ಬೆಳಗಾವಿ, ಏಪ್ರಿಲ್ 11: ‘ಡಿಜಿಟಲ್ ಅರೆಸ್ಟ್’ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಸೈಬರ್ ವಂಚನೆ ಪ್ರಕರಣಗಳು ದೇಶಾದ್ಯಂತ ಹೆಚ್ಚುತ್ತಿದ್ದು, ಇದೀಗ ಕುಂದಾನಗರಿ ಬೆಳಗಾವಿಯಲ್ಲೂ ಭಾರೀ ಮೋಸದ ಘಟನೆ ಬೆಳಕಿಗೆ ಬಂದಿದೆ. ಸಿಬಿಐ (CBI) ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಯೋರ್ವರನ್ನು ‘ಡಿಜಿಟಲ್ ಅರೆಸ್ಟ್’ ಮಾಡುವ ಮೂಲಕ ವಂಚಕರು ಬರೋಬ್ಬರಿ 15 ಕೋಟಿ 45 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ.
ಹೇಗೆ ನಡೆಯಿತು ವಂಚನೆ?
ನಗರದ ಉದ್ಯಮಿಯೊಬ್ಬರಿಗೆ ಫೋನ್ ಮಾಡಿದ ವಂಚಕರು, ತಾವು ಸಿಬಿಐ ಅಧಿಕಾರಿಗಳು ಎಂದು ಪರಿಚಯಿಸಿಕೊಂಡರು. “ನಿಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣವಿದೆ, ಮನಿ ಲಾಂಡರಿಂಗ್ ಆರೋಪವಿದೆ. ತನಿಖೆಗೆ ಸಹಕರಿಸದಿದ್ದರೆ ತಕ್ಷಣವೇ ಬಂಧಿಸಲಾಗುವುದು” ಎಂದು ಹೆದರಿಸಿದರು. ನಂತರ, ಅವರನ್ನು ‘ಡಿಜಿಟಲ್ ಅರೆಸ್ಟ್’ ಮಾಡಿ, ವಿಚಾರಣೆಯ ಹೆಸರಲ್ಲಿ ಬ್ಯಾಂಕ್ ಖಾತೆ ವಿವರ ಮತ್ತು ಒಟಿಪಿ ಪಡೆದುಕೊಂಡು ಹಣ ವರ್ಗಾವಣೆ ಮಾಡಿಕೊಂಡರು.
ಎಷ್ಟು ಹಣ, ಎಲ್ಲಿಗೆ ಹೋಯಿತು?
ತನಿಖೆಯ ಪ್ರಕಾರ, ವಂಚಕರು ಉದ್ಯಮಿಯ ಖಾತೆಯಿಂದ ಮೊದಲು 10 ‘ಫಸ್ಟ್ ಲೇಯರ್ ಖಾತೆ’ ಗಳಿಗೆ ಹಣ ವರ್ಗಾಯಿಸಿದರು. ನಂತರ ಅದನ್ನು ಹೈದರಾಬಾದ್, ಅಹಮದಾಬಾದ್, ಕೋಲ್ಕತ್ತಾ, ಗುವಾಹಟಿ, ಹರಿಯಾಣ ಮತ್ತು ದೆಹಲಿ ಸೇರಿದಂತೆ ದೇಶದ 6 ರಾಜ್ಯಗಳ 390ಕ್ಕೂ ಅಧಿಕ ಬ್ಯಾಂಕ್ ಖಾತೆಗಳ ಮೂಲಕ ಹಂಚಿಕೊಂಡಿದ್ದಾರೆ. ನಕಲಿ ಕಂಪನಿ ಹೆಸರಿನಲ್ಲಿದ್ದ ಖಾತೆಯೊಂದಕ್ಕೆ 2 ಕೋಟಿ ರೂ. ವರ್ಗಾವಣೆಯಾಗಿದ್ದು, ಪೊಲೀಸರು ಈಗಾಗಲೇ 1 ಕೋಟಿ ರೂಪಾಯಿ ಫ್ರೀಜ್ ಮಾಡಿದ್ದಾರೆ. ಉಳಿದ 14 ಕೋಟಿ 45 ಲಕ್ಷ ರೂಪಾಯಿಯನ್ನು ವಿವಿಧ ಎಟಿಎಂಗಳು ಮತ್ತು ಆನ್ಲೈನ್ ವಹಿವಾಟುಗಳ ಮೂಲಕ ಡ್ರಾ ಮಾಡಿಕೊಳ್ಳಲಾಗಿದೆ.
ಪೊಲೀಸರ ಕಾರ್ಯಾಚರಣೆ
ಘಟನೆ ಕುರಿತು ದೂರು ದಾಖಲಾಗುತ್ತಿದ್ದಂತೆ ಬೆಳಗಾವಿ ನಗರದ ಸೈಬರ್ ಕ್ರೈಮ್ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿದರು. ಅಂತರರಾಜ್ಯ ವಂಚಕರ ಜಾಲವನ್ನು ಬೇಧಿಸಿದ ಅವರು, ಹೈದರಾಬಾದ್ ಮೂಲದ ಶ್ರೀಪಾದ ನಾಯಕ್ ಮತ್ತು ಶರದ್ ನಾಯಕ್ ಎಂಬ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಪೊಲೀಸ್ ಆಯುಕ್ತರ ಸ್ಪಷ್ಟನೆ
ಬೆಳಗಾವಿಯ ಪೊಲೀಸ್ ಆಯುಕ್ತ ಭೂಷಣ್ ಜಿ. ಬೊರಸೆ ಅವರು ಮಾತನಾಡಿ, “ಡಿಜಿಟಲ್ ಅರೆಸ್ಟ್ ಎಂಬುದು ಸಂಪೂರ್ಣ ವಂಚನೆ. ಯಾವುದೇ ಸರ್ಕಾರಿ ಸಂಸ್ಥೆ ಫೋನ್ ಮೂಲಕ ಬಂಧನದ ಬೆದರಿಕೆ ಹಾಕುವುದಿಲ್ಲ. ಸಾರ್ವಜನಿಕರು ಈ ರೀತಿಯ ಕರೆಗಳಿಗೆ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆ ಅಥವಾ ಸೈಬರ್ ಕ್ರೈಮ್ ಹೆಲ್ಪ್ಲೈನ್ (1930) ಗೆ ವರದಿ ಮಾಡಬೇಕು” ಎಂದು ಎಚ್ಚರಿಸಿದ್ದಾರೆ.
