ಧರ್ಮಸ್ಥಳ ಪ್ರಕರಣ: ಬಂಗ್ಲೆಗುಡ್ಡದ 5 ಸ್ಥಳಗಳಲ್ಲಿ 5 ಬುರುಡೆ-ಅಸ್ಥಿಪಂಜರಗಳು ಪತ್ತೆ

Untitled design 2025 09 18t141127.124

ಮಂಗಳೂರು: ಧರ್ಮಸ್ಥಳದ ಶವಹೂತಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಬಂಗ್ಲೆಗುಡ್ಡ ಕಾಡಿನಲ್ಲಿ 5 ಬುರುಡೆಗಳು ಮತ್ತು ಅಸ್ಥಿಪಂಜರಗಳನ್ನು ಪತ್ತೆ ಹಚ್ಚಿದೆ. ಪತ್ತೆಯಾದ ಎಲ್ಲಾ ಮೂಳೆಗಳು ಪುರುಷರದ್ದೆಂದು ತಜ್ಞ ವೈದ್ಯರು ದೃಢಪಡಿಸಿದ್ದಾರೆ.

ಧರ್ಮಸ್ಥಳ ಪ್ರಕರಣದ ಹಿನ್ನೆಲೆಯಲ್ಲಿ, ಸೌಜನ್ಯಾ ಕುಟುಂಬದ ಸದಸ್ಯ ವಿಠಲಗೌಡರು ತಮ್ಮ ಹೇಳಿಕೆಯಲ್ಲಿ ಬಂಗ್ಲೆಗುಡ್ಡದ ಮರವೊಂದರ ಕೆಳಗೆ ಹೆಣಗಳ ರಾಶಿಯನ್ನು ನೋಡಿದ್ದಾಗಿ ಹೇಳಿದ್ದರು. “ವಾಮಾಚರಕ್ಕೆ ಬಳಸುವಂತಹ ವಸ್ತುಗಳು ಅಲ್ಲಿದ್ದವು” ಎಂದು ಅವರು ಉಲ್ಲೇಖಿಸಿದ್ದರು. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ SIT ತಂಡವು, ಬಂಗ್ಲೆಗುಡ್ಡದ ಅರಣ್ಯ ಪ್ರದೇಶದಲ್ಲಿ ವ್ಯಾಪಕ ಶೋಧ ನಡೆಸಿತ್ತು. ಮಹಜರು ಪ್ರಕ್ರಿಯೆಯ ಸಂದರ್ಭದಲ್ಲಿ, ಭೂಮಿಯ ಮೇಲ್ಭಾಗದಲ್ಲಿಯೇ 5 ಕಡೆಗಳಲ್ಲಿ ಬುರುಡೆಗಳು ಹಾಗೂ ಮೂಳೆಗಳು ಸಿಕ್ಕಿವೆ. ಇದಲ್ಲದೆ, ಮರಗಳಲ್ಲಿ ಕಟ್ಟಿರುವ ಎರಡು ಹಗ್ಗಗಳು, ಸೀರೆಯಂತಹ ಬಟ್ಟೆಗಳು ಕೂಡ ಪತ್ತೆಯಾಗಿವೆ.

ಮಹಜರು ಸಂದರ್ಭದಲ್ಲಿ ತಜ್ಞ ವೈದ್ಯರ ತಂಡವು ಸ್ಥಳದಲ್ಲಿಯೇ ಉಪಸ್ಥಿತಿಯಿದ್ದು, ಪತ್ತೆಯಾದ ಎಲ್ಲಾ ಬುರುಡೆಗಳು ಹಾಗೂ ಮೂಳೆಗಳು ಪುರುಷರದ್ದು ಎಂದು ದೃಢಪಡಿಸಿದ್ದಾರೆ. “ಮೇಲ್ನೋಟಕ್ಕೆ ಇವು ಪುರುಷರ ಬುರುಡೆಗಳು” ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. SIT ತಂಡದೊಂದಿಗೆ ಕೆಲಸ ಮಾಡುತ್ತಿರುವ ಈ ತಜ್ಞರು, ಅಸ್ಥಿಪಂಜರಗಳ ವಯಸ್ಸು, ಸಾವಿನ ಕಾರಣ ಹಾಗೂ ಸಮಯವನ್ನು ನಿರ್ಧರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಪೂರ್ಣ ವಿವರಗಳು ಫಾರೆನ್ಸಿಕ್ ಲ್ಯಾಬಾರೇಟರಿ (FSL) ವರದಿಯ ನಂತರವೇ ಬಯಲಾಗಲಿವೆ. ಅಧಿಕಾರಿಗಳು ಎಲ್ಲಾ ಮೂಳೆಗಳು, ಅಸ್ಥಿಪಂಜರದ ಅವಶೇಷಗಳು ಹಾಗೂ ಸುತ್ತಮುತ್ತಲಿನ ಮಣ್ಣನ್ನು ಸಂಗ್ರಹಿಸಿ FSLಗೆ ಕಳುಹಿಸಿದ್ದಾರೆ. ಈ ವರದಿಯು ಡಿಎನ್‌ಎ ಪರೀಕ್ಷೆ, ಸಾವಿನ ಕಾರಣ ಹಾಗೂ ಸಂಬಂಧಿತ ಇತರ ಮಾಹಿತಿಗಳನ್ನು ಬಹಿರಂಗಪಡಿಸಲಿದೆ.

 FSL ವರದಿಯ ನಂತರ, ಈ ಅಸ್ಥಿಪಂಜರಗಳು ಯಾರದ್ದು, ಸಾವಿನ ಕಾರಣ ಏನು ಎಂಬುದು ಬಯಲಾಗಲಿದೆ. ಇದು ಆತ್ಮಹತ್ಯೆಗಳ ಸರಣಿಯೇ ಅಥವಾ ಹತ್ಯೆಯ ಕೃತ್ಯವೇ ಎಂಬುದು ತನಿಖೆಯ ಮುಂದಿನ ಹಂತದಲ್ಲಿ ಸ್ಪಷ್ಟವಾಗಬಹುದು.

Exit mobile version