ಧರ್ಮಸ್ಥಳ ಪ್ರಕರಣ: SIT ತನಿಖೆಗೆ ರಾಜ್ಯ ಸರ್ಕಾರ ನಿರ್ಧಾರ!

ಮಹಿಳಾ ಆಯೋಗದ ಮನವಿಗೆ ಸ್ಪಂದಸಿದ ರಾಜ್ಯ ಸರ್ಕಾರ

ಧರ್ಮಸ್ಥಳದಲ್ಲಿ ಮಹಿಳೆಯರು ಮತ್ತು ಅಪ್ರಾಪ್ತರ ಅಸಹಜ ಸಾವುಗಳಿಗೆ ಸಂಬಂಧಿಸಿದ ಆಘಾತಕಾರಿ ಆರೋಪಗಳ ತನಿಖೆಗಾಗಿ ಕರ್ನಾಟಕ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಗೆ ನಿರ್ಧರಿಸಿದೆ. ಈ ಕ್ರಮವು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿಯವರ ಮನವಿಯನ್ನು ಪುರಸ್ಕರಿಸಿ, ‘ಗ್ಯಾರಂಟಿ ನ್ಯೂಸ್’ನ ನಿರಂತರ ವರದಿಗಳ ಬೆನ್ನಲ್ಲೇ ತೆಗೆದುಕೊಳ್ಳಲಾಗಿದೆ.

ಎಸ್‌ಐಟಿಯನ್ನು ಐಪಿಎಸ್ ಅಧಿಕಾರಿ ಡಾ. ಪ್ರಣವ್ ಮೊಹಾಂತಿಯವರ ನೇತೃತ್ವದಲ್ಲಿ ರಚಿಸಲಾಗಿದ್ದು, ತಂಡದಲ್ಲಿ ಐಪಿಎಸ್ ಅಧಿಕಾರಿಗಳಾದ ಎಂ.ಎನ್. ಅನುಚೇತ್, ಸೌಮ್ಯಲತಾ, ಮತ್ತು ಜಿತೇಂದ್ರ ಕುಮಾರ್ ಸದಸ್ಯರಾಗಿದ್ದಾರೆ. ಈ ತನಿಖಾ ತಂಡವು ಧರ್ಮಸ್ಥಳದಲ್ಲಿ 1998ರಿಂದ 2014ರವರೆಗೆ ನಡೆದಿದೆ ಎನ್ನಲಾದ ಕೊಲೆ, ಅತ್ಯಾಚಾರ, ಮತ್ತು ರಹಸ್ಯ ಸಮಾಧಿಗಳ ಆರೋಪಗಳನ್ನು ಆಳವಾಗಿ ತನಿಖೆ ಮಾಡಲಿದೆ.

ADVERTISEMENT
ADVERTISEMENT

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿಯವರು ಜುಲೈ 14ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಕಳೆದ ಎರಡು ದಶಕಗಳಲ್ಲಿ ಧರ್ಮಸ್ಥಳದಲ್ಲಿ ಕಾಣೆಯಾದ ಮಹಿಳೆಯರು, ವಿದ್ಯಾರ್ಥಿಗಳು, ಅಸಹಜ ಸಾವುಗಳು, ಕೊಲೆಗಳು, ಮತ್ತು ಲೈಂಗಿಕ ದೌರ್ಜನ್ಯಗಳ ಬಗ್ಗೆ ಸಮಗ್ರ ತನಿಖೆಗೆ ಎಸ್‌ಐಟಿ ರಚನೆಗೆ ಮನವಿ ಮಾಡಿದ್ದರು. ಈ ಪತ್ರ ಬರೆದ ಆರು ದಿನಗಳ ಬಳಿಕ ಸರ್ಕಾರವು ಎಸ್‌ಐಟಿ ರಚನೆಗೆ ಕ್ರಮ ಕೈಗೊಂಡಿದೆ.

‘ಗ್ಯಾರಂಟಿ ನ್ಯೂಸ್’ ಈ ಪ್ರಕರಣದ ಬಗ್ಗೆ ದಾಖಲೆಗಳೊಂದಿಗೆ ಸತತ ವರದಿಗಳನ್ನು ಪ್ರಕಟಿಸಿದ್ದು, ತನಿಖೆಗೆ ಒತ್ತಡ ಹೇರಿತ್ತು. ಹಿರಿಯ ವಕೀಲ ಕೆ.ವಿ. ಧನಂಜಯ್ ಸೇರಿದಂತೆ ಹಲವರು ಉನ್ನತ ಅಧಿಕಾರಿಗಳಿಂದ ಸ್ವತಂತ್ರ ತನಿಖೆಗೆ ಒತ್ತಾಯಿಸಿದ್ದರು. ಈ ಎಲ್ಲ ಒತ್ತಡಗಳು ಮತ್ತು ಸಾರ್ವಜನಿಕ ಆಕ್ರೋಶದ ಬೆನ್ನಲ್ಲೇ, ಸರ್ಕಾರವು ಎಸ್‌ಐಟಿ ರಚನೆಯ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ.

Exit mobile version