ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದ ವ್ಯಕ್ತಿಯಿಂದ ಕಿರುಕುಳ: ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

Untitled design 2025 12 21T130349.406

ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಅಪರಿಚಿತರನ್ನು ಸ್ನೇಹಿತರಾಗಿ ಪರಿಚಯ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ಈ ಪರಿಚಯದಿಂದ ಕೆಲವೊಮ್ಮೆ ಭಯಾನಕ ಕಿರುಕುಳಕ್ಕೆ ಕಾರಣವಾಗುತ್ತದೆ. ಇಂತಹದೊಂದು ಘಟನೆ ಬೆಂಗಳೂರಿನ ರಾಜಗೋಪಾಲನಗರದಲ್ಲಿ ನಡೆದಿದೆ. ಆನ್‌ಲೈನ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಅಸಭ್ಯ ವರ್ತನೆ ತೋರಿಸಿ, ದೈಹಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದು, ಇದರಿಂದ ಮನನೊಂದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.

ಘಟನೆಯ ವಿವರಗಳು

ಕಳೆದ ಕೆಲವು ದಿನಗಳ ಹಿಂದೆ ಸಂತ್ರಸ್ತ ಮಹಿಳೆಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಪಾರಿತೋಷ್ ಯಾದವ್ ಎಂಬಾತನನ್ನು ಪರಿಚಯಯ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಸ್ನೇಹ ಬೆಳೆಸಿ ಮಾತನಾಡುತ್ತಿದ್ದ ಆರೋಪಿ, “ಯಾವುದೇ ಸಹಾಯ ಬೇಕಿದ್ದರೂ ಕೇಳಿ” ಎಂದು ಆಕೆ ಬಳಿ ನಂಬಿಕೆ ಗಳಿಸಿದ್ದ. ಇದೇ ಸಮಯದಲ್ಲಿ ಸಂತ್ರಸ್ತ ಮಹಿಳೆಯ ಮಗಳಿಗೆ ಗ್ಯಾಸ್ ಸಿಲಿಂಡರ್ ಸ್ಪೋಟದಿಂದ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗೆ ಹಣದ ತೀವ್ರ ಅವಶ್ಯಕತೆ ಇತ್ತು..

ಹಣದ ಕೊರತೆಯ ಹಿನ್ನೆಲೆಯಲ್ಲಿ ಮಹಿಳೆ, ಆರೋಪಿಯಿಂದ 30 ಸಾವಿರ ರೂ. ಸಾಲ ಪಡೆದಿದ್ದು, ಸಾಧ್ಯವಾದಷ್ಟು ಬೇಗ ಹಣವನ್ನು ವಾಪಸ್ ನೀಡುವುದಾಗಿ ಭರವಸೆ ನೀಡಿದ್ದಳು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ, ಹಣದ ನೆಪವಿಟ್ಟು ಮಹಿಳೆಯ ಮೇಲೆ ದೈಹಿಕವಾಗಿ ಸಹಕರಿಸುವಂತೆ ಒತ್ತಡ ಹೇರಲು ಆರಂಭಿಸಿದ್ದಾನೆ.

ಆರೋಪಿ ದಿನನಿತ್ಯ ಅಸಭ್ಯ ಸಂದೇಶಗಳನ್ನು ಕಳುಹಿಸಿ, “ನೀನು ತುಂಬಾ ಚೆನ್ನಾಗಿದ್ದೀಯಾ”, “ಒಮ್ಮೆ ಮುಂಬೈಗೆ ಬಾ, ನಿನಗೆ ಹೊಸ ಜೀವನ ರೂಪಿಸುತ್ತೇನೆ” ಎಂದು ಕಿರುಕುಳ ನೀಡುತ್ತಿದ್ದನೆಂದು ಮಹಿಳೆ ತಿಳಿಸಿದ್ದಾಳೆ. ಅಷ್ಟೇ ಅಲ್ಲದೆ, ತಾನು ಉದ್ಯಮಿ ಎಂದು ಹೇಳಿಕೊಂಡು ಅಶ್ಲೀಲ ವಿಡಿಯೋಗಳನ್ನು ಕಳುಹಿಸಿ, ಮಹಿಳೆಯಿಂದಲೂ ಅಂತಹ ವಿಡಿಯೋಗಳನ್ನು ಕಳುಹಿಸುವಂತೆ ಬಲವಂತ ಮಾಡಿದ್ದಾನೆ ಎನ್ನಲಾಗಿದೆ.

“ನನಗೆ ಇನ್ನೂ ಮದುವೆಯಾಗಿಲ್ಲ, ದಯವಿಟ್ಟು ಸಹಕರಿಸು” ಎಂದು ಆರೋಪಿ ಅಸಭ್ಯವಾಗಿ ಮೆಸೇಜ್ ಮಾಡುತ್ತಿದ್ದನೆಂದು ದೂರಿನಲ್ಲಿ ತಿಳಿಸಲಾಗಿದೆ. ಮಹಿಳೆ ತಾನು ಮದುವೆಯಾಗಿರುವುದಾಗಿ, ಇಂತಹ ಕಿರುಕುಳ ನೀಡಬಾರದು ಎಂದು ಮನವಿ ಮಾಡಿಕೊಂಡರೂ, ಆರೋಪಿ ತನ್ನ ವರ್ತನೆ ನಿಲ್ಲಿಸಿಲ್ಲ ಎನ್ನಲಾಗಿದೆ.

ಇನ್ನೂ ಸಹಕರಿಸದಿದ್ದರೆ ಮಹಿಳೆಯ ಮೊಬೈಲ್ ನಂಬರ್ ಅನ್ನು ಪಾರ್ನ್ ವೆಬ್‌ಸೈಟ್‌ಗಳಿಗೆ ಹಾಗೂ ವೇಶ್ಯಾವಾಟಿಕೆ ಮಾಡುವವರಿಗೆ ನೀಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಮಾನಸಿಕ ಒತ್ತಡ ಮತ್ತು ಕುಟುಂಬದ ಕಲಹದಿಂದ ಮನನೊಂದ ಮಹಿಳೆ ಗಂಡನನ್ನು ತೊರೆದು ಸ್ನೇಹಿತೆಯ ಮನೆಗೆ ತೆರಳಿದ್ದು, ಅಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅದೃಷ್ಟವಶಾತ್ ಸಮಯಕ್ಕೆ ಸರಿಯಾಗಿ ಸ್ನೇಹಿತೆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಪ್ರಕರಣ ಸಂಬಂಧ ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಯ ವಿರುದ್ಧ ತನಿಖೆ ಆರಂಭಿಸಿದ್ದಾರೆ.

Exit mobile version