ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರ ಆಶೀರ್ವಾದ ಪಡೆದ ಡಿಕೆಶಿ

Untitled design 2026 06 03T152702.180

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕರಿಸುವ ಕೆಲವೇ ಗಂಟೆಗಳ ಮೊದಲು, ಹಲವು ಹಿರಿಯ ನಾಯಕರ ಭೇಟಿಗಳನ್ನು ಮುಂದುವರೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾದ ಬಳಿಕ ಇದೀಗ ಅವರು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದಿದ್ದಾರೆ.

ಬೆಂಗಳೂರು ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಡಿ.ಕೆ. ಶಿವಕುಮಾರ್ ಅವರು ಭೇಟಿ ನೀಡಿದರು. ದಶಕಗಳ ಹಿಂದೆ ಕನಕಪುರ ಹಾಗೂ ಸಾತನೂರು ಕ್ಷೇತ್ರಗಳಲ್ಲಿ ರಾಜಕೀಯ ಪೈಪೋಟಿಯಲ್ಲಿದ್ದ ನಾಯಕನ ಮನೆಗೆ ಇಂದು ನೂತನ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆಯಾಗಿರುವ ಸಂದರ್ಭದಲ್ಲೇ ಭೇಟಿ ನೀಡಿರುವುದು ವಿಶೇಷವಾಗಿದೆ. ರಾಜಕೀಯ ಭಿನ್ನತೆಗಳ ನಡುವೆಯೂ ಹಿರಿಯ ನಾಯಕರಿಗೆ ಗೌರವ ಸಲ್ಲಿಸುವ ಪರಂಪರೆಯನ್ನು ಮುಂದುವರೆಸಿದ್ದಾರೆ ಎನ್ನಬಹುದು.

ದೇವೇಗೌಡರ ಮನೆಗೆ ತಲುಪುತ್ತಿದ ಡಿ.ಕೆ. ಶಿವಕುಮಾರ್ ಅವರು ಹಿರಿಯ ನಾಯಕನ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದರು. ಈ ಕ್ಷಣದಲ್ಲಿ ಉಪಸ್ಥಿತರಿದ್ದವರು ಈ ದೃಶ್ಯವನ್ನು ಭಾವನಾತ್ಮಕ ಹಾಗೂ ಗೌರವಪೂರ್ಣ ಕ್ಷಣವೆಂದು ವರ್ಣಿಸಿದ್ದಾರೆ.

ಅದಕ್ಕೆ ಪ್ರತಿಯಾಗಿ ಎಚ್.ಡಿ. ದೇವೇಗೌಡ ಅವರು ಡಿ.ಕೆ. ಶಿವಕುಮಾರ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಬೆನ್ನು ತಟ್ಟಿ ಶುಭ ಹಾರೈಸಿದ್ದಾರೆ. ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡುವಂತೆ ಅವರು ಸಲಹೆ ನೀಡಿದರೆಂಬ ಮಾಹಿತಿ ದೊರೆತಿದೆ.

ಇದಕ್ಕೂ ಮೊದಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಡಿ.ಕೆ. ಶಿವಕುಮಾರ್, ಅವರ ಆಶೀರ್ವಾದ ಪಡೆದಿದ್ದರು. ಈಗ ದೇವೇಗೌಡರ ಭೇಟಿಯೊಂದಿಗೆ ರಾಜ್ಯದ ಎರಡು ಪ್ರಮುಖ ರಾಜಕೀಯ ಪೀಳಿಗೆಯ ಹಿರಿಯ ನಾಯಕರಿಂದ ಆಶೀರ್ವಾದ ಪಡೆದಂತಾಗಿದೆ.

ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯ ಸಂಭ್ರಮದ ನಡುವೆಯೇ ಈ ರೀತಿಯ ಹಿರಿಯ ನಾಯಕರ ಭೇಟಿಗಳು ರಾಜಕೀಯ ಶಿಷ್ಟಾಚಾರ ಮತ್ತು ಸೌಹಾರ್ದತೆಯ ಸಂದೇಶವನ್ನು ಮತ್ತಷ್ಟು ಬಲಪಡಿಸುತ್ತಿವೆ. ಹೊಸ ಸರ್ಕಾರದ ಮೇಲೆ ಜನರ ನಿರೀಕ್ಷೆಗಳು ಹೆಚ್ಚಿರುವ ಈ ಸಂದರ್ಭದಲ್ಲಿ ಈ ಭೇಟಿಗಳು ಸಕಾರಾತ್ಮಕ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿವೆ.

Exit mobile version