ಡಿಸೆಂಬರ್‌ನಲ್ಲಿ ಹಸೆಮಣೆ ಏರಬೇಕಿದ್ದ ಪ್ರೇಮಿಗಳು ದುರಂತ ಅಂತ್ಯ

Untitled design 2026 08 14T105227.222

ಡಿಸೆಂಬರ್‌ನಲ್ಲಿ ಮದುವೆಯಾಗಿ ಹೊಸ ಜೀವನ ಆರಂಭಿಸಬೇಕಿದ್ದ ಪ್ರೇಮಿಗಳಿಬ್ಬರು ಪ್ರತ್ಯೇಕ ಸ್ಥಳಗಳಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಮತ್ತು ಕೇರಳದಲ್ಲಿ ನಡೆದಿದೆ. 

ಮೃತ ಯುವತಿಯನ್ನು ಕೇರಳದ ಕಾಸರಗೋಡು ಜಿಲ್ಲೆಯ ಕಾಟುಪಳ್ಳ ಗ್ರಾಮದ ಚಂದ್ರನ್ ಅವರ ಪುತ್ರಿ ಅನುಶ್ರೀ (26) ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ಎಸ್‌ಬಿಐನಲ್ಲಿ ಉದ್ಯೋಗ ಪಡೆದಿದ್ದ ಅವರು ತರಬೇತಿ ನಿಮಿತ್ತ ಕೇರಳದ ಎರ್ನಾಕುಲಂ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದೇ ವೇಳೆ ಇರಿಟ್ಟಿ ಮೂಲದ ಎಸ್‌ಬಿಐ ಉದ್ಯೋಗಿ ಅಮಲ್ ಅವರ ಪರಿಚಯವಾಗಿ, ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದು ಪ್ರೀತಿಗೆ ತಿರುಗಿತ್ತು.

ಇಬ್ಬರ ಪ್ರೀತಿಗೆ ಕುಟುಂಬಗಳೂ ಒಪ್ಪಿಗೆ ಸೂಚಿಸಿದ್ದವು. ಹಿರಿಯರ ಸಮ್ಮುಖದಲ್ಲಿ ಮದುವೆ ನಿಶ್ಚಯವಾಗಿದ್ದು, ಡಿಸೆಂಬರ್‌ನಲ್ಲಿ ವಿವಾಹ ನೆರವೇರಿಸಲು ಸಿದ್ಧತೆಗಳು ಆರಂಭವಾಗಿದ್ದವು. ಆದರೆ, ಮದುವೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಈ ಸಂತಸದ ಕಥೆ ದುರಂತ ಅಂತ್ಯ ಕಂಡಿದೆ.

ಅನುಶ್ರೀ ಅವರು ಉದ್ಯೋಗದ ಕಾರಣ ಮೈಸೂರು ಜಿಲ್ಲೆಯ ಹುಣಸೂರು ನಗರದ ಸುಬ್ಬಣ್ಣ ಬಡಾವಣೆಯ ಮನೆಯಲ್ಲಿ ವಾಸವಾಗಿದ್ದರು. ಆತ್ಮಹತ್ಯೆಗೆ ಮುನ್ನ ತಂದೆ, ತಾಯಿ ಹಾಗೂ ಸಹೋದರಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು ಎನ್ನಲಾಗಿದೆ. ಬಳಿಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಘಟನೆಗೆ ಮುನ್ನ ಅನುಶ್ರೀ ಹಾಗೂ ಅಮಲ್ ನಡುವೆ ಮೊಬೈಲ್ ಫೋನ್‌ನಲ್ಲಿ ಮಾತಿನ ಚಕಮಕಿ ನಡೆದಿತ್ತು. ಈ ಜಗಳದಿಂದ ಮನನೊಂದ ಅನುಶ್ರೀ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ, ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಇತ್ತ ಅನುಶ್ರೀ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅಮಲ್ ತೀವ್ರ ಆಘಾತಕ್ಕೊಳಗಾಗಿದ್ದರು. ಬಳಿಕ ಕೇರಳದ ಇರಿಟ್ಟಿ ಪಟ್ಟಣದ ಲಾಡ್ಜ್ ಒಂದರಲ್ಲಿ ಕೊಠಡಿ ಪಡೆದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಹೊರಬಂದಿದೆ. ಕೆಲವೇ ಗಂಟೆಗಳ ಅಂತರದಲ್ಲಿ ಪ್ರೇಮಿಗಳಿಬ್ಬರೂ ಸಾವನ್ನಪ್ಪಿರುವುದು ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ಕಂಬನಿ ಮಿಡಿಯುವಂತೆ ಮಾಡಿದೆ.

ಈ ಸಂಬಂಧ ಮೈಸೂರು ಜಿಲ್ಲೆಯ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೇರಳ ಪೊಲೀಸರು ಸಹ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಇಬ್ಬರ ಮೊಬೈಲ್ ಕರೆ ವಿವರಗಳು, ಸಂದೇಶಗಳು ಹಾಗೂ ಘಟನೆಗೆ ಕಾರಣವಾದ ಸಂದರ್ಭಗಳ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Exit mobile version