ಬೆಂಗಳೂರು: ಮಾಜಿ ವಿಧಾನ ಪರಿಷತ್ ಸದಸ್ಯ (ಎಂಎಲ್‌ಸಿ) ದಯಾನಂದ್ ರೆಡ್ಡಿ ಅವರನ್ನು ದುಷ್ಕರ್ಮಿಗಳು ಸಿನಿಮಾ ಸ್ಟೈಲ್‌ನಲ್ಲಿ ಅಪಹರಿಸಿ, 3 ಕೋಟಿ ರೂಪಾಯಿ ಬೇಡಿಕೆಯಿಟ್ಟ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅನೇಕಲ್ ತಾಲೂಕಿನ ಹುಸ್ಕೂರು ಬಳಿ ತಡರಾತ್ರಿ ನಡೆದಿದೆ.
ಘಟನೆ ಅನೇಕಲ್ ತಾಲೂಕಿನ ಹುಸ್ಕೂರು–ಹೀಲಲಿಗೆ ಪ್ರದೇಶದ ಬಳಿ ನಡೆದಿದೆ. ಮಾಜಿ ಎಂಎಲ್‌ಸಿ ದಯಾನಂದ್ ರೆಡ್ಡಿ ಅವರು “ಗೋಲ್ಡ್ ಕಾಯಿನ್ ಕ್ಲಬ್”ನಿಂದ ಹೊರಬಂದು ತಮ್ಮ ಕಾರಿನಲ್ಲಿ ತೆರಳಲು ಸಿದ್ಧರಾಗಿದ್ದಾಗ ಈ ಘಟನೆ ನಡೆದಿದೆ. ಈ ವೇಳೆ ಇಬ್ಬರು ಬೈಕ್‌ನಲ್ಲಿ ಬಂದು ಅವರ ಕಾರನ್ನು ಅಡ್ಡಗಟ್ಟಿದ್ದಾರೆ ಎನ್ನಲಾಗಿದೆ.
ದುಷ್ಕರ್ಮಿಗಳು “ನಿಮಗೆ ಗಿಫ್ಟ್ ಬಂದಿದೆ” ಎಂದು ಹೇಳಿ ಕಾಟನ್ ಬಾಕ್ಸ್ ತೋರಿಸಿ ದಯಾನಂದ್ ಅವರ ಗಮನ ಸೆಳೆದಿದ್ದಾರೆ. ಅವರು ಕಾರಿನ ಡೋರ್ ಲಾಕ್ ತೆರೆಯುತ್ತಿದ್ದಂತೆಯೇ ಒಬ್ಬ ಆರೋಪಿಯು ಬಲವಂತವಾಗಿ ಕಾರಿನೊಳಗೆ ನುಗ್ಗಿದ್ದಾನೆ. ನಂತರ ಗನ್ ತೋರಿಸಿ ಅವರನ್ನು ಬೆದರಿಸಿ, ತಮ್ಮ ಸೂಚನೆಯಂತೆ ಕಾರು ಚಲಾಯಿಸಲು ಒತ್ತಾಯಿಸಿದ್ದಾನೆ.
ಈ ವೇಳೆ ಮತ್ತೊಂದು ಕೆಂಪು ಬಣ್ಣದ ಕಾರಿನಲ್ಲಿ ಇನ್ನಿಬ್ಬರು ಆರೋಪಿಗಳು ಹಿಂಬಾಲಿಸುತ್ತಿದ್ದರು ಎಂದು ತಿಳಿದುಬಂದಿದೆ. ನಂತರ ಆರೋಪಿಗಳು ದಯಾನಂದ್ ರೆಡ್ಡಿಯನ್ನು ಅತ್ತಿಬೆಲೆ ಸಮೀಪದ KHB ಬಡಾವಣೆ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಅವರನ್ನು ಪ್ರಾಣ ಬೆದರಿಕೆ ಹಾಕಿ, “ನಿನ್ನನ್ನು ಕೊಲ್ಲಲು 10 ಕೋಟಿ ಸುಫಾರಿ ನೀಡಲಾಗಿದೆ” ಎಂದು ಹೆದರಿಸಿದ್ದಾರೆ.
ಆರೋಪಿಗಳು ಆರಂಭದಲ್ಲಿ 3 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ ಮಾತುಕತೆಯ ಸಂದರ್ಭದಲ್ಲಿ ಅದನ್ನು 2 ಕೋಟಿಗೆ ಇಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ವೇಳೆ ದಯಾನಂದ್ ರೆಡ್ಡಿ ಅವರು ತಮ್ಮ ಬಳಿ ಹಣ ಇಲ್ಲ, ಬೆಳಗ್ಗೆ ಬ್ಯಾಂಕ್ ತೆರೆಯುತ್ತಿದ್ದಂತೆ ಹಣ ಒದಗಿಸುವುದಾಗಿ ಮನವಿ ಮಾಡಿದ್ದಾರೆ.
ಅಪಹರಣಕಾರರು ಹಣ ಡ್ರಾ ಮಾಡಿದ ನಂತರ ಕರೆ ಮಾಡಲು ಫೋನ್ ನಂಬರ್ ನೀಡಿ, ಮುಂಜಾನೆ ಸುಮಾರು 4 ಗಂಟೆಗೆ ಅವರನ್ನು ಬಿಡುಗಡೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಬಳಿಕ ಅವರು ಅತ್ತಿಬೆಲೆ ಪೊಲೀಸ್ ಠಾಣೆಗೆ ತೆರಳಿ ಅಧಿಕೃತವಾಗಿ ದೂರು ನೀಡಿದ್ದಾರೆ.
ಘಟನೆ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ಲೊಕೇಶನ್ ಹಾಗೂ ಮಾರ್ಗಗಳ ಪರಿಶೀಲನೆ ನಡೆಯುತ್ತಿದೆ.