ಮಂಗಳೂರು: ರಾಜ್ಯದ ಗಮನ ಸೆಳೆದಿರುವ ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣದ ತನಿಖೆ ಮತ್ತೆ ಚುರುಕುಗೊಂಡಿದೆ. ಸುಮಾರು ನಾಲ್ಕು ತಿಂಗಳ ಹಿಂದೆ ಏಳು ಅಸ್ಥಿಪಂಜರಗಳು ಪತ್ತೆಯಾಗಿದ್ದ ಬಂಗ್ಲೆಗುಡ್ಡೆ ಅರಣ್ಯ ಪ್ರದೇಶಕ್ಕೆ ಇದೀಗ ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರ ತಂಡ ಭೇಟಿ ನೀಡಿ ಮಹತ್ವದ ಪರಿಶೀಲನೆ ನಡೆಸಿದೆ. ಪ್ರಕರಣದ ಹಲವು ಆಯಾಮಗಳನ್ನು ಗಂಭೀರವಾಗಿ ಪರಿಗಣಿಸಿರುವ ವಿಶೇಷ ತನಿಖಾ ದಳ (SIT), ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.
ಬೆಂಗಳೂರಿನಿಂದ ಆಗಮಿಸಿದ್ದ ಮೂವರು ಎಫ್‌ಎಸ್‌ಎಲ್ ಅಧಿಕಾರಿಗಳ ತಂಡ, ಎಸ್‌ಐಟಿ ಅಧಿಕಾರಿಗಳೊಂದಿಗೆ ಬಂಗ್ಲೆಗುಡ್ಡೆ ಕಾಡಿನ ಒಳಭಾಗಕ್ಕೆ ತೆರಳಿ ಪರಿಶೀಲನೆ ನಡೆಸಿತು. ಇದೇ ಸ್ಥಳದಲ್ಲಿ ನಾಲ್ಕು ತಿಂಗಳ ಹಿಂದೆ ಏಳು ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಆರೋಪಿ ಪ್ರದೀಪ್ ಕುಲಾಲ್‌ನನ್ನೂ ಅಧಿಕಾರಿಗಳು ಸ್ಥಳಕ್ಕೆ ಕರೆತಂದು ಮಹಜರ್ ನಡೆಸಿದ್ದಾರೆ. ಘಟನಾ ಸ್ಥಳದ ಪರಿಸ್ಥಿತಿಗಳು, ಅಸ್ಥಿಪಂಜರ ಪತ್ತೆಯಾದ ಸ್ಥಳಗಳು ಹಾಗೂ ಇತರೆ ಸಾಕ್ಷ್ಯಾಧಾರಗಳ ಬಗ್ಗೆ ತಜ್ಞರು ಪರಿಶೀಲನೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರದೀಪ್ ಕುಲಾಲ್ ಈಗಾಗಲೇ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 183 ಅಡಿಯಲ್ಲಿ ತಪ್ಪೊಪ್ಪಿಗೆ ನೀಡಿದ್ದಾನೆ ಎನ್ನಲಾಗಿದೆ. ರಾತ್ರಿ ವೇಳೆ ಕಾಡಿನಲ್ಲಿ ಬುರುಡೆ ತೆಗೆಯುತ್ತಿದ್ದ ದೃಶ್ಯಾವಳಿಗಳಲ್ಲೂ ಆತ ಕಾಣಿಸಿಕೊಂಡಿದ್ದಾನೆ. ಇದೇ ಕಾರಣಕ್ಕೆ ಅಧಿಕಾರಿಗಳು ಆರೋಪಿಯನ್ನು ಸ್ಥಳಕ್ಕೆ ಕರೆತಂದು ಕೆಲವು ಮಾಹಿತಿ ಸಂಗ್ರಹಿಸಿದ್ದಾರೆ.
ಈ ಪ್ರಕರಣದ ತನಿಖೆ ಆರಂಭವಾದ ಬಳಿಕ ಬಂಗ್ಲೆಗುಡ್ಡೆ ಅರಣ್ಯ ಪ್ರದೇಶದಲ್ಲಿ ಎಸ್‌ಐಟಿ ತಂಡ ದೊಡ್ಡ ಮಟ್ಟದ ಉತ್ಖನನ ಕಾರ್ಯಾಚರಣೆ ನಡೆಸಿತ್ತು. ಸೆಪ್ಟೆಂಬರ್ 17ರಂದು ಐದು ಅಸ್ಥಿಪಂಜರಗಳು ಪತ್ತೆಯಾಗಿದ್ದರೆ, ಸೆಪ್ಟೆಂಬರ್ 18ರಂದು ಮತ್ತೆರಡು ಅಸ್ಥಿಪಂಜರಗಳು ಪತ್ತೆಯಾಗಿದ್ದವು.
ಪತ್ತೆಯಾದ ಅಸ್ಥಿಪಂಜರಗಳ ಸ್ಥಿತಿಗತಿಗಳ ಕುರಿತು ಪ್ರಾಥಮಿಕವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸಿದ್ದರು. ಆದರೆ ಅಸ್ಥಿಗಳ ಸುತ್ತಲಿನ ಪರಿಸ್ಥಿತಿ, ಅವುಗಳನ್ನು ಹೂತಿರುವ ವಿಧಾನ ಹಾಗೂ ಕೆಲವು ಅನುಮಾನಾಸ್ಪದ ಅಂಶಗಳು ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿಸಿವೆ. ಇದರಿಂದಲೇ ಎಸ್‌ಐಟಿ ತಂಡ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ಮುಂದುವರಿಸುತ್ತಿದೆ.
ಪತ್ತೆಯಾದ ಅಸ್ಥಿಪಂಜರಗಳನ್ನು ಹೆಚ್ಚಿನ ವೈಜ್ಞಾನಿಕ ಪರೀಕ್ಷೆಗಾಗಿ ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಿಂದ ಬೆಂಗಳೂರಿನ ಮಡಿವಾಳದಲ್ಲಿರುವ ಎಫ್‌ಎಸ್‌ಎಲ್ ಕೇಂದ್ರಕ್ಕೆ ರವಾನೆ ಮಾಡಲಾಗಿತ್ತು. ಅಸ್ಥಿಗಳ ವಯಸ್ಸು, ಲಿಂಗ, ಸಾವಿನ ನಿಖರ ಕಾರಣ ಸೇರಿದಂತೆ ಹಲವು ಅಂಶಗಳ ಕುರಿತು ಪರೀಕ್ಷೆಗಳು ನಡೆಯುತ್ತಿವೆ. ಈ ವರದಿ ಪ್ರಕರಣದ ಮುಂದಿನ ತನಿಖೆಗೆ ಮಹತ್ವದ ದಾಖಲೆ ಆಗುವ ಸಾಧ್ಯತೆ ಇದೆ.
