ಕನ್ನಡ ಸಾಹಿತ್ಯ ಲೋಕಕ್ಕೆ ಇಂದು ದೊಡ್ಡ ಶೂನ್ಯವೊಂದು ಸೃಷ್ಟಿಯಾಗಿದೆ. ಹಿರಿಯ ಸಾಹಿತಿ, ಚಿಂತಕ, ಕಥೆಗಾರ, ಕಾದಂಬರಿಕಾರ, ಪ್ರಬಂಧಕಾರ, ವೈಚಾರಿಕ ವಿಮರ್ಶಕ ಡಾ. ಮೊಗಳ್ಳಿ ಗಣೇಶ್ ಅವರು ಭಾನುವಾರ (ಅಕ್ಟೋಬರ್ 5, 2025) ಮುಂಜಾನೆ ನಿಧನರಾಗಿದ್ದಾರೆ. 62 ವರ್ಷ ವಯಸ್ಸಿನ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಅಸ್ವಸ್ಥರಾಗಿದ್ದು, ಬೆಳಗ್ಗೆ 7:30ರ ಸುಮಾರು ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ. ಸಾಹಿತ್ಯ ಲೋಕದ ಗಣ್ಯರು ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಡಾ. ಮೊಗಳ್ಳಿ ಗಣೇಶ್ ಅವರು 1963ರ ಜುಲೈ 1 ರಂದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸಂತೆಗೇನ ಹಳ್ಳಿಯಲ್ಲಿ ಜನಿಸಿದರು. ಮೈಸೂರು ಮಹಾರಾಜಾ ಕಾಲೇಜ್‌ನಲ್ಲಿ ಅರ್ಥಶಾಸ್ತ್ರದಲ್ಲಿ ಪದವೀ ಧರಿಸಿದ ಅವರು, ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸಣ್ಣ ಕಥೆಗಾರರಾಗಿ ಗುರುತಿಸಿಕೊಂಡರು. ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಕಥೆಗಳು ನಾಲ್ಕು ಬಾರಿ ಬಹುಮಾನ ಪಡೆದಿವೆ. ಕನ್ನಡ ಕಥನ ಪರಂಪರೆಗೆ ಹೊಸತನ ನೀಡಿದ ಅವರು, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಅಲ್ಲದೆ, ಜಾನಪದ ವಿಭಾಗದ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದರು.
ಪ್ರಮುಖ ಕೃತಿಗಳು
ಡಾ. ಮೊಗಳ್ಳಿ ಗಣೇಶ್ ಅವರ ಕೃತಿಗಳು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ. ಅವರ ಪ್ರಮುಖ ಕೃತಿಗಳು: ಸೂರ್ಯನನ್ನು ಬಚ್ಚಿಡಬಹುದೇ? (ಕವನ ಸಂಕಲನ), ಬುಗುರಿ, ಭೂಮಿ, ದೇವರದಾರಿ (ಕಥಾ ಸಂಕಲನಗಳು), ತೊಟ್ಟಿಲು (ಕಾದಂಬರಿ), ಕಥನ (ಪ್ರಬಂಧ ಸಂಕಲನ), ಸೊಲ್ಲು (ಸಾಂಸ್ಕೃತಿಕ ವಿಮರ್ಶೆ). ಇವುಗಳಲ್ಲಿ ಗ್ರಾಮೀಣ ಜೀವನ, ಜಾನಪದ ಸಂಸ್ಕೃತಿ, ಸಾಮಾಜಿಕ ವಿಷಯಗಳು ಅವರ ವೈಚಾರಿಕತೆಯನ್ನು ಪ್ರತಿಬಿಂಬಿಸುತ್ತವೆ.
ಪ್ರಶಸ್ತಿ ಮತ್ತು ಗೌರವಗಳು
ಆದಿಮ ಎಂಬ ಸಂಶೋಧನಾ ಕೃತಿಗೆ ಡಾಕ್ಟರೇಟ್ ಪಡೆದ ಅವರು, ದೇವರ ದಾರಿ ಕೃತಿಗೆ ಡಾ. ಪಂಚಾಕ್ಷರ ಗವಾಯಿಗಳ ಪ್ರಶಸ್ತಿ, ಮಾಸ್ತಿ ಕಥಾ ಪ್ರಶಸ್ತಿ, ತಕರಾರು ವಿಮರ್ಶೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ದೊರೆತಿವೆ. ಅವರ ಕೃತಿಗಳು ಕನ್ನಡ ಕಥನ ಮತ್ತು ಜಾನಪದ ಅಧ್ಯಯನಕ್ಕೆ ಹೊಸ ಆಯಾಮ ನೀಡಿವೆ.
ಸಾಹಿತ್ಯ ಲೋಕದ ಕಂಬನಿ
ಹಿರಿಯ ಸಾಹಿತಿಗಳು, ಚಿಂತಕರು ಡಾ. ಮೊಗಳ್ಳಿ ಗಣೇಶ್ ಅವರ ನಿಧನವನ್ನು ಕಡುದುಃಖದಿಂದ ಸ್ಮರಿಸುತ್ತಿದ್ದಾರೆ. ಅವರ ಕೃತಿಗಳು ಮತ್ತು ವೈಚಾರಿಕತೆಯು ಕನ್ನಡ ಸಾಹಿತ್ಯದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಸಾಹಿತ್ಯ ಪ್ರೇಮಿಗಳು ಅವರ ಕೃತಿಗಳನ್ನು ಮತ್ತೆ ಓದಿ ಗೌರವ ಸಲ್ಲಿಸುವಂತೆ ಕರೆ ನೀಡಿದ್ದಾರೆ.