ಧರ್ಮಸ್ಥಳ ಶವ ರಹಸ್ಯ: ತಮಿಳುನಾಡು ಮೂಲದ ಐವರ ವಿಚಾರಣೆ

Untitled design 2025 08 08t205218.496

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ತನಿಖೆಯನ್ನು ತೀವ್ರಗೊಳಿಸಿದೆ. ಅನಾಮಿಕ ದೂರುದಾರನ ಹೇಳಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಿದ SIT, ದೂರುದಾರನೊಂದಿಗೆ ಕೆಲಸ ಮಾಡಿದವರನ್ನು ಗುರುತಿಸಿ, ವಿಚಾರಣೆಗೆ ಕರೆಸಿದೆ. ತಮಿಳುನಾಡು ಮೂಲದ ಐವರು ಸಫಾಯಿ ಕರ್ಮಚಾರಿಗಳನ್ನು ವಿಚಾರಣೆಗೊಳಪಡಿಸಿ, ಅವರ ಹೇಳಿಕೆಗಳನ್ನು ದಾಖಲಿಸಲಾಗಿದೆ.

ತಮಿಳುನಾಡು ಹಾಗೂ ಇತರ ಪ್ರದೇಶಗಳಿಂದ ಕೆಲವರನ್ನು ಹಾಜರುಪಡಿಸಿ, 1995ರಿಂದ 2014ರವರೆಗೆ ದೂರುದಾರನೊಂದಿಗೆ ಕೆಲಸ ಮಾಡಿದವರ ವಿವರಗಳನ್ನು ಸಂಗ್ರಹಿಸಲಾಗಿದೆ. ಧರ್ಮಸ್ಥಳ ಗ್ರಾಮ ಪಂಚಾಯತಿಯಿಂದ ಪಡೆದ ಹಳೆಯ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ತನಿಖೆ ಮುಂದುವರಿದಿದೆ. ಈ ದಾಖಲೆಗಳ ಪರಿಶೀಲನೆಯು ಸಕ್ರಿಯವಾಗಿ ನಡೆಯುತ್ತಿದೆ.

ತನಿಖೆಯ ಭಾಗವಾಗಿ, ಸ್ಪಾಟ್ ನಂ. 13ರಲ್ಲಿ ಗೌಂಡ್ ಪೆನೆಟ್ರೇಟಿಂಗ್ ರಾಡಾರ್ (GPR) ತಂತ್ರಜ್ಞಾನವನ್ನು ಬಳಸಲು SIT ನಿರ್ಧರಿಸಿದೆ. ಬೆಂಗಳೂರಿನಿಂದ ತರಲಾಗುವ GPR ಯಂತ್ರವು ನೆಲದಡಿಯ ವಸ್ತುಗಳನ್ನು ಪತ್ತೆಹಚ್ಚಲು ಸಹಾಯಕವಾಗಲಿದೆ. ಖಾಸಗಿ ಕಂಪನಿಯೊಂದರಿಂದ ಈ ಯಂತ್ರವನ್ನು ಬಾಡಿಗೆಗೆ ಪಡೆಯಲು ತೀರ್ಮಾನಿಸಲಾಗಿದ್ದು, SIT ಮುಖ್ಯಸ್ಥ ಪ್ರಣವ್ ಮೊಹಾಂತಿ ತಜ್ಞರ ಸಲಹೆ ಪಡೆದಿದ್ದಾರೆ. ಆದರೆ, ಈ ತಂತ್ರಜ್ಞಾನದ ಬಳಕೆ ದುಬಾರಿಯಾಗಿದ್ದು, ದಿನಕ್ಕೆ ಲಕ್ಷಾಂತರ ರೂಪಾಯಿ ಬಾಡಿಗೆ ವೆಚ್ಚವಾಗಬಹುದು. ಒಟ್ಟಾರೆ ₹20 ಲಕ್ಷ ವೆಚ್ಚವಾಗಬಹುದೆಂದು ತಿಳಿದುಬಂದಿದೆ. ಚೌಗು ಪ್ರದೇಶದಲ್ಲಿ ಮಳೆಯಿಂದ ಒದ್ದೆಯಾದ ಮಣ್ಣಿನಿಂದಾಗಿ GPR ಸಿಗ್ನಲ್ ದುರ್ಬಲವಾಗುವ ಸಾಧ್ಯತೆ ಇದ್ದು, ಇದು ತನಿಖೆಗೆ ಸವಾಲಾಗಿದೆ.

ಬೆಳ್ತಂಗಡಿಯ SIT ಕಚೇರಿಯನ್ನು ಈಗ ಅಧಿಕೃತವಾಗಿ SIT ಪೊಲೀಸ್ ಠಾಣೆಯಾಗಿ ಪರಿವರ್ತಿಸಲಾಗಿದೆ. ಡಿಜಿ ಹಾಗೂ ಐಜಿಪಿ ಡಾ. ಎಂ. ಎ. ಸಲೀಂ ಈ ಕುರಿತು ಆದೇಶ ಹೊರಡಿಸಿದ್ದಾರೆ. ಇನ್ಮುಂದೆ ಈ ಪ್ರಕರಣಕ್ಕೆ ಸಂಬಂಧಿಸಿದ ದೂರುಗಳನ್ನು ನೇರವಾಗಿ SIT ಪೊಲೀಸ್ ಠಾಣೆಯಲ್ಲಿ ದಾಖಲಿಸಬಹುದು. ಈ ಹಿಂದೆ, ದೂರುಗಳನ್ನು ಸ್ಥಳೀಯ ಠಾಣೆಗೆ ಸಲ್ಲಿಸಿ, ನಂತರ SITಗೆ ವರ್ಗಾಯಿಸಲಾಗುತ್ತಿತ್ತು. ಈಗಿನ ಹೊಸ ಆದೇಶದಿಂದ ದೂರು ದಾಖಲಾತಿ ಸುಗಮವಾಗಿದೆ.

ದೂರುದಾರನಿಗೆ ಭದ್ರತೆ

ಪ್ರಕರಣದಲ್ಲಿ ಪ್ರಮುಖ ಮಾಹಿತಿ ನೀಡಿದ ಅನಾಮಿಕ ದೂರುದಾರನಿಗೆ ಭದ್ರತೆ ಕುರಿತು ಆತಂಕ ಉಂಟಾಗಿದೆ. ತನಿಖೆಯ ಸಂದರ್ಭದಲ್ಲಿ ತನ್ನ ಮೇಲೆ ದಾಳಿಯ ಭಯದಿಂದ, ದೂರುದಾರನು SITಗೆ ಭದ್ರತೆಗಾಗಿ ಮನವಿ ಸಲ್ಲಿಸಿದ್ದಾನೆ. ಈ ಮನವಿಯನ್ನು ಪರಿಗಣಿಸಿ, SIT ತಕ್ಷಣವೇ ಭದ್ರತೆ ಒದಗಿಸಿದೆ. ದೂರುದಾರನು ವಕೀಲರೊಂದಿಗೆ ಖಾಸಗಿ ಕಾರಿನಲ್ಲಿ ಆಗಮಿಸಿದಾಗ, ಪೊಲೀಸ್ ಎಸ್ಕಾರ್ಟ್‌ನೊಂದಿಗೆ ಇಬ್ಬರು ಸಿಬ್ಬಂದಿಗಳು ಭದ್ರತೆ ಒದಗಿಸಿದರು. ಧರ್ಮಸ್ಥಳದಲ್ಲಿ ಸಂಭವಿಸಿದ ಗಲಾಟೆಯ ಬೆನ್ನಲ್ಲೇ ಈ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಾಚರಣೆಯನ್ನು ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Exit mobile version