ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಸಮಾರಂಭ ಕುರಿತು ಕಾಂಗ್ರೆಸ್ ಪಕ್ಷವು ಪ್ರಮುಖ ಘೋಷಣೆ ಮಾಡಿದೆ. ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ಬುಧವಾರ (ಜೂನ್ 3) ನಡೆಯಲಿರುವ ಈ ಸರಳ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೆ.ಸಿ. ಚಂದ್ರಶೇಖರ್ ಅವರು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಪ್ರವೇಶವಿಲ್ಲ
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆ.ಸಿ. ಚಂದ್ರಶೇಖರ್ ಅವರು, “ಜೂನ್ 3 ರಂದು ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಿದೆ. ಅದೇ ದಿನ ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ಪ್ರಮಾಣಬಚನ ಸ್ವೀಕಾರ ಸಮಾರಂಭ ನಡೆಯಲಿದೆ. ಆದರೆ ಸಾರ್ವಜನಿಕರಿಗೆ ಈ ಕಾರ್ಯಕ್ರಮಕ್ಕೆ ಪ್ರವೇಶ ಇರುವುದಿಲ್ಲ. ಸಾರ್ವಜನಿಕರು ದಯವಿಟ್ಟು ಕಾರ್ಯಕ್ರಮಕ್ಕೆ ಬಾರದಂತೆ ಮನವಿ ಮಾಡುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದರು.
ಮೊದಲಿನ ಯೋಜನೆಗೆ ಬ್ರೇಕ್
ಆರಂಭದಲ್ಲಿ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರನ್ನು ಕರೆತರಬೇಕು, ಅದಕ್ಕಾಗಿ ಬಸ್ ಬುಕಿಂಗ್ ಮಾಡಬೇಕು ಎಂದು ತೀರ್ಮಾನಿಸಲಾಗಿತ್ತು. ಆದರೆ ಕಾರಣಾಂತರಗಳಿಂದಾಗಿ ಈಗ “ಆಡಂಬರ ಬೇಡ” ಎಂಬ ನಿರ್ಧಾರಕ್ಕೆ ಪಕ್ಷ ಬಂದಿದೆ.
“ನಾವು ಈಗ ಸರಳವಾಗಿ ಕಾರ್ಯಕ್ರಮ ನಡೆಸುತ್ತೇವೆ. ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ. ಆಡಂಬರ ಬೇಡ, ಒಂದೊಳ್ಳೆ ಸರ್ಕಾರ ಕೊಡೋಣ ಎಂಬುದು ಪಕ್ಷದ ತೀರ್ಮಾನ. ಅದಕ್ಕಾಗಿಯೇ ಸಾರ್ವಜನಿಕರು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಬಾರದಂತೆ ಮನವಿ ಮಾಡುತ್ತಿದ್ದೇವೆ” ಎಂದು ಜೆ.ಸಿ. ಚಂದ್ರಶೇಖರ್ ವಿವರಿಸಿದರು.
ಪಾಸ್‌ಗಳಿಗೂ ನಿರಾಕರಣೆ
ಇನ್ನು ಈ ಕಾರ್ಯಕ್ರಮಕ್ಕೆ ಯಾವುದೇ ಸಾಮಾನ್ಯ ಪಾಸ್ ಅಥವಾ ಸ್ಪೆಷಲ್ ಪಾಸ್ ಇರುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರಿಗೂ ಈ ಸಮಾರಂಭದಲ್ಲಿ ಪ್ರವೇಶ ಇರುವುದಿಲ್ಲ. ಅತ್ಯಂತ ಸೀಮಿತ ಸಂಖ್ಯೆಯ ಆಪ್ತರು, ಪಕ್ಷದ ಹಿರಿಯ ನಾಯಕರು ಮತ್ತು ಶಾಸಕರು ಮಾತ್ರ ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಸಚಿವರ ಪ್ರಮಾಣವಚನ ಕುರಿತು ಮಾಹಿತಿ
ಪಕ್ಷದ ಶಾಸಕಾಂಗ ಸಭೆಯ ಬಳಿಕ ಸಚಿವರ ಪ್ರಮಾಣವಚನದ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಜೆ.ಸಿ. ಚಂದ್ರಶೇಖರ್ ತಿಳಿಸಿದರು. “ಎಷ್ಟು ಜನ ಸಚಿವರಾಗಿ ಪ್ರಮಾಣ ತೆಗೆದುಕೊಳ್ಳಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅದರ ಬಳಿಕವೇ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯುತ್ತದೆ” ಎಂದು ಅವರು ಹೇಳಿದರು.
ಅಭಿಮಾನಿಗಳಿಗೆ ನಿರಾಸೆ
ಲೋಕಭವನದ ಗ್ಲಾಸ್ ಹೌಸ್ ಅತ್ಯಂತ ಸಣ್ಣ ಸ್ಥಳವಾಗಿದ್ದು, ಸೀಮಿತ ಸಂಖ್ಯೆಯ ಜನರು ಮಾತ್ರ ಸೇರಬಲ್ಲರು. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ಆಗಮಿಸುವ ಅಭಿಮಾನಿಗಳು, ಕಾರ್ಯಕರ್ತರಿಗೆ ಪ್ರವೇಶ ನೀಡುವುದು ಅಸಾಧ್ಯವಾಗಿದೆ. ಇದರಿಂದ ರಾಜ್ಯದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಡಿಕೆಶಿ ಅಭಿಮಾನಿಗಳಲ್ಲಿ ಸ್ವಲ್ಪ ಮಟ್ಟಿನ ನಿರಾಸೆ ಕಾಣುತ್ತಿದೆ. ಆದರೆ ಸರಳತೆಗೆ ಆದ್ಯತೆ ನೀಡಿರುವ ಡಿಕೆಶಿ ಅವರ ನಿಲುವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.
