ಕ್ಷುಲ್ಲಕ ಕಾರಣಕ್ಕೆ ಸಹೋದರರ ಮಧ್ಯೆ ಜಗಳ: ಅಣ್ಣನನ್ನೇ ಕೊಂದ ತಮ್ಮ

Untitled design 2026 05 19T203501.071

ಧಾರವಾಡ, ಮೇ 19: ಕ್ಷುಲ್ಲಕ ಕಾರಣವೊಂದಕ್ಕೆ ಸಹೋದರನೇ ತನ್ನ ಅಣ್ಣನನ್ನು ಕೊಲೆ ಮಾಡಿರುವ ಘಟನೆ ಧಾರವಾಡ ತಾಲೂಕಿನಕರಡಿಗುಡ್ಡ ಗ್ರಾಮದಲ್ಲಿನಡೆದಿದೆ. ಮನೆಯ ದಾರಿ ವಿಚಾರವಾಗಿ ಇಬ್ಬರು ಸಹೋದರರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. 

ಮೃತರನ್ನು ಮಲ್ಲಯ್ಯ ಚಿಕ್ಕಮಠ ಎಂದು ಗುರುತಿಸಲಾಗಿದ್ದು, ಆರೋಪಿಯಾಗಿರುವ ತಮ್ಮ ಶ್ರೀಕಾಂತ ಚಿಕ್ಕಮಠ ಘಟನೆ ಬಳಿಕ ಪರಾರಿಯಾಗಿದ್ದಾನೆ. ಪ್ರಕರಣ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಮಲ್ಲಯ್ಯ ಮತ್ತು ಶ್ರೀಕಾಂತ ಇಬ್ಬರ ಮಧ್ಯೆ ಹಲವು ದಿನಗಳಿಂದ ಮನೆಯ ದಾರಿ ವಿಚಾರವಾಗಿ ಅಸಮಾಧಾನ ಇತ್ತು ಎನ್ನಲಾಗಿದೆ. ಸೋಮವಾರ ಸಂಜೆ ಇದೇ ವಿಚಾರ ಮತ್ತೆ ಪ್ರಸ್ತಾಪವಾಗಿದ್ದು, ಮಾತಿನ ಚಕಮಕಿ ಜಗಳಕ್ಕೆ ತಿರುಗಿದೆ. ಇಬ್ಬರ ಮಧ್ಯೆ ವಾಗ್ವಾದ ತೀವ್ರಗೊಂಡಿದೆ.

ಜಗಳದ ವೇಳೆ ಅಣ್ಣ ಮಲ್ಲಯ್ಯ ಚಿಕ್ಕಮಠ ಚಾಕುವಿನಿಂದ ತಮ್ಮ ಶ್ರೀಕಾಂತನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ. ಇದರಿಂದ ಆಕ್ರೋಶಗೊಂಡ ಶ್ರೀಕಾಂತ, ಮಲ್ಲಯ್ಯ ಕೈಯಲ್ಲಿದ್ದ ಚಾಕುವನ್ನು ಕಸಿದುಕೊಂಡು ಅಣ್ಣನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮಲ್ಲಯ್ಯಗೆ ಗಂಭೀರ ಗಾಯಗೊಂಡಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಲ್ಲಯ್ಯನನ್ನು ಕುಟುಂಬಸ್ಥರು ತಕ್ಷಣ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಾಯಗಳು ಗಂಭೀರವಾಗಿದ್ದ ಕಾರಣ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಲ್ಲಯ್ಯ ಮೃತಪಟ್ಟಿದ್ದಾನೆ.

ಘಟನೆಯ ಬಳಿಕ ಆರೋಪಿತ ಶ್ರೀಕಾಂತ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಅವನ ಪತ್ತೆಗೆ ಬಲೆ ಬೀಸಿದ್ದಾರೆ. ಪ್ರಕರಣದ ಮಾಹಿತಿ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಿದ ಅವರು, ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.

Exit mobile version