ದರ್ಶನ್ ಬೇಲ್ ಅರ್ಜಿ ವಿರುದ್ಧ ರೆಡಿ ಆಗ್ತಿದೆ ಖಡಕ್ ವರದಿ: ಸುಪ್ರೀಂ ನೋಟಿಸ್‌ಗೆ ಜೈಲು ಅಧಿಕಾರಿಗಳು ಅಲರ್ಟ್

BeFunky collage 2026 05 06T114209.171

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಪ್ರಸಿದ್ಧ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಹೊತ್ತಲ್ಲೇ ಕರ್ನಾಟಕ ಜೈಲು ಇಲಾಖೆ ಅಧಿಕಾರಿಗಳು ವಿಸ್ತೃತ ವರದಿ ತಯಾರಿಸುವಲ್ಲಿ ತೊಡಗಿದ್ದಾರೆ.

ಸುಪ್ರೀಂ ಕೋರ್ಟ್ ಈ ಅರ್ಜಿಯ ವಿಚಾರಣೆಯ ವೇಳೆ ರಾಜ್ಯ ಸರ್ಕಾರ ಹಾಗೂ ಸೆಷನ್ಸ್ ಕೋರ್ಟ್‌ಗೆ ನೋಟಿಸ್ ನೀಡಿ ಒಂದು ವಾರದ ಗಡುವು ನೀಡಿದೆ. ಈ ನೋಟಿಸ್‌ಗೆ ಉತ್ತರವಾಗಿ ಜೈಲು ಅಧಿಕಾರಿಗಳು ದರ್ಶನ್ ಅವರಿಗೆ ನೀಡಲಾಗುತ್ತಿರುವ ಸೌಲಭ್ಯಗಳು, ಸೆಲ್ ವಿಡಿಯೋ, ಸಿಸಿಟಿವಿ ದೃಶ್ಯಾವಳಿ, ಇತರೆ ಖೈದಿಗಳೊಂದಿಗಿನ ಸಂಪರ್ಕ ಮತ್ತು ಜೈಲು ನಿಯಮಗಳ ಪಾಲನೆಯ ಬಗ್ಗೆ ಸಾಕ್ಷ್ಯ ಸಮೇತ ವರದಿ ಸಿದ್ಧಪಡಿಸುತ್ತಿದ್ದಾರೆ.

ದರ್ಶನ್ ಅವರು ಸಲ್ಲಿಸಿರುವ ಜಾಮೀನು ಅರ್ಜಿಯಲ್ಲಿ ಜೈಲಿನಲ್ಲಿ ಮೂಲಭೂತ ಸೌಲಭ್ಯಗಳು ನಿರಾಕರಿಸಲಾಗುತ್ತಿದೆ, ಸಹ-ಖೈದಿಗಳಿಂದ ಬೆದರಿಕೆ, ನಿಂದನೆ ಮತ್ತು ಪ್ರಚೋದನೆ ಎದುರಾಗುತ್ತಿದೆ ಎಂದು ಆರೋಪಿಸಿದ್ದಾರೆ. “ನನ್ನ ಜೀವಿಸುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ. ಆದರೆ ಜೈಲು ಅಧಿಕಾರಿಗಳ ಪ್ರಕಾರ ದರ್ಶನ್ ಅವರನ್ನು ಸೆಪರೇಟ್ ಸೇಲ್‌‌‌‌ನಲ್ಲಿ ಇರಿಸಲಾಗಿದೆ ಮತ್ತು ಸಹ-ಖೈದಿಗಳೊಂದಿಗೆ ಸಂಪರ್ಕವಿಲ್ಲ ಎನ್ನಲಾಗುತ್ತಿದೆ.

ಜೈಲು ಅಧಿಕಾರಿಗಳು ದರ್ಶನ್ ಅವರ ಕುಟುಂಬದ ವಿಶೇಷ ಸಂದರ್ಶನಕ್ಕೆ ಅನುಮತಿ ಕೇಳಿದ್ದರು. ಆದರೆ ದರ್ಶನ್ ಅವರು ವಕೀಲರನ್ನು ಸಂಪರ್ಕಿಸಿ ಉತ್ತರ ನೀಡುವುದಾಗಿ ಹೇಳಿದ್ದರು ಎನ್ನಲಾಗುತ್ತಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಏನಾಯಿತು?

ಮೇ 4ರಂದು ನಡೆದ ವಿಚಾರಣೆಯಲ್ಲಿ ದರ್ಶನ್ ಪರವಾಗಿ ಹಿರಿಯ ವಕೀಲ ಮುಕುಲ್ ರೋಹತಗಿ ವಾದ ಮಂಡಿಸಿದ್ದರು. ದರ್ಶನ್ ಒಂದು ವರ್ಷದಿಂದ ಜೈಲಿನಲ್ಲಿದ್ದು, ಜೈಲು ಅಧಿಕಾರಿಗಳು ಮೂಲಭೂತ ಸೌಲಭ್ಯಗಳನ್ನೂ ನಿರಾಕರಿಸುತ್ತಿದ್ದಾರೆ ಎಂದು ವಾದಿಸಿದ್ದರು. ಈ ಹಿಂದೆ ಸುಪ್ರೀಂ ಕೋರ್ಟ್ “5 ಸ್ಟಾರ್ ಟ್ರೀಟ್‌ಮೆಂಟ್ ಕೊಡಬೇಡಿ” ಎಂದು ಹೇಳಿದ್ದನ್ನು ಉಲ್ಲೇಖಿಸಿ ದರ್ಶನ್ ಪರ ವಕೀಲರು ವಾದ ಮಾಡಿದ್ದರು.

ಈಗ ಜೈಲು ಇಲಾಖೆ ಎಲ್ಲಾ ಸಾಕ್ಷ್ಯಗಳೊಂದಿಗೆ ವರದಿಯನ್ನು ಇನ್ನೆರಡು ದಿನಗಳಲ್ಲಿ ರಾಜ್ಯ ಗೃಹ ಇಲಾಖೆ ಮೂಲಕ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿದೆ ಎಂದು ಮಾಹಿತಿ ಲಭ್ಯವಾಗಿದೆ.

ಪ್ರಕರಣದ ಮುಂದಿನ ವಿಚಾರಣೆಯತ್ತ ಎಲ್ಲರ ಗಮನ ಕೇಂದ್ರೀಕರಣಗೊಂಡಿದೆ. ಜೈಲು ಇಲಾಖೆಯ ವರದಿ ದರ್ಶನ್ ಅವರ ಜಾಮೀನು ಅರ್ಜಿಯ ಭವಿಷ್ಯವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.

Exit mobile version