ಹೊಸದಿಲ್ಲಿ: ಫೆಬ್ರವರಿ ತಿಂಗಳು ದೇಶದ ಆರ್ಥಿಕತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ತಿಂಗಳಾಗಿದೆ. ಫೆಬ್ರವರಿ 1 ದೇಶದ ಕೋಟ್ಯಂತರ ಜನರ ಆರ್ಥಿಕ ಭವಿಷ್ಯ ನಿರ್ಧಾರವಾಗುವ ದಿನ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಂದು ಸಂಸತ್ತಿನಲ್ಲಿ 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಇದರೊಂದಿಗೆ ಫಾಸ್ಟ್‌ಟ್ಯಾಗ್, ಎಲ್‌ಪಿಜಿ ದರ ಮತ್ತು ಷೇರು ಮಾರುಕಟ್ಟೆಯ ನಿಯಮಗಳಲ್ಲಿ ಭಾರೀ ಬದಲಾವಣೆಗಳಾಗಲಿವೆ.
1. ಸತತ 9ನೇ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್
ಫೆಬ್ರವರಿ 1ರಂದು ನಿರ್ಮಲಾ ಸೀತಾರಾಮನ್ ಅವರು ಸತತ 9ನೇ ಬಾರಿ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಲಿದ್ದಾರೆ. ಪ್ರಸ್ತುತ ಹೊಸ ತೆರಿಗೆ ಪದ್ಧತಿಯಡಿ 12.75 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಇದೆ. ಈ ಬಾರಿ ಮಧ್ಯಮ ವರ್ಗದ ಜನರಿಗೆ ಆದಾಯ ತೆರಿಗೆ ಮಿತಿಯಲ್ಲಿ ಮತ್ತಷ್ಟು ಸಡಿಲಿಕೆ ಸಿಗುತ್ತದೆಯೇ ಅಥವಾ ಹೂಡಿಕೆದಾರರಿಗೆ ಹೊಸ ಕೊಡುಗೆಗಳು ಲಭಿಸಲಿವೆಯೇ ಎಂಬ ಕುತೂಹಲ ಮೂಡಿದೆ. ಬೆಳಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಬಜೆಟ್ ಭಾಷಣ ಆರಂಭವಾಗಲಿದೆ.
2. ತಂಬಾಕು ಪ್ರಿಯರಿಗೆ ತೆರಿಗೆ ಶಾಕ್
ಫೆಬ್ರವರಿ 1ರಿಂದ ಪಾನ್ ಮಸಾಲಾ, ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಬೆಲೆ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆಯಿದೆ. ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಸರ್ಕಾರ ಇವುಗಳ ಮೇಲೆ ಹೆಚ್ಚುವರಿ ಜಿಎಸ್‌ಟಿ (GST) ಮತ್ತು ಅಬಕಾರಿ ಸುಂಕ ವಿಧಿಸಲು ಚಿಂತಿಸಿದೆ. ಇದರಿಂದಾಗಿ ಈ ಉತ್ಪನ್ನಗಳ ಮೇಲೆ ಹೆಚ್ಚಿನ ಸೆಸ್ ವಿಧಿಸಲಾಗುತ್ತಿದ್ದು, ಇವುಗಳ ಬೆಲೆ ಸಾಮಾನ್ಯ ಜನರಿಗೆ ಹೊರೆಯಾಗಲಿದೆ.
3. ಫಾಸ್ಟ್‌ಟ್ಯಾಗ್ ಸವಾರರಿಗೆ ಸಿಹಿ ಸುದ್ದಿ
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವಾಹನ ಸವಾರರಿಗೆ ಒಂದು ದೊಡ್ಡ ರಿಲೀಫ್ ನೀಡಿದೆ. ಫೆಬ್ರವರಿ 1ರಿಂದ ಫಾಸ್ಟ್‌ಟ್ಯಾಗ್ (FASTag) ಅಪ್‌ಡೇಟ್ ಮಾಡಲು ಪದೇ ಪದೇ ಕೆವೈಸಿ (KYC) ಮಾಡಿಸುವ ಕಿರಿಕಿರಿ ಇರುವುದಿಲ್ಲ. ಒಮ್ಮೆ ಫಾಸ್ಟ್‌ಟ್ಯಾಗ್ ಆಕ್ಟಿವೇಟ್ ಆದ ನಂತರ, ವಾಹನದ ಮಾಹಿತಿಯನ್ನು ಆಯಾ ಬ್ಯಾಂಕ್‌ಗಳೇ ಪರಿಶೀಲಿಸುತ್ತವೆ. ಇದರಿಂದ ಗ್ರಾಹಕರು ಪದೇ ಪದೇ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ.
4. ಭಾನುವಾರವೂ ತೆರೆದಿರಲಿದೆ ಷೇರುಪೇಟೆ
ಸಾಮಾನ್ಯವಾಗಿ ಭಾನುವಾರ ಷೇರು ಮಾರುಕಟ್ಟೆಗೆ ರಜೆಯಿರುತ್ತದೆ. ಆದರೆ ಫೆಬ್ರವರಿ 1 ಬಜೆಟ್ ದಿನವಾದ್ದರಿಂದ, ಹೂಡಿಕೆದಾರರ ಅನುಕೂಲಕ್ಕಾಗಿ BSE ಮತ್ತು NSE ಮಾರುಕಟ್ಟೆಗಳು ಅಂದು ಕಾರ್ಯನಿರ್ವಹಿಸಲಿವೆ. ಬೆಳಗ್ಗೆ 9:15 ರಿಂದ ಸಂಜೆ 3:30 ರವರೆಗೆ ವಹಿವಾಟು ನಡೆಯಲಿದ್ದು, ಬಜೆಟ್ ಘೋಷಣೆಗಳ ಆಧಾರದ ಮೇಲೆ ಮಾರುಕಟ್ಟೆಯಲ್ಲಿ ಭಾರೀ ಏರಿಳಿತಗಳನ್ನು ನಿರೀಕ್ಷಿಸಬಹುದು.
5. ಎಲ್‌ಪಿಜಿ ಮತ್ತು ಇಂಧನ ದರ ಪರಿಷ್ಕರಣೆ
ಪ್ರತಿ ತಿಂಗಳ ಮೊದಲ ದಿನದಂತೆ ಫೆಬ್ರವರಿ 1 ರಂದು ಅಡುಗೆ ಅನಿಲ (LPG) ಬೆಲೆಗಳು ಬದಲಾಗಲಿವೆ. ಕಳೆದ ತಿಂಗಳು ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿತ್ತು, ಈ ಬಾರಿ ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗುತ್ತದೆಯೇ ಎಂಬುದನ್ನ ಕಾದು ನೋಡಬೇಕಿದೆ. ಇದಲ್ಲದೆ ವಿಮಾನ ಇಂಧನ (ATF), ಸಿಎನ್‌ಜಿ (CNG) ಮತ್ತು ಪಿಎನ್‌ಜಿ (PNG) ದರಗಳೂ ಪರಿಷ್ಕರಣೆಯಾಗಲಿದ್ದು, ಇದು ಸಾರಿಗೆ ಮತ್ತು ಅಡುಗೆ ವೆಚ್ಚದ ಮೇಲೆ ನೇರ ಪರಿಣಾಮ ಬೀರಲಿದೆ.
