ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲು ಯಾನ ಮರು ಆರಂಭ: ಸಿಎಂ ಡಿಕೆಶಿ ಚಾಲನೆ

ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲು ಯಾನ ಮರು ಆರಂಭ ಸಿಎಂ ಡಿಕೆಶಿ ಚಾಲನೆ

ಬೆಂಗಳೂರು: ದಕ್ಷಿಣ ಭಾರತದ ಐಷಾರಾಮಿ ಪ್ರವಾಸಿ ರೈಲು ಎಂದೇ ಖ್ಯಾತಿ ಪಡೆದಿರುವ ಗೋಲ್ಡನ್ ಚಾರಿಯಟ್ (Golden Chariot) ಹೊಸ ರೂಪ, ಅತ್ಯಾಧುನಿಕ ಸೌಲಭ್ಯಗಳು ಹಾಗೂ ರಾಜವೈಭವದೊಂದಿಗೆ ಮತ್ತೊಮ್ಮೆ ಹಳಿಗಿಳಿದಿದೆ. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಜಂಟಿಯಾಗಿ ಹಸಿರು ನಿಶಾನೆ ತೋರುವ ಮೂಲಕ ರೈಲಿನ ಹೊಸ ಪ್ರವಾಸಿ ಋತುವಿಗೆ ಚಾಲನೆ ನೀಡಿದರು.

ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (IRCTC) ಹಾಗೂ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (KSTDC) ಸಹಯೋಗದಲ್ಲಿ ನಿರ್ವಹಣೆಯಾಗುತ್ತಿರುವ ಈ ರೈಲು, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಐತಿಹಾಸಿಕ ತಾಣಗಳು, ಪ್ರಕೃತಿ ಸೌಂದರ್ಯ ಮತ್ತು ಸಾಂಸ್ಕೃತಿಕ ವೈಭವವನ್ನು ಪ್ರವಾಸಿಗರಿಗೆ ಪರಿಚಯಿಸಲಿದೆ.

ಮೊದಲ ಪ್ರಯಾಣದ ಟಿಕೆಟ್‌ಗಳು ಸೋಲ್ಡ್‌ಔಟ್!

ನವೀಕೃತ ಗೋಲ್ಡನ್ ಚಾರಿಯಟ್ ರೈಲಿಗೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೊಸ ಋತುವಿನ ಮೊದಲ ಪ್ರಯಾಣದ ಎಲ್ಲಾ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ ಎಂದು ತಿಳಿದುಬಂದಿದೆ. ದೇಶೀಯ ಪ್ರವಾಸಿಗರ ಜೊತೆಗೆ ಸ್ಪೇನ್ ಸೇರಿದಂತೆ ವಿವಿಧ ದೇಶಗಳ ವಿದೇಶಿ ಪ್ರವಾಸಿಗರೂ ಈ ಐಷಾರಾಮಿ ರೈಲು ಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ರಾಜಮನೆತನದ ವೈಭವವನ್ನು ನೆನಪಿಸುವ ವಿನ್ಯಾಸ, ಆರಾಮದಾಯಕ ವಾಸ್ತವ್ಯ ಮತ್ತು ವಿಶೇಷ ಪ್ರವಾಸಿ ಅನುಭವ ಈ ರೈಲಿನ ಪ್ರಮುಖ ಆಕರ್ಷಣೆಗಳಾಗಿವೆ. ರೈಲು ಪ್ರಯಾಣದ ಜೊತೆಗೆ ಕರ್ನಾಟಕದ ಇತಿಹಾಸ, ವಾಸ್ತುಶಿಲ್ಪ, ವನ್ಯಜೀವಿ ಸಂಪತ್ತು ಹಾಗೂ ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಅವಕಾಶ ಸಿಗಲಿದೆ.

ಹೊಯ್ಸಳ, ಚಾಲುಕ್ಯ, ವಿಜಯನಗರ ಸಾಮ್ರಾಜ್ಯದ ವೈಭವ

ಮೈಸೂರಿನ ರೈಲ್ವೆ ಕಾರ್ಯಾಗಾರದಲ್ಲಿ ಗೋಲ್ಡನ್ ಚಾರಿಯಟ್ ರೈಲಿಗೆ ತಾಂತ್ರಿಕ ನವೀಕರಣ ಮತ್ತು ಒಳಾಂಗಣ ವಿನ್ಯಾಸದ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ಕರ್ನಾಟಕದ ಪ್ರಸಿದ್ಧ ಹೊಯ್ಸಳ, ಚಾಲುಕ್ಯ ಮತ್ತು ವಿಜಯನಗರ ಸಾಮ್ರಾಜ್ಯಗಳ ವಾಸ್ತುಶಿಲ್ಪದ ಸ್ಫೂರ್ತಿಯೊಂದಿಗೆ ರೈಲಿನ ಒಳಾಂಗಣವನ್ನು ಅಲಂಕರಿಸಲಾಗಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಈ ಹಿಂದೆ ಕೇವಲ ಮಲಗುವ ವ್ಯವಸ್ಥೆ ಹೊಂದಿದ್ದ ಕ್ಯಾಬಿನ್‌ಗಳನ್ನು ಇದೀಗ ಪ್ರತ್ಯೇಕ ಲಿವಿಂಗ್ ರೂಮ್ ಮತ್ತು ಬೆಡ್ ರೂಮ್ ಹೊಂದುವಂತೆ ಮರುವಿನ್ಯಾಸಗೊಳಿಸಲಾಗಿದೆ. ಒಟ್ಟು 40 ಸುಸಜ್ಜಿತ ಕ್ಯಾಬಿನ್‌ಗಳಿದ್ದು, ಒಂದೇ ಪ್ರಯಾಣದಲ್ಲಿ 80 ಅತಿಥಿಗಳಿಗೆ ವಸತಿ ಕಲ್ಪಿಸುವ ಸಾಮರ್ಥ್ಯ ಹೊಂದಿದೆ. ವಿಕಲಚೇತನ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ಕ್ಯಾಬಿನ್ ವ್ಯವಸ್ಥೆಯನ್ನೂ ಮಾಡಲಾಗಿದೆ.

ರೈಲಿನೊಳಗೆ ರೆಸ್ಟೋರೆಂಟ್, ಜಿಮ್, ಸ್ಪಾ!

ಗೋಲ್ಡನ್ ಚಾರಿಯಟ್ ಕೇವಲ ಪ್ರಯಾಣದ ಸಾಧನವಲ್ಲ, ಚಲಿಸುವ ಐಷಾರಾಮಿ ಹೋಟೆಲ್‌ನ ಅನುಭವವನ್ನೇ ನೀಡುವಂತೆ ರೂಪಿಸಲಾಗಿದೆ. ಪ್ರಯಾಣಿಕರಿಗೆ ಭಾರತೀಯ ಮತ್ತು ಅಂತರರಾಷ್ಟ್ರೀಯ ಖಾದ್ಯಗಳನ್ನು ಉಣಬಡಿಸಲು ಎರಡು ರೆಸ್ಟೋರೆಂಟ್‌ಗಳನ್ನು ಸಜ್ಜುಗೊಳಿಸಲಾಗಿದೆ. ವಿಶೇಷ ಆಹಾರ ಪದ್ಧತಿ ಅನುಸರಿಸುವವರಿಗಾಗಿ ಜೈನ್ ಮತ್ತು ಗ್ಲುಟನ್-ಮುಕ್ತ ಆಹಾರದ ಆಯ್ಕೆಗಳನ್ನೂ ಪರಿಚಯಿಸಲಾಗಿದೆ.

ಇದರ ಜೊತೆಗೆ ಮದಿರಾ ಲೌಂಜ್ ಬಾರ್, ಆರೋಗ್ಯ ಸ್ಪಾ ಮತ್ತು ಜಿಮ್‌ನಂತಹ ಸೌಲಭ್ಯಗಳಿವೆ. ಪ್ರಯಾಣಿಕರ ಸುರಕ್ಷತೆಗೆ ಅತ್ಯಾಧುನಿಕ ಸಿಸಿಟಿವಿ ಕಣ್ಗಾವಲು ಹಾಗೂ ಅಗ್ನಿಶಾಮಕ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. 

5 ರಾತ್ರಿ, 6 ದಿನಗಳ ಪ್ರವಾಸದಲ್ಲಿ ಏನೇನಿದೆ?

ಹೊಸ ಪ್ರವಾಸಿ ಋತುವಿನಲ್ಲಿ ಒಟ್ಟು 13 ಐಷಾರಾಮಿ ಪ್ರವಾಸಗಳನ್ನು ಯೋಜಿಸಲಾಗಿದೆ. ಅವುಗಳಲ್ಲಿ ಐದು ರಾತ್ರಿಗಳು ಮತ್ತು ಆರು ದಿನಗಳ ‘ಪ್ರೈಡ್ ಆಫ್ ಕರ್ನಾಟಕ’ ಪ್ರವಾಸ ವಿಶೇಷ ಆಕರ್ಷಣೆಯಾಗಿದೆ.

ಈ ಪ್ರವಾಸದಲ್ಲಿ ಪ್ರವಾಸಿಗರು ಬಂಡೀಪುರ ವನ್ಯಜೀವಿ ಧಾಮ, ಬೇಲೂರು ಮತ್ತು ಹಳೇಬೀಡಿನ ಐತಿಹಾಸಿಕ ದೇವಾಲಯಗಳು, ಚಿಕ್ಕಮಗಳೂರಿನ ಕಾಫಿ ತೋಟಗಳು, ಹಂಪಿಯ ವಿಜಯನಗರ ಸಾಮ್ರಾಜ್ಯದ ಸ್ಮಾರಕಗಳು ಹಾಗೂ ಗೋವಾದ ಕಡಲತೀರಗಳನ್ನು ವೀಕ್ಷಿಸಬಹುದು. ಈ ಪ್ರವಾಸಗಳ ಆರಂಭ ಮತ್ತು ಅಂತ್ಯ ಬೆಂಗಳೂರಿನಲ್ಲೇ ನಡೆಯಲಿದೆ.

 

 

Exit mobile version