ಬೆಂಗಳೂರು (ಜ.19): ರಾಜ್ಯ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯಾಗಿರುವ ಡಿಜಿಪಿ ರಾಮಚಂದ್ರ ರಾವ್ ಅವರು, ಸಾಮಾಜಿಕ ಜಾಲತಾಣಗಳಲ್ಲಿ 47 ಸೆಕೆಂಡ್‌ಗಳ ರಾಸಲೀಲೆ ವಿಡಿಯೋ ವೈರಲ್ ಆಗಿದ್ದು, ಈ ಪ್ರಕರಣದ ಹಿನ್ನೆಲೆಯಲ್ಲಿ ದಿಢೀರ್ ಆಗಿ 10 ದಿನಗಳ ರಜೆ ಪಡೆದು ಅಜ್ಞಾತವಾಸಕ್ಕೆ ಜಾರಿದ್ದಾರೆ ಎನ್ನಲಾಗಿದೆ. ಸಮವಸ್ತ್ರದಲ್ಲೇ ಪೊಲೀಸ್ ಕಚೇರಿಯೊಳಗೆ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವಂತೆ ಕಾಣುವ ಈ ವಿಡಿಯೋ, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರ ಹಾಗೂ ಪೊಲೀಸ್ ಇಲಾಖೆಯನ್ನು ಮುಜುಗರ ಉಂಟುಮಾಡಿದೆ.
ವಿಡಿಯೋ ವೈರಲ್ ಆದ ನಂತರ ಮಾಧ್ಯಮಗಳು, ಸರ್ಕಾರ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ರಾಮಚಂದ್ರ ರಾವ್ ಅವರನ್ನು ಸಂಪರ್ಕಿಸಲು ಯತ್ನಿಸಿದರೂ, ಅವರು ಯಾರ ಕೈಗೂ ಸಿಗುತ್ತಿಲ್ಲ. ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿರುವ ಅವರು, ಸಂಪರ್ಕದಿಂದ ದೂರ ಉಳಿದಿದ್ದಾರೆ. ಇದರಿಂದಾಗಿ “ಡಿಜಿಪಿ ಶ್ರೇಣಿಯ ಅಧಿಕಾರಿ ಅಜ್ಞಾತವಾಸಕ್ಕೆ ಜಾರಿದ್ದಾರೆ” ಎಂಬ ಆರೋಪಗಳು ಕೇಳಿಬರುತ್ತಿವೆ.
8 ವರ್ಷಗಳ ಹಿಂದಿನದ್ದು ಎನ್ನಲಾದ ವಿಡಿಯೋ
ವಿವಾದಿತ ವಿಡಿಯೋ ಸುಮಾರು ಎಂಟು ವರ್ಷಗಳ ಹಿಂದಿನದ್ದು ಎಂದು ಹೇಳಲಾಗುತ್ತಿದೆ. ಆ ವೇಳೆ ರಾಮಚಂದ್ರ ರಾವ್ ಅವರು ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದ್ದು, ಪೊಲೀಸ್ ಕಚೇರಿಯೊಳಗೇ ಈ ಘಟನೆ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ. ಆದರೆ, ಈ ವಿಡಿಯೋದಲ್ಲಿ ಕಾಣಿಸುವ ವ್ಯಕ್ತಿ ನಾನಲ್ಲ ಎಂದು ರಾಮಚಂದ್ರ ರಾವ್ ಅವರು ಸ್ಪಷ್ಟನೆ ನೀಡಿದ್ದು, ಇದು ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ‘ಫ್ಯಾಬ್ರಿಕೇಟೆಡ್ ವಿಡಿಯೋ’ ಎಂದು ವಾದಿಸಿದ್ದಾರೆ.
ಗೃಹ ಸಚಿವರ ಭೇಟಿ ವಿಫಲ
ವಿಡಿಯೋ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಲು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಲು ರಾಮಚಂದ್ರ ರಾವ್ ಅವರು ಪ್ರಯತ್ನಿಸಿದ್ದರು. ಆದರೆ, ಗೃಹ ಸಚಿವರು ಭೇಟಿಗೆ ನಿರಾಕರಿಸಿದ ಬಳಿಕವೇ, ಅವರು 10 ದಿನಗಳ ರಜೆ ಮೇಲೆ ತೆರಳುತ್ತಿರುವುದಾಗಿ ಕಚೇರಿ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾರೆ ಎನ್ನಲಾಗಿದೆ. ಸರ್ಕಾರದ ಮಟ್ಟದಲ್ಲಿ ಅಮಾನತು ಅಥವಾ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇರುವುದನ್ನು ಅರಿತು, ಮುಂದಿನ ಕಾನೂನು ಹೋರಾಟ ಮತ್ತು ತನಿಖೆಗೆ ಸಿದ್ಧತೆ ನಡೆಸಲು ಅವರು ರಜೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಸರ್ಕಾರದ ನಿಲುವು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಕಾನೂನಿಗಿಂತ ಯಾರೂ ದೊಡ್ಡವರಲ್ಲ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಡಿಜಿಪಿ ಶ್ರೇಣಿಯ ಅಧಿಕಾರಿಯೇ ಇಂತಹ ಗಂಭೀರ ಆರೋಪಗಳಲ್ಲಿ ಸಿಲುಕಿರುವುದು ರಾಜ್ಯ ಪೊಲೀಸ್ ಇಲಾಖೆಗೆ ದೊಡ್ಡ ಆಘಾತವಾಗಿದೆ. ಅಧಿಕಾರಿಯ ರಜೆ ಅವಧಿಯಲ್ಲಿಯೂ ಸಹ ಸರ್ಕಾರ ಇಲಾಖಾ ತನಿಖೆ ನಡೆಸಲು ಮತ್ತು ಅಗತ್ಯವಿದ್ದರೆ ಅಮಾನತು ಕ್ರಮ ಕೈಗೊಳ್ಳಲು ಕಾನೂನು ಅಡ್ಡಿ ಇಲ್ಲ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
