ಮಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಕುರ್ಚಿ ಗುದ್ದಾಟ ಮುಂದುವರೆದಿದೆ. ಕಾಂಗ್ರೆಸ್ ಹೈಕಮಾಂಡ್‌ನಿಂದ ಯಾವ ಕ್ಷಣದಲ್ಲಿ, ಯಾವ ಸಂದೇಶ ಬರುತ್ತದೆ ಎಂಬ ಆತಂಕದ ನಡುವೆಯೇ ಸಿಎಂ ಸಿದ್ದರಾಮಯ್ಯ ಅವರು ಮಂಗಳೂರಿನಲ್ಲಿ ಪಕ್ಷದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾಗಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದ ಗೆಸ್ಟ್ ಹೌಸ್ ‘ಕಾವೇರಿ’ಯಲ್ಲಿ ಮಂಗಳವಾರ ನಡೆದ ಮೀಟಿಂಗ್ ಇಡೀ ರಾಜ್ಯ ರಾಜಕಾರಣವನ್ನೇ ಬಿಸಿ ಮಾಡಿದೆ. ಸುಮಾರು ಅರ್ಧ ಗಂಟೆ ಕಾಲ ನಡೆದ ಈ ಏಕಾಂತ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆ.ಸಿ. ವೇಣುಗೋಪಾಲ್ ಮಾತ್ರ ಇದ್ದರು.
ಸಭೆಯಲ್ಲಿ ಸಿದ್ದರಾಮಯ್ಯ ಅವರು ಮಾತನಾಡಿದ್ದು, “ನಾನು ಡಿ.ಕೆ. ಶಿವಕುಮಾರ್ ಅವರೊಂದಿಗೆ ಈಗಾಗಲೇ ಮಾತಾಡಿದ್ದೇನೆ. ರಾಜ್ಯದ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್‌ಗೆ ಪೂರ್ತಿ ಮಾಹಿತಿ ನೀಡಿದ್ದೇನೆ.” “ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಂಡರೂ ನನಗೆ ಒಪ್ಪಿಗೆ. ಆದರೆ ಮುಂದೆ 2028ರ ವಿಧಾನಸಭೆ ಚುನಾವಣೆ ಇದೆ. ಆತುರದ ನಿರ್ಧಾರದಿಂದ ಪಕ್ಷಕ್ಕೆ ಧಕ್ಕೆ ಬರಬಾರದು.” “ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿದ್ದೇವೆ. ಈ ಸಾಧನೆಯ ಮೇಲೆಯೇ ಮುಂದಿನ ಚುನಾವಣೆ ಎದುರಿಸಬೇಕು. ಈ ಹೊತ್ತಲ್ಲಿ ನಾಯಕತ್ವ ಬದಲಾವಣೆ ಪಕ್ಷಕ್ಕೆ ಹಿನ್ನಡೆ ತರಬಹುದು” ಎಂದು ಹೇಳಿದ್ದಾರೆ.
ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಕೆ.ಸಿ. ವೇಣುಗೋಪಾಲ್ ಅವರು ಸ್ಪಷ್ಟ ಸಂದೇಶ ನೀಡಿದ್ದಾರೆ. “ವರಿಷ್ಠ ನಾಯಕರು ರಾಜ್ಯದ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ.” “ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಒಗ್ಗಟ್ಟಾಗಿ ಕೆಲಸ ಮಾಡಬೇಕು. ನಿಮ್ಮ ಹಿಂದಿನ ಶಾಸಕರು ಕೂಡ ಒಗ್ಗಟ್ಟಾಗಿರಬೇಕು.” “ನಿಮ್ಮ ನಡುವೆ ಭಿನ್ನಾಭಿಪ್ರಾಯ ತೋರಿದರೆ ಅದನ್ನೇ ಬಿಜೆಪಿ-ಜೆಡಿಎಸ್ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತವೆ. ಅಂತಹ ಅವಕಾಶ ನೀಡಬೇಡಿ.” “ನಾಯಕತ್ವ ಬದಲಾವಣೆಯಾಗಬೇಕೇ, ಸಿದ್ದರಾಮಯ್ಯ ಮುಂದುವರಿಯಬೇಕೇ, ಅಂತಿಮ ನಿರ್ಧಾರ ಹೈಕಮಾಂಡ್ ತೆಗೆದುಕೊಳ್ಳುತ್ತದೆ.” “ಈಗಿನ ಗಮನ ಸಂಪೂರ್ಣವಾಗಿ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಮೇಲಿರಲಿ. ಮುಂದಿನ ಚುನಾವಣೆ ಗ್ಯಾರಂಟಿಗಳ ಮೇಲೇ ನಿಂತಿದೆ ಎಂದು ತಿಳಿಸಿದರು.
ಕಳೆದ ಕೆಲವು ತಿಂಗಳುಗಳಿಂದ ಡಿ.ಕೆ. ಶಿವಕುಮಾರ್ ಪಡೆಯು ಒತ್ತಡ ಹೆಚ್ಚಾಗಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೇ “ಎರಡೂವರೆ ವರ್ಷ ಸಿದ್ದರಾಮಯ್ಯ ಅಧಿಕಾರ, ಎರಡೂವರೆ ವರ್ಷ ಡಿಕೆ ಶಿವಕುಮಾರ್ ಅಧಿಕಾರ” ಫಾರ್ಮುಲಾ ಇದೆ ಎಂಬ ಮಾತುಗಳು ಹರಿದಾಡಿದ್ದವು. ಆದರೆ ಸಿದ್ದರಾಮಯ್ಯ ಅದನ್ನು ಸಂಪೂರ್ಣವಾಗಿ ತಳ್ಳಿಹಾಕಿ, ಐದು ವರ್ಷ ಪೂರ್ತಿ ತಾವೇ ಸಿಎಂ ಆಗಿರುತ್ತೇನೆ ಎಂಬ ದೃಢ ನಿಲುವಿನಲ್ಲಿದ್ದಾರೆ.
