಗಿದ್ದ ಜನಾರ್ದನ ರೆಡ್ಡಿ,  ಮೂರುವರೆ ವರ್ಷಗಳ ಕಾಲ ಚಂಚಲಗುಡ ಮತ್ತು ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದರು. ಸಿಬಿಐ ಈಗಾಗಲೇ 3400ಕ್ಕೂ ಹೆಚ್ಚು ದಾಖಲೆಗಳನ್ನು ಪರಿಶೀಲಿಸಿದ್ದು, 219ಕ್ಕೂ ಹೆಚ್ಚು ಸಾಕ್ಷಿಗಳ ವಿಚಾರಣೆ ನಡೆಸಿದೆ. ಟಪಾಲ್ ಗಣೇಶ್ ಮತ್ತು ಅವರ ಸಹೋದರ ಏಕಾಂಬರಂ ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾಗಿದ್ದಾರೆ.

ರೆಡ್ಡಿ ಮತ್ತು ಅವರ ತಂಡದಿಂದ ನಾವು ಸಾಕಷ್ಟು ಕಿರುಕುಳ ಅನುಭವಿಸಿದ್ದೇವೆ, ಆದರೆ ಈಗ ನ್ಯಾಯ ಸಿಗುವ ಕಾಲ ಬಂದಿದೆ. ಆರೋಪಿಗಳು ಜೈಲಿಗೆ ಹೋಗುವುದು ಖಚಿತ ಎಂದು ಟಪಾಲ್ ಗಣೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Exit mobile version