ಮುನಿರತ್ನಗೆ ಕೇಂದ್ರದ ಮೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕು: ಡಿ.ಕೆ ಸುರೇಶ್‌

1111

ರಾಜ್ಯ ರಾಜಕೀಯದಲ್ಲಿ ಡಿಕೆ ಶಿವಕುಮಾರ್ ಮತ್ತು ಮುನಿರತ್ನ ನಡುವೆ ವಾಕ್ಸಮರ ತಾರಕಕ್ಕೇರಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಡಿ.ಕೆ. ಸುರೇಶ್‌ ಮುನಿರತ್ನಗೆ ತಿರುಗೇಟು ನೀಡಿದ್ದಾರೆ. 

ಮುನಿರತ್ನ, ಡಿಕೆ ಶಿವಕುಮಾರ್ ವಿರುದ್ಧ ತೀವ್ರ ಮಾತುಗಳನ್ನು ಬಳಸಿದ್ದು, ಇದಕ್ಕೆ ಡಿಕೆ ಸುರೇಶ್‌‌ ಪ್ರತಿಕ್ರಿಯೆ ನೀಡಿದ್ದು, “ಅವನು ಎಂಥಾ ಚೆಂಗ್ಲು ಅಂತ ನಾನು ದಾಖಲೆ ಸಮೇತ ಬಿಡುಗಡೆ ಮಾಡ್ತೀನಿ” ಎಂದು ಘೋಷಿಸಿದ್ದಾರೆ. ಮಂಗಳವಾರ ಎಲ್ಲಾ ದಾಖಲೆಗಳ ಸಮೇತ ಸತ್ಯ ಬಹಿರಂಗಪಡಿಸುತ್ತೇನೆ ಎಂದಿದ್ದಾರೆ.

 “ಆಸಿಡ್ ಮೊಟ್ಟೆ ತಲೆಗೆ ಬಿದ್ದು ಅವನು ಮೆಂಟಲ್ ಆಗಿದ್ದಾನೆ. “ಡಾಕ್ಟರೇ ಕೂಡ ಅವನು ಟ್ರೀಟ್ಮೆಂಟ್ ಬೇಕು ಅಂತ ಹೇಳಿದ್ರು. ರಾಜ್ಯದ ಹುಚ್ಚು ಆಸ್ಪತ್ರೆಯಲ್ಲಿ ಸರಿ ಆಗೋದು ಇಲ್ವಾ, ಮುನಿರತ್ನಗೆ ಪ್ರಧಾನಿ ಚಿಕಿತ್ಸೆ ಪಡೆಯುವ ಆಸ್ಪತ್ರೆಯಲ್ಲಿ‌ ಟ್ರೀಟ್ಮೆಂಟ್ ಕೊಡಿಸಬೇಕು” ಎಂದು ಮುನಿರತ್ನ ವಿರುದ್ಧ ಮಾಜಿ ಸಂಸದ ಡಿ.ಕೆ. ಸುರೇಶ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಕೆಶಿ ನಿಜವಾದ ಚಂಗ್ಲು: ಮುನಿರತ್ನ ತಿರುಗೇಟು

ರಾಜ್ಯ ರಾಜಕೀಯದಲ್ಲಿ ವಾಕ್ಸಮರ ತಾರಕಕ್ಕೇರಿದೆ. ಶಾಸಕ ಮುನಿರತ್ನ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಬಳಿಕ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮುನಿರತ್ನ ನಡುವೆ ತಿಕ್ಕಾಟ ತೀವ್ರಗೊಂಡಿದೆ. ಇತ್ತೀಚಿನ ವಾಗ್ವಾದದಲ್ಲಿ ಮುನಿರತ್ನ, ಡಿಕೆಶಿಯನ್ನು ತೀವ್ರವಾಗಿ ಟೀಕಿಸಿ, “ನಿಜವಾದ ಚಂಗ್ಲು ಎಂದರೆ ಡಿಕೆ ಶಿವಕುಮಾರ್” ಎಂದು ಕಿಡಿಕಾರಿದ್ದಾರೆ.

ಮುನಿರತ್ನರಿಂದ ಡಿಕೆಶಿಗೆ ಲೇವಡಿ

ಕಾಂಗ್ರೆಸ್ ತೊರೆದ ಬಳಿಕ ತಾನು ಚೆನ್ನಾಗಿದ್ದೇನೆ ಎಂದು ಹೇಳಿರುವ ಮುನಿರತ್ನ, ಕಾಂಗ್ರೆಸ್‌ನಲ್ಲಿದ್ದಾಗ ಡಿಕೆಶಿಯ ಕೆಲವು ಕೆಲಸಗಳನ್ನು ತೀವ್ರವಾಗಿ ಟೀಕಿಸಿದ್ದಾರೆ. “ಕಾಂಗ್ರೆಸ್‌ನಲ್ಲಿದ್ದುಕೊಂಡು ಅಮಿತ್ ಶಾ ಅವರನ್ನು ಭೇಟಿಯಾಗುವುದು, ಪ್ರಯಾಗರಾಜಕ್ಕೆ ಹೋಗುವುದು, ಗಂಗಾ ನದಿಯಲ್ಲಿ ಮುಳುಗುವುದು, ಪಿಎಂ ಬಂದಾಗ ಕಾರ್ಯಕರ್ತರಂತೆ ಬೊಕ್ಕೆ ಹಿಡಿದು ಸ್ವಾಗತಿಸಲು ಲೈನ್‌ನಲ್ಲಿ ನಿಲ್ಲುವುದು—ಇದೆಲ್ಲ ಡಿಕೆಶಿಯ ಕೆಲಸವೇ? ಇದು ನಿಜವಾದ ಚಂಗ್ಲುಗಿರಿಯಲ್ಲವೇ?” ಎಂದು ವ್ಯಂಗ್ಯವಾಡಿದ್ದಾರೆ.

ಇದೇ ವೇಳೆ, ಆರ್‌ಆರ್ ನಗರದಲ್ಲಿ ರಸ್ತೆ ಗುಂಡಿ ಮುಚ್ಚಲು ಡಿಕೆಶಿ ಗುದ್ದಲಿ ಪೂಜೆ ಮಾಡಿದ್ದನ್ನು ತಮಾಷೆಯಾಗಿ ಟೀಕಿಸಿದ ಮುನಿರತ್ನ, “ಇದನ್ನು ಶೋಲೆ ಚಿತ್ರದಂತೆ ಫ್ಲೆಕ್ಸ್ ಕಟ್ಟಿಸಿದ್ದಾರೆ. ಅಮಿತಾಬ್ ಬಚ್ಚನ್, ಗಬ್ಬರ್ ಸಿಂಗ್, ಧರ್ಮೇಂದ್ರ, ಹೇಮಾಮಾಲಿನಿಯಂತೆ ಪೋಸ್ ಕೊಟ್ಟು ಫ್ಲೆಕ್ಸ್‌ಗಳನ್ನು ಅಳವಡಿಸಿದ್ದಾರೆ. ಒಬ್ಬರು ಗಬ್ಬರ್ ಸಿಂಗ್‌ನಂತೆ, ಇನ್ನೊಬ್ಬರು ಹೇಮಾಮಾಲಿನಿಯಂತೆ ಕಾಣುತ್ತಿದ್ದಾರೆ” ಎಂದು ಕಟುವಾಗಿ ಲೇವಡಿ ಮಾಡಿದ್ದಾರೆ.

ಆಣೆ ಪ್ರಮಾಣಕ್ಕೆ ಸವಾಲ್

ಮುನಿರತ್ನ, ಡಿಕೆಶಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. “ನನ್ನ ಮೇಲೆ ಸುಳ್ಳು ಅತ್ಯಾಚಾರ ಕೇಸು ಹಾಕಿಸಿ, ರಾಜಕೀಯವಾಗಿ ಮುಗಿಸಲು ಡಿಕೆಶಿ ಷಡ್ಯಂತ್ರ ರೂಪಿಸಿದ್ದರು. ಎಚ್‌ಐವಿ ಇಂಜೆಕ್ಷನ್ ಕಥೆ ಕಟ್ಟಿ ಸುಳ್ಳು ಕೇಸು ಹಾಕಿಸಿದ್ದು ಎಲ್ಲರಿಗೂ ಗೊತ್ತು” ಎಂದು ಆರೋಪಿಸಿದ್ದಾರೆ.

ಇದರ ಜೊತೆಗೆ, ಡಿಕೆಶಿಗೆ ಸವಾಲ್ ಎಸೆದಿರುವ ಮುನಿರತ್ನ, “ದೈವ ಭಕ್ತರಾಗಿರುವ ನೀವು, ನಿಮ್ಮ ಕುಟುಂಬವನ್ನು ಕರೆದುಕೊಂಡು ಬನ್ನಿ. ನಾನೂ ನನ್ನ ಕುಟುಂಬದೊಂದಿಗೆ ಬರುತ್ತೇನೆ. ನಾನು ಅತ್ಯಾಚಾರ ಮಾಡಿಲ್ಲ ಎಂದು ಆಣೆ ಮಾಡುತ್ತೇನೆ. ನೀವು ಅತ್ಯಾಚಾರ ಆರೋಪ ನಿಜ ಎಂದು ಪ್ರಮಾಣ ಮಾಡಿ” ಎಂದು ತಿರುಗೇಟು ನೀಡಿದ್ದಾರೆ.

ದ್ವೇಷ ರಾಜಕಾರಣ ಬಿಟ್ಟು ಪ್ರೀತಿಸಿ

ಮುನಿರತ್ನ, ಡಿಕೆಶಿಯ ರಾಜಕೀಯ ಶೈಲಿಯನ್ನು ಖಂಡಿಸಿ, “ದ್ವೇಷ ರಾಜಕಾರಣ ಬಿಟ್ಟು, ನ್ಯಾಯಯುತವಾಗಿ ಆಡಳಿತ ನಡೆಸಿ. ಎಲ್ಲರ ಜೊತೆ ಸೌಹಾರ್ದಯುತವಾಗಿರುವುದನ್ನು ಕಲಿಯಿರಿ. ಈಗಾಗಲೇ 60 ವರ್ಷವಾಗಿದೆ. ನಿಮಗೆ 60% ಕಿಡ್ನಿ ಹಾಳಾಗಿದೆ, ನನಗೂ ಹಾಗೆಯೇ. ಮಾತ್ರೆ ಇಲ್ಲದೆ ನಾವಿಬ್ಬರೂ ಬದುಕಲಾರೆವು. ದ್ವೇಷವನ್ನು ಬಿಟ್ಟು, ಆದಷ್ಟು ಪ್ರೀತಿಯಿಂದ ಇರಿ” ಎಂದು ಸಂದೇಶ ನೀಡಿದ್ದಾರೆ.

Exit mobile version