ಲೈಂಗಿಕ ದೌರ್ಜನ್ಯ ಸಂತ್ರಸ್ತರ ಗುರುತು ಬಹಿರಂಗಪಡಿಸಿದರೆ ಶಿಸ್ತು ಕ್ರಮ: ಡಿಜಿಪಿ ಎಂ.ಎ ಸಲೀಂ ಆದೇಶ

Untitled design 2026 02 18T080945.199

ಬೆಂಗಳೂರು: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ಅಪ್ರಾಪ್ತ ಮಕ್ಕಳ ಹಿತದೃಷ್ಟಿಯಿಂದ ಕರ್ನಾಟಕ ಪೊಲೀಸ್ ಇಲಾಖೆ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಸಂತ್ರಸ್ತರ ಹೆಸರು, ವಿಳಾಸ ಅಥವಾ ಅವರ ಗುರುತನ್ನು ಯಾವುದೇ ಹಂತದಲ್ಲಿ ಬಹಿರಂಗಪಡಿಸಬಾರದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕ (DGP & IGP) ಎಂ.ಎ. ಸಲೀಂ ಅವರು ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಆದೇಶದ ಹಿನ್ನೆಲೆ

ಸರ್ವೋಚ್ಚ ನ್ಯಾಯಾಲಯದ ಆದೇಶ ಹಾಗೂ ಇಲಾಖೆಯ ಸ್ಥಾಯಿ ಆದೇಶ ಸಂಖ್ಯೆ 1024ರ ಅಡಿಯಲ್ಲಿ ಸಂತ್ರಸ್ತರ ಗೌಪ್ಯತೆ ಕಾಪಾಡುವುದು ಕಡ್ಡಾಯವಾಗಿದೆ. ಆದರೂ, ಕೆಲವು ಠಾಣೆಗಳಲ್ಲಿ ಎಫ್‌ಐಆರ್ (FIR) ಮತ್ತು ತನಿಖಾ ವರದಿಗಳಲ್ಲಿ ಸಂತ್ರಸ್ತರ ನೈಜ ಹೆಸರುಗಳನ್ನು ನಮೂದಿಸುತ್ತಿರುವುದು ಕಂಡುಬಂದಿದೆ. ಇದು ನ್ಯಾಯಾಲಯದ ವಿಚಾರಣೆ ವೇಳೆ ಆಕ್ಷೇಪಣೆಗೆ ಕಾರಣವಾಗುವುದಲ್ಲದೆ, ಸಂತ್ರಸ್ತರ ಘನತೆಗೂ ಧಕ್ಕೆ ತರುತ್ತದೆ. ಈ ಹಿನ್ನೆಲೆಯಲ್ಲಿ ಈ ಹೊಸ ಸುತ್ತೋಲೆ ಹೊರಡಿಸಲಾಗಿದೆ.

ಕಡ್ಡಾಯವಾಗಿ ಪಾಲಿಸಬೇಕಾದ 8 ಪ್ರಮುಖ ನಿಯಮಗಳು:
  1. ಮೂಲ ದೂರಿನ ಗೌಪ್ಯತೆ: ದೂರು ಅರ್ಜಿಯಲ್ಲಿ ಸಂತ್ರಸ್ತರ ನೈಜ ವಿವರಗಳಿರಬೇಕು. ಆದರೆ, ತನಿಖಾಧಿಕಾರಿಯು ಆ ವಿವರಗಳನ್ನು ರಹಸ್ಯವಾಗಿಡಲು ಸಂತ್ರಸ್ತರಿಗೆ ಒಂದು ‘ಬದಲಿ ಹೆಸರು’ ಅಥವಾ ‘ಅಕ್ಷರ’ವನ್ನು (ಉದಾಹರಣೆಗೆ: ‘X’ ಅಥವಾ ‘ABC’) ನೀಡಬೇಕು.

  2. ಸೀಲ್ಡ್ ಲಕೋಟೆ: ಸಂತ್ರಸ್ತರ ನೈಜ ಹೆಸರು ಮತ್ತು ನೀಡಲಾದ ಬದಲಿ ಹೆಸರಿನ ವಿವರಗಳನ್ನು ಒಳಗೊಂಡ ದಾಖಲೆಯನ್ನು ಸೀಲ್ ಮಾಡಿದ ಲಕೋಟೆಯಲ್ಲಿ ಮಾತ್ರ ನ್ಯಾಯಾಲಯಕ್ಕೆ ಸಲ್ಲಿಸಬೇಕು.

  3. ಎಫ್‌ಐಆರ್ ದಾಖಲಾತಿ:ಎಫ್‌ಐಆರ್‌ನಲ್ಲಿ (FIR) ನೈಜ ಹೆಸರಿನ ಬದಲು ಬದಲಾಯಿಸಿದ ಹೆಸರನ್ನೇ ಬಳಸಬೇಕು ಮತ್ತು ಟಿಪ್ಪಣಿಯಲ್ಲಿ ʼಹೆಸರು ಬದಲಾಯಿಸಲಾಗಿದೆʼ ಎಂದು ಸ್ಪಷ್ಟವಾಗಿ ನಮೂದಿಸಬೇಕು.

  4. ಸಾಕ್ಷಿಗಳ ಹೇಳಿಕೆ: ತನಿಖೆಯ ವೇಳೆ ದಾಖಲಿಸುವ ಸಾಕ್ಷಿಗಳ ಹೇಳಿಕೆಯಲ್ಲೂ ಸಂತ್ರಸ್ತರ ನೈಜ ಹೆಸರು ಇರಬಾರದು. ಬದಲಾಯಿಸಿದ ಹೆಸರಿನ ಪ್ರತಿಗಳನ್ನೇ ನಿತ್ಯದ ತನಿಖೆಗಳಲ್ಲಿ ಬಳಸಬೇಕು.

  5. ದೋಷಾರೋಪಣಾ ಪಟ್ಟಿ (Charge Sheet): ನ್ಯಾಯಾಲಯಕ್ಕೆ ಸಲ್ಲಿಸುವ ಚಾರ್ಜ್‌ಶೀಟ್‌ನಲ್ಲಿ ಎರಡು ಪ್ರತಿಗಳಿರಬೇಕು. ಒಂದು ಸಂತ್ರಸ್ತೆಯ ನೈಜ ವಿವರವಿರುವ ಸೀಲ್ಡ್ ಕವರ್ ಪ್ರತಿ, ಮತ್ತೊಂದು ಆರೋಪಿ ಮತ್ತು ಅಭಿಯೋಜಕರಿಗೆ ನೀಡಲು ಬಳಸುವ ‘ಹೆಸರು ಬದಲಾಯಿಸಿದ’ ಪ್ರತಿ.

  6. ಡಿಜಿಟಲ್ ಪೋರ್ಟಲ್ ಎಚ್ಚರಿಕೆ: ಪೊಲೀಸ್ ಇಲಾಖೆಯ ಡಿಜಿಟಲ್ ಪೋರ್ಟಲ್‌ಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವ ಎಫ್‌ಐಆರ್‌ಗಳ ಪಟ್ಟಿಯಲ್ಲಿ ಪೋಕ್ಸೋ (POCSO) ಮತ್ತು ಅತ್ಯಾಚಾರ ಪ್ರಕರಣಗಳ ವಿವರಗಳು ಕಾಣದಂತೆ ತಾಂತ್ರಿಕ ಸುರಕ್ಷತಾ ಕ್ರಮ ಕೈಗೊಳ್ಳಬೇಕು.

  7. ಶಿಸ್ತು ಕ್ರಮದ ಎಚ್ಚರಿಕೆ: ಈ ನಿಯಮಗಳನ್ನು ಉಲ್ಲಂಘಿಸುವ ಠಾಣಾಧಿಕಾರಿಗಳು ಅಥವಾ ತನಿಖಾಧಿಕಾರಿಗಳ ವಿರುದ್ಧ ‘ಗಂಭೀರ ಕರ್ತವ್ಯಲೋಪ’ ಎಂದು ಪರಿಗಣಿಸಿ ಇಲಾಖಾ ಶಿಸ್ತು ಕ್ರಮ ಜರುಗಿಸಲಾಗುವುದು.

  8. ಮೇಲ್ವಿಚಾರಣೆ: ಘಟಕದ ಮುಖ್ಯಸ್ಥರು (SP/CP) ತಮ್ಮ ಅಧೀನದ ಅಧಿಕಾರಿಗಳು ಈ ನಿಯಮಗಳನ್ನು ಪಾಲಿಸುತ್ತಿದ್ದಾರೆಯೇ ಎಂದು ನಿರಂತರವಾಗಿ ಮೇಲ್ವಿಚಾರಣೆ ನಡೆಸಬೇಕು.

ಈ ಆದೇಶವು ಸಂತ್ರಸ್ತರಿಗೆ ಸಾಮಾಜಿಕ ಭದ್ರತೆ ನೀಡುವ ಜೊತೆಗೆ, ಕಾನೂನು ಹೋರಾಟದಲ್ಲಿ ಅವರಿಗೆ ಯಾವುದೇ ಮುಜುಗರವಾಗದಂತೆ ನೋಡಿಕೊಳ್ಳುವ ಗುರಿಯನ್ನು ಹೊಂದಿದೆ.

Exit mobile version