ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಕಾಯಿಲೆಗೆ ತಕ್ಕಂತೆ ಊಟ: ಆರೋಗ್ಯ ಇಲಾಖೆಯಿಂದ ಹೊಸ ಮೆನು

ಸ್ಕ್ರೀನ್ಸ್ (1)

ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಇನ್ಮುಂದೆ ಎಲ್ಲರಿಗೂ ಒಂದೇ ರೀತಿಯ ಸಾಮಾನ್ಯ ಆಹಾರ ನೀಡುವ ಪದ್ಧತಿಯಲ್ಲಿ ಮಹತ್ವದ ಬದಲಾವಣೆಯಾಗಲಿದೆ. ರೋಗಿಗಳ ವಯಸ್ಸು, ಕಾಯಿಲೆಯ ಸ್ವರೂಪ ಹಾಗೂ ಚಿಕಿತ್ಸೆಯ ಅಗತ್ಯವನ್ನು ಆಧರಿಸಿ ಪ್ರತ್ಯೇಕ ಮಾದರಿಯ ಪೌಷ್ಟಿಕ ಆಹಾರ ಒದಗಿಸಲು ಆರೋಗ್ಯ ಇಲಾಖೆ ಹೊಸ ಯೋಜನೆ ರೂಪಿಸಿದೆ.

ಸದ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಹುತೇಕ ರೋಗಿಗಳಿಗೆ ಸಾಮಾನ್ಯ ಮಾದರಿಯ ಆಹಾರವನ್ನು ನೀಡಲಾಗುತ್ತಿದೆ. ಆದರೆ ಪ್ರತಿಯೊಬ್ಬ ರೋಗಿಯ ಆರೋಗ್ಯ ಸ್ಥಿತಿ ಒಂದೇ ರೀತಿಯಾಗಿರುವುದಿಲ್ಲ. ಕೆಲವರಿಗೆ ಸಕ್ಕರೆ ನಿಯಂತ್ರಿತ ಆಹಾರ ಅಗತ್ಯವಿದ್ದರೆ, ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳಿಗೆ ಹೆಚ್ಚಿನ ಪೌಷ್ಟಿಕಾಂಶ ಇರುವ ಆಹಾರದ ಅಗತ್ಯವಿರುತ್ತದೆ. ಈ ಹಿನ್ನೆಲೆ ರೋಗಿಗಳ ಅಗತ್ಯಕ್ಕೆ ಅನುಗುಣವಾಗಿ ಆಹಾರ ಪೂರೈಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಹೊಸ ವ್ಯವಸ್ಥೆಯಡಿ ರೋಗಿಗಳನ್ನು ಪ್ರಮುಖವಾಗಿ ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಸಾಮಾನ್ಯ ರೋಗಿಗಳು, ವಿಶೇಷ ಚಿಕಿತ್ಸಾ ಆಹಾರದ ಅಗತ್ಯವಿರುವವರು, ಗರ್ಭಿಣಿಯರು ಮತ್ತು ಬಾಣಂತಿಯರು ಹಾಗೂ ಮಕ್ಕಳು ಎಂಬ ನಾಲ್ಕು ವರ್ಗಗಳಿಗೆ ಪ್ರತ್ಯೇಕ ಆಹಾರ ಮೆನು ಸಿದ್ಧಪಡಿಸಲಾಗಿದೆ.

ಆರೋಗ್ಯ ಇಲಾಖೆ ಆಯುಕ್ತ ಗುರುದತ್ ಹೆಗ್ಡೆ ಅವರ ಮಾಹಿತಿ ಪ್ರಕಾರ, ಬೆಂಗಳೂರಿನ ನಾಲ್ಕು ಜನರಲ್ ಸರ್ಕಾರಿ ಆಸ್ಪತ್ರೆಗಳಿಗೆ ಸದ್ಯ ಇಸ್ಕಾನ್ ವತಿಯಿಂದ ಆಹಾರ ಪೂರೈಕೆಯಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಆಹಾರ ಪೂರೈಕೆಗಾಗಿ ಬೇರೆ ಬೇರೆ ಸಂಸ್ಥೆಗಳಿಗೆ ಟೆಂಡರ್ ನೀಡಲಾಗಿದೆ. ಇದೀಗ ಹೊಸ ಆಹಾರ ಮೆನು ಜಾರಿಗೆ ತರುವ ನಿಟ್ಟಿನಲ್ಲಿ ಇಲಾಖೆಯ ಮಟ್ಟದಲ್ಲಿ ಸಿದ್ಧತೆ ನಡೆಯುತ್ತಿದೆ.

ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಆಹಾರ ಪದ್ಧತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಾದೇಶಿಕವಾಗಿ ಸೂಕ್ತವಾಗುವ ರೀತಿಯಲ್ಲಿ ಮೆನು ರೂಪಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಈಗಾಗಲೇ ಕರಡು ಮೆನು ಸಿದ್ಧವಾಗಿದ್ದು, ಸರ್ಕಾರದ ಅಧಿಕೃತ ಅನುಮೋದನೆ ಹಾಗೂ ಅಗತ್ಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೆ ತರಲು ಉದ್ದೇಶಿಸಲಾಗಿದೆ. ಈ ವರ್ಷದ ಅಂತ್ಯದ ವೇಳೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಹೊಸ ಆಹಾರ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ಇದೆ.

ದಿನಕ್ಕೆ ಮೂರು ಬಾರಿ ಊಟ

ಹೊಸ ಮೆನು ಪ್ರಕಾರ ರೋಗಿಗಳಿಗೆ ಪ್ರತಿದಿನ ಮೂರು ಬಾರಿ ಊಟ ನೀಡಲಾಗುತ್ತದೆ. ನಿಗದಿತ ಪ್ರಮಾಣದಲ್ಲಿ ಆಹಾರ ಪೂರೈಸುವ ಜೊತೆಗೆ ಅಗತ್ಯಕ್ಕೆ ಅನುಗುಣವಾಗಿ ಟೀ ಅಥವಾ ಕಾಫಿಯನ್ನೂ ನೀಡಲು ಯೋಜಿಸಲಾಗಿದೆ. ವಾರದ ಏಳು ದಿನವೂ ಒಂದೇ ಆಹಾರ ನೀಡದೆ ಪ್ರತಿದಿನ ವಿಭಿನ್ನ ಹಾಗೂ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶವನ್ನು ಇಲಾಖೆ ಹೊಂದಿದೆ.

ಸಾಮಾನ್ಯ ರೋಗಿಗಳಿಗೆ ಏನು ಸಿಗಲಿದೆ?

ಸಾಮಾನ್ಯ ರೋಗಿಗಳ ಮೆನುವಿನಲ್ಲಿ ರವೆ ಉಪ್ಪಿಟ್ಟು, ರಾಗಿ ಮುದ್ದೆ-ಸಾಂಬಾರ್, ಸೋಯಾ ಚಂಕ್ಸ್, ಚಪಾತಿ-ತರಕಾರಿ ಪಲ್ಯ, ಮೊಟ್ಟೆ, ಬಾಳೆಹಣ್ಣು ಹಾಗೂ ಗೋಧಿ ಗಂಜಿಯಂತಹ ಆಹಾರ ಪದಾರ್ಥಗಳನ್ನು ಸೇರಿಸಲಾಗಿದೆ. ರೋಗಿಗಳ ದೈನಂದಿನ ಪೌಷ್ಟಿಕಾಂಶದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಈ ಆಹಾರಗಳನ್ನು ಆಯ್ಕೆ ಮಾಡಲಾಗಿದೆ.

ಚಿಕಿತ್ಸಾ ಆಹಾರಕ್ಕೆ ಪ್ರತ್ಯೇಕ ಮೆನು

ವಿಶೇಷ ಚಿಕಿತ್ಸಾ ಆಹಾರದ ಅಗತ್ಯವಿರುವ ರೋಗಿಗಳಿಗೆ ಸಕ್ಕರೆ ರಹಿತ ಟೀ, ಮೊಳಕೆಕಾಳು, ಮಜ್ಜಿಗೆ, ಚಪಾತಿ, ತರಕಾರಿ ಸಲಾಡ್, ಪೊಂಗಲ್ ಮತ್ತು ಬ್ರೆಡ್‌ನಂತಹ ಆಹಾರ ನೀಡಲು ಉದ್ದೇಶಿಸಲಾಗಿದೆ. ರೋಗದ ಸ್ವರೂಪ ಹಾಗೂ ವೈದ್ಯಕೀಯ ಅಗತ್ಯಕ್ಕೆ ಅನುಗುಣವಾಗಿ ಆಹಾರದಲ್ಲಿ ಬದಲಾವಣೆ ಮಾಡುವ ವ್ಯವಸ್ಥೆಯೂ ಇರಲಿದೆ.

ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳಿಗೆ ವಿಶೇಷ ಆಹಾರ

ಗರ್ಭಿಣಿಯರು ಹಾಗೂ ಬಾಣಂತಿಯರಿಗಾಗಿ ಮೊಳಕೆಕಾಳು, ಹಾಲು, ಬಾಳೆಹಣ್ಣು, ಮುದ್ದೆ, ಚಿಕ್ಕಿ, ಕಿತ್ತಳೆ ಹಣ್ಣು, ಮೊಟ್ಟೆ ಮತ್ತು ಪೌಷ್ಟಿಕ ಪೊಂಗಲ್ ಸೇರಿದಂತೆ ಹೆಚ್ಚಿನ ಪೌಷ್ಟಿಕಾಂಶ ಹೊಂದಿರುವ ಆಹಾರವನ್ನು ಮೆನುವಿನಲ್ಲಿ ಸೇರಿಸಲಾಗಿದೆ.

ಮಕ್ಕಳಿಗೆ ರವೆ ಇಡ್ಲಿ, ಗೋಧಿ ಗಂಜಿ, ಬ್ರೆಡ್, ಹಾಲು-ಬಾಳೆಹಣ್ಣು, ಅನ್ನ-ಸಾಂಬಾರ್ ಹಾಗೂ ಮೊಟ್ಟೆ ಅಥವಾ ಸೋಯಾ ಚಂಕ್ಸ್ ನೀಡಲು ಯೋಜಿಸಲಾಗಿದೆ.

Exit mobile version