ದೇವನಹಳ್ಳಿ: ಕಾಶಿಯ ವಿಶ್ವನಾಥನ ದರ್ಶನ ಪಡೆಯಬೇಕೆಂದು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಟಿಟಿ ವಾಹನ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದೇವನಹಳ್ಳಿ ಹೊರವಲಯದ ರಾಣಿ ಕ್ರಾಸ್ ಬಳಿ ಶನಿವಾರ ಮಧ್ಯರಾತ್ರಿ ನಡೆದಿದೆ.
ಮೃತಪಟ್ಟವರನ್ನು ತಿಪಟೂರು ಮೂಲದ ಜಯಮ್ಮ (60), ಯಶೋದಮ್ಮ (60) ಮತ್ತು ಗಂಗಾ (38) ಎಂದು ಗುರುತಿಸಲಾಗಿದೆ. ಇವರು ಸ್ತ್ರೀ ಶಕ್ತಿ ಸಂಘದ ಚೀಟಿ ಹಣದ ಮೂಲಕ 15 ದಿನಗಳ ಸುದೀರ್ಘ ಪ್ರವಾಸವನ್ನು ಯೋಜಿಸಿತ್ತು. ಭಾನುವಾರ (ಮಾರ್ಚ್ 22) ಮುಂಜಾನೆ 6 ಗಂಟೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾಶಿಗೆ ಹೊರಡುವ ವಿಮಾನದ ಟಿಕೆಟ್ ಬುಕ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ತಿಪಟೂರಿನಿಂದ ಶನಿವಾರ ರಾತ್ರಿ 10 ಗಂಟೆಗೆ ಟಿಟಿ ವಾಹನದಲ್ಲಿ 12 ಜನರ ತಂಡ ಏರ್‌ಪೋರ್ಟ್‌ಗೆ ಹೋಗುತ್ತಿದ್ದರು.
ಗೂಗಲ್ ಮ್ಯಾಪ್ ಎಡವಟ್ಟು
ವಿಮಾನ ನಿಲ್ದಾಣಕ್ಕೆ ಹೋಗುವ ದಾರಿ ಸರಿಯಾಗಿ ತಿಳಿಯದ ಕಾರಣ ಚಾಲಕ ಗೂಗಲ್ ಮ್ಯಾಪ್ ಮೊರೆ ಹೋಗಿದ್ದ ಎನ್ನಲಾಗಿದೆ. ಏರ್‌ಪೋರ್ಟ್‌ಗೆ ಹೋಗುವ ಮೊದಲ ಟರ್ನಿಂಗ್ ಅನ್ನು ಚಾಲಕ ಗಮನಿಸದೆ ಮುಂದೆ ಸಾಗಿದ್ದನು. ದಾರಿ ತಪ್ಪಿರುವುದು ತಿಳಿಯುತ್ತಿದ್ದಂತೆಯೇ ಮುಂದಿನ ಟರ್ನಿಂಗ್‌ನಲ್ಲಿ ವಾಹನವನ್ನು ಸಡನ್ ಆಗಿ ಯೂಟರ್ನ್ ಮಾಡಲು ಪ್ರಯತ್ನಿಸಿದಾಗ, ವೇಗವಾಗಿ ಬಂದ ಲಾರಿ ಟಿಟಿ ವಾಹನದ ಎಡಭಾಗಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಟಿಟಿ ವಾಹನದ ಎಡಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅಲ್ಲಿ ಕುಳಿತಿದ್ದ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗಾಯಾಳುಗಳ ಸ್ಥಿತಿ ಚಿಂತಾಜನಕ
ಅಪಘಾತದಲ್ಲಿ ಟಿಟಿ ಚಾಲಕ ಸೇರಿದಂತೆ ಒಟ್ಟು ಎಂಟು ಜನರಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳನ್ನು ದೇವನಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಕೆಂಪಮ್ಮ ಎಂಬುವವರ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತ ಸಂಭವಿಸಿದ ತಕ್ಷಣ ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಸಂಚಾರಿ ವಿಭಾಗದ ಎಸಿಪಿ ಪ್ರದೀಪ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟಿಟಿ ಚಾಲಕ ರಸ್ತೆ ಮಿಸ್ ಮಾಡಿಕೊಂಡು ಸಡನ್ ಆಗಿ ಸೆಂಟರ್ ಲೈನ್‌ಗೆ ಬಂದಿದ್ದರಿಂದ ಲಾರಿ ಡಿಕ್ಕಿಯಾಗಿದೆ. ಅತೀ ವೇಗವೇ ಈ ಭೀಕರ ಅಪಘಾತಕ್ಕೆ ಪ್ರಮುಖ ಕಾರಣವೆಂದು ಶಂಕಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಲಾರಿ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.
