ರಾಜ್ಯಪಾಲರ ಸಹಿ ನಕಲು ಪ್ರಕರಣ: ಸುಜಯೇಂದ್ರ ವಿರುದ್ಧ ಮತ್ತೊಂದು ಎಫ್‌ಐಆರ್

ಸುಜಯೇಂದ್ರ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಆಪ್ತನೆಂದು ಹೇಳಿಕೊಂಡು ಪ್ರಭಾವ ಬಳಸಿ ವಂಚನೆ ನಡೆಸುತ್ತಿದ್ದಾನೆ ಎನ್ನಲಾದ ಸುಜಯೇಂದ್ರ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಈ ಬಾರಿ ರಾಜ್ಯಪಾಲರ ಸಹಿಯನ್ನು ನಕಲಿ ಮಾಡಿ, ಅನಧಿಕೃತವಾಗಿ ಅಧಿಕೃತ ಪತ್ರ ರಚಿಸಿದ ಆರೋಪ ಸುಜಯೇಂದ್ರ ಮೇಲಿದೆ.

ರಾಜ್ಯಪಾಲರ ಹೆಸರಿನಲ್ಲಿ, ಅವರ ಸಹಿಯನ್ನು ನಕಲು ಮಾಡಿ ವಿಐಟಿಯು (VTU) ಕುಲಪತಿಗಳಿಗೆ ಪತ್ರ ಬರೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಈ ಪತ್ರದಲ್ಲಿ ವಿದ್ಯಾರ್ಥಿಯೊಬ್ಬರಿಗೆ ಸೀಟ್ ಮಂಜೂರು ಮಾಡುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. 2025ರಲ್ಲಿ ಈ ನಕಲಿ ಪತ್ರ ರಚನೆಯಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಅಲ್ಲದೆ, ರಾಜ್ಯಪಾಲರ ಕಾರ್ಯಾಲಯದ ಹೆಸರಿನಲ್ಲಿ ಅನಧಿಕೃತ ಆದೇಶಗಳನ್ನು ಹೊರಡಿಸಿದ್ದ ಆರೋಪವೂ ಸುಜಯೇಂದ್ರ ವಿರುದ್ಧ ಕೇಳಿಬಂದಿದೆ.

ಈ ಸಂಬಂಧ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರದೀಪ್ ಅವರು ವಿಧಾನಸೌಧ ಪೊಲೀಸ್ ಠಾಣೆಗೆ ಅಧಿಕೃತ ದೂರು ದಾಖಲಿಸಿದ್ದಾರೆ. ಲೋಕಭವನದ ಲೆಟರ್‌ಹೆಡ್ ಅನ್ನು ಯಾವುದೇ ಅನುಮತಿಯಿಲ್ಲದೆ ದುರುಪಯೋಗ ಮಾಡಿಕೊಂಡು, ರಾಜ್ಯಪಾಲರ ನಕಲಿ ಸಹಿಯನ್ನು ಬಳಸಿ ಪತ್ರವ್ಯವಹಾರ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣದ ತನಿಖೆಯನ್ನು ಬಳಿಕ ವಿಧಾನಸೌಧ ಠಾಣೆಯಿಂದ ವಿಜಯನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಸುಜಯೇಂದ್ರ ವಿರುದ್ಧ ಇದು ಮೊದಲ ಪ್ರಕರಣವಲ್ಲ. ಈ ಹಿಂದೆ ಜಮ್ಮು-ಕಾಶ್ಮೀರ ಮೂಲದ ವೈದ್ಯರೊಬ್ಬರನ್ನು 2.5 ಕೋಟಿ ರೂಪಾಯಿ ವಂಚನೆ ಮಾಡಿದ್ದ ಆರೋಪದಲ್ಲೂ ಸುಜಯೇಂದ್ರ ಹೆಸರು ಕೇಳಿಬಂದಿತ್ತು. ಆ ಪ್ರಕರಣದಲ್ಲಿ ವಿಜಯನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ತನಿಖೆ ವೇಳೆ ಆರ್‌ಪಿಸಿ ಲೇಔಟ್‌ನಲ್ಲಿರುವ ಸುಜಯೇಂದ್ರ ನಿವಾಸದ ಮೇಲೆ ದಾಳಿ ನಡೆಸಲಾಗಿದ್ದು, ಹಲವಾರು ಅನುಮಾನಾಸ್ಪದ ಪತ್ರಗಳು, ದಾಖಲೆಗಳು ಮತ್ತು ಲೆಟರ್‌ಹೆಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ಈ ದಾಳಿಯ ನಂತರ, ವಿಜಯನಗರ ಪೊಲೀಸರು ಗೃಹ ಸಚಿವಾಲಯ (MHA) ಹಾಗೂ ಲೋಕಭವನಕ್ಕೆ ಅಧಿಕೃತ ಪತ್ರ ಬರೆದು ಮಾಹಿತಿ ಕೋರಿದ್ದರು. ಈ ವೇಳೆ ಲೋಕಭವನದ ಲೆಟರ್‌ಹೆಡ್ ಅನ್ನು ಸುಜಯೇಂದ್ರ ಅನಧಿಕೃತವಾಗಿ ಬಳಸಿರುವುದು ಸ್ಪಷ್ಟವಾಗಿದೆ. ಆರೋಪಿಯ ಮನೆ ವಿಜಯನಗರ ಠಾಣಾ ವ್ಯಾಪ್ತಿಯಲ್ಲಿರುವುದರಿಂದ, ಈ ಹೊಸ ಪ್ರಕರಣವನ್ನೂ ಅದೇ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಪೊಲೀಸರು ಇದೀಗ ನಕಲಿ ಪತ್ರಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಸುಜಯೇಂದ್ರಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ಪ್ರಕರಣದ ತನಿಖೆ ಬಹುಮಟ್ಟದಲ್ಲಿ ವಿಸ್ತರಿಸಲಾಗಿದ್ದು, ಸುಜಯೇಂದ್ರ ಒಬ್ಬನೇ ಈ ಕೃತ್ಯ ನಡೆಸಿದ್ದಾನೋ ಅಥವಾ ಇದಕ್ಕೆ ಇನ್ನಾರಾದರೂ ಸಹಕಾರ ನೀಡಿದ್ದಾರೋ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

Exit mobile version