ದಿತ್ವಾ ಚಂಡಮಾರುತ ಎಫೆಕ್ಟ್: ನಾಳೆ ಅನೇಕ ಜಿಲ್ಲೆಗಳಲ್ಲಿ ಭಾರೀ ಮಳೆ ಎಚ್ಚರಿಕೆ!

Untitled design 2025 11 28T222451.849

ಬೆಂಗಳೂರು: ನೈಋತ್ಯ ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ದಿತ್ವಾ ಚಂಡಮಾರುತವು ಈಗ ನಿಧಾನವಾಗಿ ಉತ್ತರ-ವಾಯವ್ಯ ದಿಕ್ಕಿನತ್ತ ಚಲಿಸುತ್ತಿದ್ದು, ಕರಾವಳಿ ರಾಜ್ಯಗಳಿಗೆ ಎಚ್ಚರಿಕೆ ಗಂಟೆ ಮೊಳಗಿಸಿದೆ. ಶ್ರೀಲಂಕಾದಲ್ಲಿ ಈಗಾಗಲೇ ಬೃಹತ್ ಅನಾಹುತ ಸೃಷ್ಟಿಸಿರುವ ದಿತ್ವಾ ಚಂಡಮಾರುತ, 50ಕ್ಕೂ ಹೆಚ್ಚು ಮಂದಿಯ ಪ್ರಾಣ ಕಸಿದುಕೊಂಡಿದ್ದು, ಅನೇಕರು ನಾಪತ್ತೆಯಾಗಿರುವ ಹಿನ್ನೆಲೆ ಭಾರತದಲ್ಲೂ ಮುನ್ನೆಚ್ಚರಿಕಾ ಕ್ರಮಗಳು ತೀವ್ರಗೊಳ್ಳಿವೆ.

ವಿಪತ್ತು ನಿರ್ವಹಣಾ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ಪ್ರಖರ್ ಜೈನ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಚಂಡಮಾರುತವು ಪ್ರಸ್ತುತ ಪುದುಚೇರಿಯಿಂದ ಸುಮಾರು 410 ಕಿ.ಮೀ ಮತ್ತು ಚೆನ್ನೈನಿಂದ ಸುಮಾರು 510 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿದ್ದು, ಸುಮಾರು 3 ಕಿ.ಮೀ ವೇಗದಲ್ಲಿ ಮುಂದೆ ಸಾಗುತ್ತಿದೆ. ದಿತ್ವಾ ಚಂಡಮಾರುತ, ನಾಳೆ ಮುಂಜಾನೆ ವೇಳೆಗೆ ತಮಿಳುನಾಡು, ಪುದುಚೇರಿ ಹಾಗೂ ದಕ್ಷಿಣ ಕರಾವಳಿ ಆಂಧ್ರಪ್ರದೇಶ ತಲುಪುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನ. 2 ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯಬಾರದೆಂದು ಎಚ್ಚರಿಕೆ ನೀಡಲಾಗಿದೆ.

ಆಂಧ್ರಪ್ರದೇಶದ ದಕ್ಷಿಣ ಕರಾವಳಿ ಹಾಗೂ ಕೆಲ ಪ್ರದೇಶಗಳು ಈ ಚಂಡಮಾರುತದ ನೇರ ಪರಿಣಾಮವನ್ನು ಎದುರಿಸಬಹುದಾದ ಪ್ರದೇಶಗಳಾಗಿದ್ದು, ಈ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಪ್ರಕಾಶಂ, ನೆಲ್ಲೂರು, ಶ್ರೀ ಸತ್ಯಸಾಯಿ, ಕಡಪ, ಅನ್ನಮಯ್ಯ, ಚಿತ್ತೂರು ಮತ್ತು ತಿರುಪತಿ ಜಿಲ್ಲೆಗಳು ಹೆಚ್ಚಿನ ಪರಿಣಾಮಕ್ಕೆ ಒಳಗಾಗುವ ಪ್ರದೇಶಗಳೆಂದು ಸರ್ಕಾರ ಎಚ್ಚರಿಸಿದೆ. ಅಗತ್ಯ ಮುನ್ನೆಚ್ಚರಿಕೆಯ ಭಾಗವಾಗಿ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳನ್ನು ಈಗಾಗಲೇ ಸಿದ್ದಗೊಳಿಸಲಾಗಿದೆ.

ಗಾಳಿ–ಮಳೆಯ ಅಬ್ಬರಕ್ಕೆ ಮುನ್ನೆಚ್ಚರಿಕೆ

ದಕ್ಷಿಣ ಕರಾವಳಿ ಪ್ರದೇಶಗಳಲ್ಲಿ ಗಂಟೆಗೆ 50ರಿಂದ 70 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮರಗಳ ಕೆಳಗೆ ನಿಲ್ಲುವುದು, ಹಾಳಾದ ಕಟ್ಟಡಗಳ ಸುತ್ತಮುತ್ತ ಸಂಚರಿಸುವುದು, ವಿದ್ಯುತ್ ಕಂಬಗಳ ಬಳಿ ಹೋಗುವುದು ಮುಂತಾದ ಕೆಲಸಗಳಿಂದ ದೂರವಿರಲು ಸೂಚಿಸಲಾಗಿದೆ. ಕಡಲತೀರಗಳಿಗೆ ಜನರನ್ನು ಹೋಗದಂತೆ ಮುನ್ನೆಚ್ಚರಿಕೆ ಸೂಚನೆಗಳು ನೀಡಲಾಗಿದೆ.

ನಾಳೆಯ (ನ.29) ಹವಾಮಾನ ಮುನ್ಸೂಚನೆ

ಶನಿವಾರ ಚಿತ್ತೂರು ಮತ್ತು ತಿರುಪತಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಂಭವ ಹೆಚ್ಚಿದೆ. ಪ್ರಕಾಶಂ, ನೆಲ್ಲೂರು, ಕಡಪ ಮತ್ತು ಅನ್ನಮಯ್ಯ ಜಿಲ್ಲೆಗಳಲ್ಲಿಯೂ ಮಳೆ ತೀವ್ರವಾಗುವ ನಿರೀಕ್ಷೆ ಇದೆ. ಬಾಪಟ್ಟಾ, ಪಲ್ನಾಡು, ಕರ್ನೂಲ್, ನಂದ್ಯಾಲ್, ಅನಂತಪುರ ಹಾಗೂ ಶ್ರೀ ಸತ್ಯಸಾಯಿ ಜಿಲ್ಲೆಗಳಲ್ಲಿ ಹಗುರ ಮಳೆಯಾಗಬಹುದು.

ಭಾನುವಾರದ (ನ.30) ಹವಾಮಾನ ಮುನ್ಸೂಚನೆ

ಭಾನುವಾರವು ಪ್ರಕಾಶಂ, ನೆಲ್ಲೂರು, ಕಡಪ, ಅನ್ನಮಯ್ಯ, ಚಿತ್ತೂರು ಹಾಗೂ ತಿರುಪತಿ ಜಿಲ್ಲೆಗಳಲ್ಲಿ ಮತ್ತಷ್ಟು ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕೃಷ್ಣಾ, ಗುಂಟೂರು, ಬಾಪಟ್ಟಾ, ಪಲ್ನಾಡು, ಕರ್ನೂಲ್, ನಂದ್ಯಾಲ್, ಅನಂತಪುರ ಮತ್ತು ಶ್ರೀ ಸತ್ಯಸಾಯಿ ಜಿಲ್ಲೆಗಳಲ್ಲಿ ಸಾಮಾನ್ಯದಿಂದ ಮಧ್ಯಮ ಮಟ್ಟದ ಮಳೆಯಾಗಲಿದೆ ಎಂದು ಪ್ರಾಧಿಕಾರದ ಪ್ರಖರ್ ಜೈನ್ ತಿಳಿಸಿದ್ದಾರೆ.

ಮುನ್ನೆಚ್ಚರಿಕೆಗಳು

ಕರಾವಳಿ ಪ್ರದೇಶಗಳಲ್ಲಿ ಅಲೆಗಳು ಹೆಚ್ಚಾಗುವ ಕಾರಣ ಕಡಲತೀರಗಳಿಗೆ ಹೋಗಬಾರದು. ಗಾಳಿಯ ವೇಗ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮನೆಗಳ ಮೇಲ್ಛಾವಣಿ, ಹಳೆಯ ಕಟ್ಟಡಗಳು ಮತ್ತು ಮರಗಳ ಬಳಿಗೆ ಹೋಗುವುದು ತಪ್ಪಿಸಿಕೊಳ್ಳಬೇಕು. ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಸಾಧ್ಯತೆ ಇರುವುದರಿಂದ ಟಾರ್ಚ್, ಚಾರ್ಜರ್, ಅಗತ್ಯ ಆಹಾರ ಹಾಗೂ ನೀರನ್ನು ಸಿದ್ಧವಾಗಿಡುವಂತೆ ಸಲಹೆ ನೀಡಲಾಗಿದೆ. ಕೃಷಿಕರು ಬೆಳೆಯನ್ನು ರಕ್ಷಿಸಲು ತಕ್ಷಣದ ಕ್ರಮ ಕೈಗೊಳ್ಳುವಂತೆ ಸೂಚನೆ. ಸ್ಥಳೀಯ ಆಡಳಿತ ನೀಡುವ ಸಲಹೆಗಳನ್ನು ಅಕ್ಷರಶಃ ಪಾಲಿಸಲು ವಿನಂತಿಸಲಾಗಿದೆ.

ದಿತ್ವಾ ಚಂಡಮಾರುತದ ಪ್ರಭಾವ ಮುಂದಿನ 48 ಗಂಟೆಗಳಲ್ಲಿ ಗರಿಷ್ಠ ಮಟ್ಟಕ್ಕೆ ತಲುಪುವ ಸಾಧ್ಯತೆ ಇರುವುದರಿಂದ ಕರಾವಳಿ ಹಾಗೂ ರಾಯಲಸೀಮಾ ಭಾಗಗಳಲ್ಲಿ ಜಾಗೃತಿ ಮತ್ತು ಮುನ್ನೆಚ್ಚರಿಕೆ ಅತಿ ಅವಶ್ಯಕ.

Exit mobile version