ಕರ್ನಾಟಕ ವಿಧಾನಸಭೆಯ ನೂತನ ಅಧ್ಯಕ್ಷರಾಗಿ ರೋಣ ಕ್ಷೇತ್ರದ ಹಿರಿಯ ಶಾಸಕ ಗುರುಪಾದಗೌಡ ಸಂಗನಗೌಡ ಪಾಟೀಲ್ (ಜಿ.ಎಸ್. ಪಾಟೀಲ್) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿಧಾನಸಭಾ ಅಧಿವೇಶನದ ಎರಡನೇ ದಿನವಾದ ಶುಕ್ರವಾರ ನಡೆದ ಚುನಾವಣೆಯಲ್ಲಿ ಏಕೈಕ ಅಭ್ಯರ್ಥಿಯಾಗಿದ್ದ ಅವರು ಸರ್ವಾನುಮತದಿಂದ ಸ್ಪೀಕರ್ ಹುದ್ದೆ ಅಲಂಕರಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಿ.ಎಸ್. ಪಾಟೀಲ್ ಅವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತಾಪಿಸಿದರು. ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅನುಮೋದನೆ ನೀಡಿದರು. ಸ್ಪೀಕರ್ ಸ್ಥಾನಕ್ಕೆ ಬೇರೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಹಂಗಾಮಿ ಸ್ಪೀಕರ್ ಟಿ.ಬಿ. ಜಯಚಂದ್ರ ಅವರು ಜಿ.ಎಸ್. ಪಾಟೀಲ್ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.
ಆಯ್ಕೆ ಘೋಷಣೆಯ ಬಳಿಕ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಜಿ.ಎಸ್. ಪಾಟೀಲ್ ಅವರನ್ನು ಸ್ಪೀಕರ್ ಪೀಠದವರೆಗೆ ಕರೆತಂದು ಅಭಿನಂದಿಸಿದರು. ಸದನದ ಸದಸ್ಯರು ಮೇಜು ತಟ್ಟಿ ನೂತನ ಅಧ್ಯಕ್ಷರಿಗೆ ಶುಭಾಶಯ ಕೋರಿದರು.
ನಾಲ್ಕು ಬಾರಿ ಶಾಸಕರಾಗಿ ಜನಸೇವೆ
1948ರ ಏಪ್ರಿಲ್ 10ರಂದು ಜನಿಸಿದ ಗುರುಪಾದಗೌಡ ಸಂಗನಗೌಡ ಪಾಟೀಲ್ ಅವರು ತಂದೆ ಸಂಗನಗೌಡ ಹಾಗೂ ತಾಯಿ ಬಸಮ್ಮ ಅವರ ಪುತ್ರ. ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದ ಅವರು, 1983ರಲ್ಲಿ ರೋಣ ಪಟ್ಟಣ ಪಂಚಾಯತ್ ಹಾಗೂ ಎಪಿಎಂಸಿ ಸದಸ್ಯರಾಗಿ ಸಾರ್ವಜನಿಕ ಬದುಕು ಆರಂಭಿಸಿದರು.
1989ರಲ್ಲಿ ಮೊದಲ ಬಾರಿಗೆ ರೋಣ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಅವರು, ನಂತರ ಒಟ್ಟು ನಾಲ್ಕು ಬಾರಿ ಶಾಸಕರಾಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ವಿರೇಂದ್ರ ಪಾಟೀಲ್, ಎಸ್. ಬಂಗಾರಪ್ಪ ಹಾಗೂ ವೀರಪ್ಪ ಮೊಯ್ಲಿ ಅವರ ಮುಖ್ಯಮಂತ್ರಿತ್ವದ ಅವಧಿಯಲ್ಲಿ ರೋಣ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ಜಿ.ಎಸ್. ಪಾಟೀಲ್ ಅವರ ರಾಜಕೀಯ ಜೀವನದಲ್ಲಿ ಗ್ರಾಮೀಣ ಅಭಿವೃದ್ಧಿಗೆ ವಿಶೇಷ ಸ್ಥಾನವಿದೆ. ಶೈಕ್ಷಣಿಕವಾಗಿ ಹಿಂದುಳಿದ ರೋಣ ಭಾಗದಲ್ಲಿ ರಾಜೀವ್ ಗಾಂಧಿ ಎಜುಕೇಷನ್ ಸೊಸೈಟಿ ಸ್ಥಾಪಿಸಿ ಬಿ.ಎ.ಎಂ.ಎಸ್., ಬಿ.ಪಿ.ಎಡ್., ಐಟಿಐ ಹಾಗೂ ಪದವಿ ಕಾಲೇಜುಗಳನ್ನು ಆರಂಭಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸಿದರು.
1999ರ ಚುನಾವಣೆಯಲ್ಲಿ ಸುಮಾರು 29 ಸಾವಿರ ಮತಗಳ ಅಂತರದಿಂದ ಜಯಗಳಿಸಿದ ಅವರು, ಮಲಪ್ರಭಾ ನದಿಯ ಚೋಳಚಗುಡ್ಡ ಬ್ಯಾರೇಜ್ ಯೋಜನೆಯ ಮೂಲಕ ರೋಣ ಪಟ್ಟಣಕ್ಕೆ ಮೊದಲ ಬಾರಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಚಾಲನೆ ನೀಡಿದರು. ಜೊತೆಗೆ ನೀರಾವರಿ ಯೋಜನೆಗಳ ವಿಸ್ತರಣೆಗೂ ಶ್ರಮಿಸಿದರು.
ಮೇಲ್ಮಠ, ತಳ್ಳಿಹಾಳ, ಮಾಡಲಗೇರಿ, ಚಿಕ್ಕಅಳಗುಂಡಿ ಹಾಗೂ ಬಾಸಲಾಪುರ ಸೇರಿದಂತೆ ಹಲವು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಿ ಮೊದಲ ಬಾರಿಗೆ ಬಸ್ ಸಂಚಾರ ಆರಂಭಿಸಿದ ಸಾಧನೆ ಅವರದ್ದು. ರೋಣ, ಗಜೇಂದ್ರಗಡ ಮತ್ತು ನರೇಗಲ್ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವ ಜೊತೆಗೆ ಹಿರೇಹಾಳ, ಶಾಂತಗಿರಿ, ನರೇಗಲ್ ಹಾಗೂ ನಿಡಗುಂದಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕೆ ಮುನ್ನಡೆ ನೀಡಿದರು.
ಸುದೀರ್ಘ ರಾಜಕೀಯ ಅನುಭವ, ಸಂಘಟನಾ ಸಾಮರ್ಥ್ಯ ಮತ್ತು ಜನಪರ ಆಡಳಿತದ ಹಿನ್ನೆಲೆಯೊಂದಿಗೆ ಜಿ.ಎಸ್. ಪಾಟೀಲ್ ಅವರು ಈಗ ವಿಧಾನಸಭಾಧ್ಯಕ್ಷರಾಗಿ ಸದನದ ಕಾರ್ಯನಿರ್ವಹಣೆಯನ್ನು ನಿಷ್ಪಕ್ಷಪಾತವಾಗಿ ಮುನ್ನಡೆಸುವ ಮಹತ್ವದ ಜವಾಬ್ದಾರಿ ಹೊತ್ತಿದ್ದಾರೆ.
