ಸದನದಲ್ಲಿ RSS ಗೀತೆ ಹಾಡಿದ ವಿಚಾರ: ಕ್ಷಮೆಯಾಚಿಸಿದ ಡಿಸಿಎಂ ಡಿ.ಕೆ ಶಿವಕುಮಾರ್‌

Untitled design 2025 08 26t130238.156

ಬೆಂಗಳೂರು: ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಗೀತೆಯಾದ ‘ನಮಸ್ತೆ ಸದಾ ವತ್ಸಲೇ ಮಾತೃಭೂಮಿ’ಯನ್ನು ಪಠಿಸಿದ್ದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್‌ನ ಹಿರಿಯ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಶಿವಕುಮಾರ್ ಕ್ಷಮೆಯಾಚಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಚರ್ಚೆಯ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಆರ್‌ಎಸ್‌ಎಸ್‌ನ ಗೀತೆಯನ್ನು ಪಠಿಸಿದ್ದರು. ಈ ಘಟನೆಯ 73 ಸೆಕೆಂಡ್‌ಗಳ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಕಾಂಗ್ರೆಸ್‌ನ ಎಂಎಲ್‌ಸಿ ಬಿ.ಕೆ. ಹರಿಪ್ರಸಾದ್ ಅವರು ಶಿವಕುಮಾರ್‌ ಅವರ ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿ, ಕ್ಷಮೆಯಾಚಿಸುವಂತೆ ಆಗ್ರಹಿಸಿದರು. “ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಆರ್‌ಎಸ್‌ಎಸ್ ಗೀತೆಯನ್ನು ಹಾಡಿದ್ದು ತಪ್ಪು. ಇದು ಕಾಂಗ್ರೆಸ್‌ನ ತತ್ವಗಳಿಗೆ ವಿರುದ್ಧವಾಗಿದೆ. ಅವರು ಕ್ಷಮೆ ಕೇಳಬೇಕು,” ಎಂದು ಹರಿಪ್ರಸಾದ್ ದೆಹಲಿಯಲ್ಲಿ ಹೇಳಿದರು.

ಈ ವಿವಾದಕ್ಕೆ ಪ್ರತಿಕ್ರಿಯೆಯಾಗಿ, ಡಿ.ಕೆ. ಶಿವಕುಮಾರ್ ಕ್ಷಮಾಪಣೆಯನ್ನು ವ್ಯಕ್ತಪಡಿಸಿದ್ದಾರೆ. “ನಾನು ಎಲ್ಲಾ ಧರ್ಮಗಳನ್ನು ಗೌರವಿಸುತ್ತೇನೆ. ಹಿಂದೂ, ಕ್ರೈಸ್ತ, ಮುಸಲ್ಮಾನ ಧರ್ಮಗಳ ಬಗ್ಗೆ ನನಗೆ ಗೌರವವಿದೆ. ಬಿ.ಕೆ. ಹರಿಪ್ರಸಾದ್ ಅವರ ಆಗ್ರಹದ ಮೇರೆಗೆ ನಾನು ಕ್ಷಮೆಯಾಚಿಸುತ್ತೇನೆ,” ಎಂದು ಶಿವಕುಮಾರ್ ಹೇಳಿದ್ದಾರೆ.

“ಆರ್. ಅಶೋಕ್ ಮಾತಾಡುವಾಗ ಎರಡು ಸಾಲುಗಳನ್ನು ಅಧ್ಯಯನದ ಭಾಗವಾಗಿ ಹೇಳಿದೆ. ಮಾಧ್ಯಮಗಳು ಅದನ್ನು ತಿರುಚಿ ರಾಷ್ಟ್ರೀಯ ಸುದ್ದಿಯಾಗಿ ಮಾಡಿದವು,” ಎಂದರು. ಕಾಂಗ್ರೆಸ್ ಹಿರಿಯ ನಾಯಕರ ಸಲಹೆಯನ್ನು ಗೌರವಿಸುವುದಾಗಿ, ಇಂಡಿ ಅಲಯನ್ಸ್‌ಗೆ ನೋವಾದರೆ ಕ್ಷಮೆ ಕೇಳುತ್ತೇನೆ ಎಂದು ಡಿಕೆಶಿ ಹೇಳಿದರು.

ಕಾಂಗ್ರೆಸ್‌ನ ಕೆಲವು ನಾಯಕರು ಶಿವಕುಮಾರ್‌ ಅವರ ಈ ಕೃತ್ಯವನ್ನು ಕಾಂಗ್ರೆಸ್‌ನ ಜಾತ್ಯತೀತ ತತ್ವಗಳಿಗೆ ವಿರುದ್ಧವೆಂದು ಭಾವಿಸಿದ್ದಾರೆ. ಬಿ.ಕೆ. ಹರಿಪ್ರಸಾದ್ ಅವರು, “ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಗೀತೆಯನ್ನು ಹಾಡಿದ್ದರೆ ಒಪ್ಪಿಕೊಳ್ಳಬಹುದಿತ್ತು. ಆದರೆ ಕೆಪಿಸಿಸಿ ಅಧ್ಯಕ್ಷರಾಗಿ ಆರ್‌ಎಸ್‌ಎಸ್ ಗೀತೆಯನ್ನು ಹಾಡಿದ್ದು ಸರಿಯಲ್ಲ,” ಎಂದು ಟೀಕಿಸಿದರು.

Exit mobile version