ಮತಗಳ್ಳತನ ವಿರುದ್ಧ ಕ್ವಿಟ್ ವೋಟ್ ಚೋರಿ ಚಳುವಳಿ ಅಗತ್ಯ: ಸಿಎಂ ಡಿ.ಕೆ ಶಿವಕುಮಾರ್

ವೋಟ್

ಬೆಂಗಳೂರು, ಆ.09: “ದೇಶದಲ್ಲಿ ಮತಗಳ್ಳತನ ನಡೆಯುತ್ತಿದ್ದು, ಇದರ ವಿರುದ್ಧ ನಾವು ಕ್ವಿಟ್ ವೋಟ್ ಚೋರಿ ಚಳುವಳಿ ಮಾಡಬೇಕಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಕೆಪಿಸಿಸಿ ಕಚೇರಿ ಭಾರತ ಜೋಡೋ ಭವನದಲ್ಲಿ ಭಾನುವಾರ ನಡೆದ ಕ್ವಿಟ್ ಇಂಡಿಯಾ ದಿನ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

ಮತದಾನದ ಹಕ್ಕು, ಬದುಕಿನ ಹಕ್ಕು, ಹೀಗಾಗಿ ಅದನ್ನು ಉಳಿಸಿಕೊಳ್ಳಿ

“ನೀವು ಎಲ್ಲಾ ಕೆಲಸ ಬದಿಗಿಟ್ಟು ಮತಗಳ್ಳತನ ವಿರುದ್ಧ ಹೋರಾಟ ಮಾಡಿ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕು ಎಂದು ರಾಜ್ಯದ ಕಾರ್ಯಕರ್ತರಲ್ಲಿ ಮನವಿ ಮಾಡುವೆ. ರಾಜ್ಯದಲ್ಲಿ ಎಸ್ ಐಆರ್ ನಡೆಯುತ್ತಿದ್ದು, ರಾಜ್ಯದಲ್ಲಿ 1 ಕೋಟಿ ಮತದಾರರನ್ನು ಡಿಲೀಟ್ ಮಾಡಲು ಪ್ರಯತ್ನ ನಡೆಯುತ್ತಿದೆ. ನೀವು ನಿಮ್ಮ ಮತಗಳನ್ನು ಉಳಿಸಿಕೊಳ್ಳಬೇಕು. ಬದುಕಿಗಾಗಿ ಮತದಾನದ ಹಕ್ಕು ಉಳಿಸಿಕೊಳ್ಳಬೇಕು ಎಂದು ನಮ್ಮ ಕಾರ್ಯಕರ್ತರು ಹಾಗೂ ಬಿಎಲ್ಎ2ಗಳಿಗೆ ಮನವಿ ಮಾಡುತ್ತಿದ್ದೇವೆ. ನಾವು ಗ್ಯಾರಂಟಿ ಯೋಜನೆಗಳನ್ನು ಜನರಿಗಾಗಿ ನೀಡಿದ್ದು, ಮತದಾನದ ಹಕ್ಕು ಇಲ್ಲದವರಿಗೆ ಈ ಯೋಜನೆಗಳು ಲಭ್ಯವಾಗುವುದು ಕಷ್ಟವಾಗುತ್ತದೆ.

ಬಿಹಾರದಲ್ಲಿ ಈಗಾಗಲೇ ಮತದಾನದ ಹಕ್ಕು ಇರುವವರಿಗೆ ಮಾತ್ರ ಸರ್ಕಾರಿ ಯೋಜನೆ ನೀಡಲಾಗುತ್ತಿದೆ. ಹೀಗಾಗಿ ಎಲ್ಲರ ಮತದಾನದ ಹಕ್ಕನ್ನು ಉಳಿಸಬೇಕು. ಗಣತಿ ನಮೂನೆ ತುಂಬಿ ಹಿಂತಿರುಗಿಸಿ. ಎಲ್ಲರಿಗೂ ಬಿಎಲ್ಎ2 ಆಗಲು ಸಾಧ್ಯವಿಲ್ಲ. ನಿಮಗೆ ಸಿಕ್ಕಿರುವ ಅವಕಾಶವನ್ನು ಉಳಿಸಿಕೊಳ್ಳಬೇಕು. ರಾಹುಲ್ ಗಾಂಧಿ ಅವರನ್ನು ಈ ದೇಶದ ಪ್ರಧಾನಮಂತ್ರಿಯಾಗಲು ಇದು ಪೂರಕ ಹೆಜ್ಜೆಯಾಗಲಿದೆ ಎಂದರು.

“18 ವರ್ಷ ತುಂಬಿರುವ ಯುವಕರಿಗೆ ಫಾರಂ 6 ಮೂಲಕ ಮತದಾನದ ಹಕ್ಕನ್ನು ಪಡೆಯಲು ಮುಂದಾಗಿ. ಮತದಾನದ ಹಕ್ಕಿಲ್ಲ ಎಂದರೆ ನಿಮಗೆ ಧ್ವನಿ ಇರುವುದಿಲ್ಲ. ರಾಜೀವ್ ಗಾಂಧಿ ಅವರು ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಸಿದಾಗ ಎಲ್ಲ ವಿರೋಧ ಪಕ್ಷದವರು ವಿರೋಧಿಸಿದರು. ಆದರೆ ರಾಜೀವ್ ಗಾಂಧಿ ಅವರು 10ನೇ ತರಗತಿ ಪಾಸಾದ ವಿದ್ಯಾರ್ಥಿಗೆ ದೇಶ ಕಾಯುವ ಜವಾಬ್ದಾರಿ ನೀಡುತ್ತಿರುವಾಗ ಮತದಾನದ ಹಕ್ಕು ಯಾಕೆ ನೀಡಬಾರದು ಎಂದು ಪ್ರಶ್ನಿಸಿದ್ದರು” ಎಂದರು.

“ನಾನು ಮುಖ್ಯಮಂತ್ರಿಯಾಗಿದ್ದರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ಕಾರ್ಯಕರ್ತರಿದ್ದರೆ ಪಕ್ಷ, ಪಕ್ಷ ಇದ್ದರೆ ಸರ್ಕಾರ. ಇದನ್ನು ನಾವೆಲ್ಲರೂ ನೆನಪಿನಲ್ಲಿ ಇರಬೇಕು. ಅಧಿಕಾರ ತಾತ್ಕಾಲಿಕ ಎಂಬುದನ್ನು ಮರೆಯಬಾರದು. ಸ್ವಾತಂತ್ರ್ಯಕ್ಕೆ ಬೆಲ ಕಟ್ಟಲು ಆಗುವುದಿಲ್ಲ. ಸ್ವಾತಂತ್ರ್ಯ ಜೀವನದ ಉಸಿರು. ದೇಶದ ಸ್ವಾತಂತ್ರ್ಯಕ್ಕೆ ಮುನ್ನುಡಿ ಬರೆದ ಪವಿತ್ರವಾದ ದಿನ. ಕಾಂಗ್ರೆಸ್ ಕಚೇರಿ ಭಾರತ ಜೋಡೋ ಭವನದಲ್ಲಿ ಪವಿತ್ರವಾದ ಕಾರ್ಯಕ್ರಮ ಮಾಡುತ್ತಿದ್ದೇವೆ. ಅಂದು ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷವಾಕ್ಯ ಮೊಳಗಿತ್ತು, ಇಂದು ಸರ್ವಾಧಿಕಾರಿ ಮನಸ್ಥಿತಿ ಅಧಿಕಾರ ಬಿಟ್ಟು ತೊಲಗಿ ಎಂದು ಘೋಷವಾಕ್ಯ ಕೂಗಬೇಕಿದೆ. ಅಂದು ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು, ಇಂದು ಪ್ರತಿಭಟನೆ ನಮ್ಮ ಜನ್ಮಸಿದ್ಧ ಹಕ್ಕು ಎಂದು ಹೇಳಬೇಕಾಗಿದೆ. ಗಾಂಧಿಜಿ ಅವರ ನೇತೃತ್ವದಲ್ಲಿ ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಸಂಕಲ್ಪ ಮಾಡಿದ ದಿನ. ನೆಹರು, ಸರ್ದಾರ್ ಪಟೇಲ್, ಮೌಲಾನ ಅಬುಲ್ ಕಲಾಂ ಸೇರಿದಂತೆ ಎಲ್ಲಾ ನಾಯಕರು ಈ ಚಳುವಳಿಯಲ್ಲಿ ಹೆಜ್ಜೆ ಹಾಕಿದ್ದರು” ಎಂದು ಸ್ಮರಿಸಿದರು.

“ಜನಾರ್ದನ ಪೂಜಾರಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾಗ ನಮ್ಮನ್ನು ಗುಜರಾತಿಗೆ ಕರೆದುಕೊಂಡು ಹೋಗಿ ಬೆಳಗ್ಗೆ ಆ ಪವಿತ್ರವಾದ ಭೂಮಿಯಲ್ಲಿ ಹೆಜ್ಜೆ ಹಾಕಿದ್ದೆವು. ಹಿರಿಯರ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ವ್ಯವಸ್ಥೆ, ಸಮಾನತೆಯಿಂದ ಬಾಳುವ ಅವಕಾಶ ಸಿಕ್ಕಿದೆ. ಸಂವಿಧಾನವೇ ನಮಗೆ ಬೈಬಲ್, ಕುರಾನ್, ಭಗವದ್ಗೀತೆಯಾಗಿದೆ. ನನ್ನ ಹೆಗಲ ಮೇಲೆ ತ್ರಿವರ್ಣಧ್ವಜವಿದೆ. ಬೇರೆ ಯಾವುದೇ ಪಕ್ಷದ ನಾಯಕರು ಇದನ್ನು ಹಾಕಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಪಕ್ಷದ ಕಾರ್ಯಕರ್ತರು, ನಾಯಕರು ಸತ್ತರೆ ರಾಷ್ಟ್ರಧ್ವಜ ಹೊದಿಸಿ ಗೌರವಿಸುತ್ತೇವೆ. ಈ ತ್ರಿವರ್ಣ ಧ್ವಜವನ್ನು ಹೆಗಲ ಮೇಲೆ ಹಾಕಿಕೊಳ್ಳುವ ಅವಕಾಶವನ್ನು ಪಕ್ಷ ಕಾರ್ಯಕರ್ತರಿಗೆ ನೀಡಿದೆ. ಇದನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯ” ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ಎಂದಿಗೂ ಜಗ್ಗಲ್ಲ, ಬಗ್ಗಲ್ಲ, ಕುಗ್ಗಲ್ಲ

“ಕಾಂಗ್ರೆಸ್ ಪಕ್ಷ ಎಂದಿಗೂ ಜಗ್ಗಲ್ಲ, ಬಗ್ಗಲ್ಲ, ಕುಗ್ಗಲ್ಲ. ಈ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ದೇಶದಿಂದ ಕಾಂಗ್ರೆಸ್ ಪಕ್, ಕಾಂಗ್ರೆಸ್ ಕುಟುಂಬವನ್ನು ಹೊರಗೆಹಾಕಬೇಕು ಎಂಬ ದೊಡ್ಡ ಷಡ್ಯಂತ್ರ ನಡೆಯಿತು. ನಮ್ಮ ಇಂಡಿಯಾ ಒಕ್ಕೂಟ 25 ಸೀಟುಗಳ ಅಂತರದಲ್ಲಿ ಅಧಿಕಾರದಿಂದ ವಂಚಿತವಾಯಿತು. ಯಾವುದೇ ಪಕ್ಷಕ್ಕೆ ಅಥವಾ ವ್ಯಕ್ತಿಗೆ ಅಧಿಕಾರ ಶಾಶ್ವತವಲ್ಲ. ಆದರೆ ನಮ್ಮ ಬದ್ಧತೆಯನ್ನು ನಾನು ಮುಂದುವರಿಸುತ್ತಿದ್ದೇವೆ. ಇಂದು ದೇಶಕ್ಕೆ ದೊಡ್ಡ ಸಮಸ್ಯೆ ಎದುರಾಗಿದೆ. ಈ ದೇಶದ ಸಮಗ್ರತೆ, ಐಕ್ಯತೆ, ಶಾಂತಿಗಾಗಿ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿದರು. ನಮ್ಮ ರಾಜ್ಯದಲ್ಲೂ ಚಾಮರಾಜನಗರದಿಂದ ರಾಯಚೂರುವರೆಗೆ ಪಾದಯಾತ್ರೆ ನಡೆಯಿತು. ಈ ಯಾತ್ರೆ ಸಾಗಿದ ಎಲ್ಲಾ ಕಡೆಗಳಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದರು. ಆ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ 136 ಸೀಟು ಗೆಲ್ಲಲು ಸಾಧ್ಯವಾಯಿತು” ಎಂದರು.

“ನಮ್ಮ ಗುರಿ 2028 ಹಾಗೂ 2029 ಆಗಿದೆ. ಕಾಂಗ್ರೆಸ್ ಮುಕ್ತ ಮಾಡಲು ಕೆಲವು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಹೀಗಾಗಿ ಕಾಂಗ್ರೆಸ್ ಮುಕ್ತ ಮಾಡಲು ಸಾಧ್ಯವಿಲ್ಲ. ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ತೆಲಂಗಾಣದಲ್ಲಿ ಸಾಧ್ಯವಾಯಿತಾ? ಇಲ್ಲ” ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಿದ ನೂರು ಜನ ಹಿರಿಯ ನಾಯಕ

“ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಬೆಳಗಾವಿ ಅಧಿವೇಶನದ ಶತಮಾನೋತ್ಯಸ ಸಂದರ್ಭದಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮ ಮಾಡಿದೆವು. ಅದರ ನೆನಪಿನಲ್ಲಿ ನಾವು 100 ಕಾಂಗ್ರೆಸ್ ಕಚೇರಿ ನಿರ್ಮಾಣ ಮಾಡಲು ತೀರ್ಮಾನಿಸಿದ್ದೇವೆ. ಪ್ರತಿ ತಾಲ್ಲೂಕಿನಲ್ಲಿ ಜಾಗ ಪಡೆಯಲಾಗಿದೆ. ನಾವು ಬಿಜೆಪಿಯವರಂತೆ ನೂರಾರು ಎಕರೆ ಪಡೆದಿಲ್ಲ. ನಮ್ಮ ಪಾಲಿಗೆ ಕಾಂಗ್ರೆಸ್ ಕಚೇರಿ, ಇಂದಿರಾ ಭವನ, ರಾಜೀವ್ ಭವನ, ಪ್ರಿಯದರ್ಶಿನಿ ಭವನ ದೇವಾಲಯ ಸ್ವರೂಪ. ಹೀಗಾಗಿ ಕಾಂಗ್ರೆಸ್ ಕಚೇರಿಗೆ ಹೊಸರೂಪ ನೀಡಲು ಮುಂದಾಗಿದ್ದೇವೆ. ಸಧ್ಯದಲ್ಲೇ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಕ್ಕೆ ಬಂದು ಶಂಕುಸ್ಥಾಪನೆ ಮಾಡಲಿದ್ದಾರೆ.

ಕಾಂಗ್ರೆಸ್ ಭವನ ಜಾಗದಲ್ಲಿ ಭೂಮಿಪೂಜೆ ಮಾಡಲಾಗುವುದು. ಆ ದಿನ ನೂರು ಕಚೇರಿ ನಿರ್ಮಾಣ ಮಾಡುವ ಜಾಗದಲ್ಲಿ ಕಾರ್ಯಕ್ರಮ ಮಾಡಲಾಗುವುದು. ಅಂದು ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಿದ ನೂರು ಜನ ಹಿರಿಯ ನಾಯಕರನ್ನು (70 ವರ್ಷ ಮೇಲ್ಪಟ್ಟವರು) ಗುರುತಿಸಿ ಅವರಿಗೆ ಸನ್ಮಾನ ಮಾಡಬೇಕಿದೆ. ನಮ್ಮಲ್ಲಿ ಎಷ್ಟೋ ಜನಕ್ಕೆ ಅಧಿಕಾರ ಸಿಕ್ಕಿಲ್ಲ. ನನ್ನಂತೆ, ಸಚಿವರುಗಳಂತೆ, ಸಿದ್ದರಾಮಯ್ಯನವರಂತೆ ಎಲ್ಲರು ಅದೃಷ್ಟಶಾಲಿಗಳಾಗಲು ಸಾಧ್ಯವಾಗಿಲ್ಲ. ಅನೇಕ ಕಾರ್ಯಕರ್ತರಿಗೆ ಸಣ್ಣ ಅಧಿಕಾರವನ್ನು ಕೊಡಲು ಆಗಿಲ್ಲ. ಈ ಪಕ್ಷ ಉಳಿದುಕೊಂಡಿರುವುದು ಈ ಕಾರ್ಯಕರ್ತರಿಂದ. ಪಕ್ಷಕ್ಕೆ ಭೂಮಿ ದಾನ ಮಾಡಿರುವವರು, ಹಣ ಕೊಟ್ಟಿರುವವರಿಗೆ ಗೌರವ ಸಲ್ಲಿಸಲು ತೀರ್ಮಾನಿಸದ್ದೇವೆ. ರಾಮಲಿಂಗಾ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಚೇರಿ ಕಟ್ಟಲು ತೀರ್ಮಾನಿಸಿದ್ದೇವೆ” ಎಂದು ಹೇಳಿದರು.

ಭಾರತ ಜೋಡೋ ಯುವ ಶಕ್ತಿ ಸಂಘಕ್ಕೆ ಈ ತಿಂಗಳು ನೋಂದಣಿ ಆರಂಭ

“ಪ್ರತಿ ಗ್ರಾಮ ಪಂಚಾಯ್ತಿ ಹಾಗೂ ವಾರ್ಡ್ ಗಳಲ್ಲಿ ಯುವಕರ ಸಂಘಗಳನ್ನು ಸ್ಥಾಪಿಸಿ ರಾಜ್ಯಾದ್ಯಂತ ಒಟ್ಟು 10 ಸಾವಿರ ಭಾರತ ಜೋಡೋ ಯುವ ಶಕ್ತಿ ಸಂಘ ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಯುವಜನ ಹಾಗೂ ಕ್ರೀಡಾ ಇಲಾಖೆ ನೇತೃತ್ವದಲ್ಲಿ ಈ ಸಂಘ ಸ್ಥಾಪಿಸಲಾಗುವುದು. ಪ್ರತಿ ತಾಲ್ಲೂಚಿನಲ್ಲಿ ಸರಾಸರಿ 35-40 ಪಂಚಾಯ್ತಿಗಳಿರುತ್ತವೆ. ಪ್ರತಿ ಸಂಘಟಗಲ್ಲಿ 150ರಿಂದ 200 ಸದಸ್ಯರು ಇರುತ್ತಾರೆ.

ಯುವಕರಲ್ಲಿ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ನಾಯಕತ್ವ ಬೆಳೆಸಲು, ಮಹಿಳೆಯರಿಗೆ ಉತ್ತೇಜನ ನೀಡಲಾಗುವುದು. ಇದಕ್ಕಾಗಿ 1 ಸಾವಿರ ಕೋಟಿ ಅನುದಾನ ಮೀಸಲಿಡಲಾಗುವುದು. ನೀವು ಅದಕ್ಕೆ ಸಿದ್ಧತೆ ಮಾಡಿಕೊಂಡು ಯುವಕರನ್ನು ಸದಸ್ಯರಾಗುವಂತೆ ಮಾಡಬೇಕು. 10 ರೂ. ಗೌರವ ಧನ ನೀಡಿ ಸದಸ್ಯತ್ವ ಪಡೆಯಬಹುದು. 16-40 ವಯೋಮಾನದವರು ಸದಸ್ಯರಾಗಬಹುದು. ಈ ತಿಂಗಳು ನೋಂದಣಿ ಕಾರ್ಯಕ್ರಮ ಆರಂಭವಾಗಲಿದೆ. 2028ರಲ್ಲಿ ಈ ರಾಜ್ಯಕ್ಕೆ ಹಾಗೂ 2029ರಲ್ಲಿ ದೇಶಕ್ಕೆ ಹೊಸ ಸಂದೇಶ ನೀಡಬೇಕು” ಎಂದು ಕರೆ ನೀಡಿದರು.

“ಯುವಕರಿಗೆ ಉದ್ಯೋಗ ನೀಡುತ್ತಿಲ್ಲ. ನೇಮಕಾತಿಯಲ್ಲಿ ಪಾರದರ್ಶಕತೆ ತರಬೇಕಿದೆ. ರಾಜ್ಯದಲ್ಲಿ 72 ಸಾವಿರ ಸರ್ಕಾರಿ ಹುದ್ದೆಗಳ ಭರ್ತಿಗೆ ಮುಂದಾಗಿದ್ದೇವೆ. ಯುವ ಜನಾಂಗ ರಾಜ್ಯಕ್ಕೆ ಶಕ್ತಿ ತುಂಬಲಿದೆ. ಹೀಗಾಗಿ ನಾವು ಯುವಕರಿಗೆ ಮಾತ್ರ ನೀಡಬೇಕು. ಯುವ ಕರ್ನಾಟಕದ ಮೂಲಕ ಭಾರತ ನಿರ್ಮಾಣ ಮಾಡಬೇಕು” ಎಂದರು.

“ಜ್ಞಾನವೇ ಪ್ರಗತಿಯ ಮೂಲ ಯುವ ಕರ್ನಾಟಕ ನವ ಭಾರತ. ನಂಬಿಕೆ ದೊಡ್ಡ ಶಕ್ತಿ. ಈ ಪಕ್ಷದಲ್ಲಿ ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡಿ. ಯಾರು ಇರ್ತಾರೆ ಎಂಬುದು ಮುಖ್ಯವಲ್ಲ, ನಮ್ಮ ಹೆಗಲ ಮೇಲೆ ರಾಷ್ಟ್ರಧ್ವಜ ಉಳಿಸಿಕೊಳ್ಳುವುದು ಮುಖ್ಯ. ನಾವು ಕಾರ್ಯಕರ್ತರನ್ನು ಗ್ಯಾರಂಟಿ ಸಮಿತಿಯನ್ನು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಮಾಡಿದ್ದೆವು. ಈಗ ಪಂಚಾಯ್ತಿ ಮಟ್ಟದಲ್ಲಿ ಆರು ಜನರ ಸಮಿತಿ ಮಾಡಲು ತೀರ್ಮಾನಿಸಿದ್ದೇವೆ. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಕಮಲ ಕೆರೆಯಲ್ಲಿದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚೆಂದ. ಈ ಕೈ ಅಧಿಕಾರದಲ್ಲಿದ್ದ ಕಾರಣಕ್ಕೆ ನಾವು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ, 1.21 ಕೋಟಿ ಮಹಿಳೆಯರಿಗೆ ಮಾಸಿಕ 2 ಸಾವಿರ, 1.61 ಮನೆಗಳಿಗೆ 200 ಯೂನಿಟ್ ವಿದ್ಯುತ್ ಉಚಿತ, 4 ಕೋಟಿಗೂ ಹೆಚ್ಚು ಜನರಿಗೆ 10 ಕೆಜಿ ಅಕ್ಕಿ ನೀಡುತ್ತಿದ್ದೇವೆ. ರಾಜ್ಯದ ಮಹಿಳೆಯರಿಗೆ ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ. ನಮ್ಮ ಕಾರ್ಯಕ್ರಮ ಇಂದು ದೇಶದ ಕಾರ್ಯಕ್ರಮವಾಗಿದೆ” ಎಂದು ತಿಳಿಸಿದರು.

Exit mobile version