ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಯುವ ಗೃಹಿಣಿಯೊಬ್ಬಳು ಗುರುವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತೆ ವಂದನಾ (23) ಬೆಟ್ಟದಾಸನಪುರದ ನಿವಾಸಿಯಾಗಿದ್ದು, ಕಳೆದ ಮೂರು ವರ್ಷಗಳ ಹಿಂದೆ ವಿಕ್ರಂ ಶೇಷನ್ ಜೊತೆ ವಿವಾಹವಾಗಿತ್ತು. ದುರಂತದಲ್ಲಿ ವಂದನಾ ತನ್ನ ಮೂರು ತಿಂಗಳ ಮಗುವನ್ನು ತೊಟ್ಟಿಲಲ್ಲೇ ಬಿಟ್ಟು ಹೋಗಿದ್ದಾಳೆ.
ಪ್ರಕರಣದ ಹಿನ್ನೆಲೆ
ವಂದನಾ ಮತ್ತು ವಿಕ್ರಂ ಶೇಷನ್ ಮದುವೆಯಾದ 3 ವರ್ಷಗಳಿಂದ ಗಂಡ ಮತ್ತು ಅವನ ಕುಟುಂಬದವರು ನಿರಂತರವಾಗಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ವಿವಾಹದ ಸಮಯದಲ್ಲಿ ನೀಡಿದ್ದ ವರದಕ್ಷಿಣೆ ಸಾಕಾಗದೇ, ಇನ್ನಷ್ಟು ಹಣ ಮತ್ತು ಚಿನ್ನ ತರುವಂತೆ ಪತಿ ವಿಕ್ರಂ ಹಲವು ಬಾರಿ ಗಲಾಟೆ ಮಾಡುತ್ತಿದ್ದ. ಕಿರುಕುಳ ತಡೆಯಲಾರದೇ ವಂದನಾ ಹಿಂದೆಯೇ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಪೊಲೀಸರಿಂದ ರಾಜಿ ಸಂಧಾನ
ಪ್ರಕರಣ ವಿಚಾರಣೆ ವೇಳೆ ಪೊಲೀಸರು ಸುಮಾರು ಸಂಧಾನ ಮಾಡಲು ಪ್ರಯತ್ನಿಸಿದ್ದರು. ಗಂಡ ಮತ್ತು ಅವನ ಕುಟುಂಬಸ್ಥರಿಗೆ ಬುದ್ಧಿ ಹೇಳಲಾಗಿತ್ತು. ಆದರೆ ಈ ಸಂಧಾನ ವಿಫಲವಾಯಿತು. ಕಿರುಕುಳ ಮುಂದುವರಿದಿದ್ದು, ವಂದನಾ ಮಾನಸಿಕವಾಗಿ ತುಂಬಾ ಕುಗ್ಗಿದ್ದಳು.
ಸಾವಿನ ವಿವರ
ಗುರುವಾರ ಸಂಜೆ ವಂದನಾ ತನ್ನ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾಳೆ. ಈ ಘಟನೆ ಅನನುಮಾನಾಸ್ಪದವಾಗಿ ಕಂಡುಬಂದಿದ್ದು, ಸ್ಥಳೀಯ ಪೊಲೀಸರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಿಖರ ಕಾರಣವನ್ನು ತಿಳಿಯಲು ತನಿಖೆ ಮುಂದುವರಿದಿದೆ.
ಇದೇ ವೇಳೆ, ವಂದನಾ ಅವರ ಕುಟುಂಬಸ್ಥರು ಇದು ಸಹಜ ಸಾವು ಅಲ್ಲ, ಕೊಲೆ ಮಾಡಿ ಪತಿ ಮತ್ತು ಅವರ ಮನೆಯವರು ನೇಣು ಬಿಗಿದಿದ್ದಾರೆಂದು ಆರೋಪ ಮಾಡಿದ್ದಾರೆ. ಜೊತೆಗೆ ಪ್ರಕರಣವನ್ನು ಗಂಭೀರವಾಗಿ ತನಿಖೆ ಮಾಡುವಂತೆ ಹಾಗೂ “ನಮ್ಮ ಮಗಳಿಗೆ ನ್ಯಾಯ ಸಿಗಬೇಕು” ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
