ಹನಿಮೂನ್‌ ಹೋದ ದಂಪತಿ ಅರ್ಧದಲ್ಲೇ ವಾಪಸ್: ನವವಿವಾಹಿತೆ ಆತ್ಮಹತ್ಯೆಗೆ ಯತ್ನ

Untitled design 2025 12 25T162218.180

ಬೆಂಗಳೂರು: ಮದುವೆಯಾದ ಕೇವಲ ಒಂದೂವರೆ ತಿಂಗಳಾಗಿರುವ ನವವಿವಾಹಿತೆ, ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. 26 ವರ್ಷದ ಗಾನವಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದೀಗ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿದ್ದು, ಸಾವು–ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಗಾನವಿ ಹಾಗೂ ಸೂರಜ್ ಅವರ ವಿವಾಹವು ಕಳೆದ ಅಕ್ಟೋಬರ್ 29ರಂದು ನೆರವೇರಿತ್ತು. ಬಳಿಕ ಗಂಡನ ಮನೆಯವರಿಂದ ವರದಕ್ಷಿಣೆ ಹಾಗೂ ಚಿನ್ನಾಭರಣ ವಿಚಾರವಾಗಿ ಮಾನಸಿಕ ಕಿರುಕುಳ ಆರಂಭವಾಗಿದೆ ಎಂಬ ಗಂಭೀರ ಆರೋಪವನ್ನು ಗಾನವಿ ಕುಟುಂಬದವರು ಮಾಡಿದ್ದಾರೆ.

ಗಂಡನ ಮನೆಯವರ ಬೇಡಿಕೆಯಂತೆ ಅದ್ದೂರಿಯಾಗಿ ರಿಸೆಪ್ಷನ್ ಆಯೋಜಿಸಲಾಗಿತ್ತು. ನವೆಂಬರ್ 23ರಂದು ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿ ನಡೆದ ಈ ರಿಸೆಪ್ಷನ್‌ಗೆ ಗಾನವಿ ಕುಟುಂಬವು ಸುಮಾರು 40 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಈ ಕಾರ್ಯಕ್ರಮದ ಬಳಿಕ ದಂಪತಿ ಹತ್ತು ದಿನಗಳ ಶ್ರೀಲಂಕಾ ಹನಿಮೂನ್‌ಗೆ ತೆರಳಿದ್ದರು.

ಆದರೆ, ನಿಗದಿತ ಅವಧಿಗೂ ಐದು ದಿನ ಮೊದಲೇ ಭಾನುವಾರ ಪತಿ ಸೂರಜ್, ಗಾನವಿಯನ್ನು ಶ್ರೀಲಂಕಾದಿಂದ ವಾಪಸ್ ಬಂದಿದ್ದಾರೆ. ಹನಿಮೂನ್ ಪ್ರವಾಸದ ಮಧ್ಯೆ ಏನಾಯಿತು? ದಂಪತಿಯ ನಡುವೆ ಯಾವ ರೀತಿಯ ಸಮಸ್ಯೆ ಉಂಟಾಯಿತು? ಎಂಬ ಪ್ರಶ್ನೆಗಳು ಇದೀಗ ಕುಟುಂಬದವರಲ್ಲಿ ಮೂಡಿದೆ.

ಶ್ರೀಲಂಕಾ ಪ್ರವಾಸದ ವೇಳೆ ದಂಪತಿಯ ನಡುವೆ ತೀವ್ರ ಮನಸ್ತಾಪ ಉಂಟಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ, “ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ” ಎಂದು ಸೂರಜ್ ಕುಟುಂಬದವರು ಅವಾಜ್ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದಾದ ನಂತರ ಗಾನವಿಯ ಮೇಲೆ ವರದಕ್ಷಿಣೆ ಮತ್ತು ಒಡವೆಗಳಿಗಾಗಿ ನಿರಂತರ ಒತ್ತಡ ಹಾಗೂ ಕಿರುಕುಳ ನೀಡಲಾಗಿದೆ ಎನ್ನಲಾಗಿದೆ.

ಈ ಎಲ್ಲಾ ಮಾನಸಿಕ ಹಿಂಸೆಯಿಂದ ಮನನೊಂದ ಗಾನವಿ, ನಿನ್ನೆ ಮಧ್ಯಾಹ್ನ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಆರಂಭದಲ್ಲಿ ‘ಬ್ರೈಡ್ ಡೆಡ್’ ಸ್ಥಿತಿಯಲ್ಲಿದ್ದಾರೆ ಎಂದು ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಇದೀಗ ಗಾನವಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಗಾನವಿ ಕುಟುಂಬ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ, ಪತಿ ಸೂರಜ್, ಅತ್ತೆ ಜಯಂತಿ ಹಾಗೂ ಪತಿಯ ಅಣ್ಣ ಸಂಜಯ್ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಾಗಿದೆ.

Exit mobile version