ಸಚಿವ ಸಂಪುಟ ವಿಸ್ತರಣೆಯ ಕುರಿತ ಊಹಾಪೋಹಗಳ ನಡುವೆಯೇ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದು, ಹೈಕಮಾಂಡ್ ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ತಾವು ಸಂಪೂರ್ಣ ಬದ್ಧರಾಗಿರುವುದಾಗಿ ಹೇಳಿದ್ದಾರೆ. ಸಚಿವ ಸ್ಥಾನ ಸಿಗದಿದ್ದರೂ ಯಾವುದೇ ಬೇಸರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಚಿವ ಸ್ಥಾನಕ್ಕಾಗಿ ಎಂದಿಗೂ ಬಹಿರಂಗವಾಗಿ ಬೇಡಿಕೆ ಇಟ್ಟಿಲ್ಲ ಎಂದು ಹೇಳಿದ ಜಮೀರ್ ಅಹ್ಮದ್, ಅಭಿಮಾನಿಗಳು ತಮ್ಮ ನಾಯಕರಿಗೆ ಸಚಿವ ಸ್ಥಾನ ಸಿಗಬೇಕು ಎಂದು ಒತ್ತಾಯಿಸುವುದು ಸಹಜ. ತಮ್ಮ ಬೆಂಬಲಿಗರು ನಡೆಸುತ್ತಿರುವ ಪ್ರತಿಭಟನೆಗಳು ಅವರ ಅಭಿಮಾನ ಮತ್ತು ನಿರೀಕ್ಷೆಯ ಪ್ರತೀಕವಾಗಿದ್ದು, ಅದರಲ್ಲಿ ಯಾವುದೇ ಅಸಹಜತೆ ಇಲ್ಲ ಎಂದು ಅವರು ಹೇಳಿದರು. “ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ಅವಕಾಶ ಸಿಗಲಿಲ್ಲ. ಎರಡನೇ ಪಟ್ಟಿಯಲ್ಲಿ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇದೆ. ಆದರೂ ಸಚಿವ ಸ್ಥಾನ ಸಿಗದಿದ್ದರೆ ನನಗೆ ಯಾವುದೇ ಬೇಸರವಿಲ್ಲ. ನನ್ನ ಮುಖದಲ್ಲಿ ಬೇಸರ ಕಾಣಿಸುತ್ತಿದೆಯೇ?” ಎಂದು ಜಮೀರ್ ಪ್ರಶ್ನಿಸಿದರು.
ಡಿ.ಕೆ. ಸುರೇಶ್ ಅವರನ್ನು ಭೇಟಿ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಮೀರ್ ಅಹ್ಮದ್, ಆ ಭೇಟಿಗೆ ಯಾವುದೇ ರಾಜಕೀಯ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಹೇಳಿದರು. ಡಿ.ಕೆ. ಸುರೇಶ್ ಅವರನ್ನು ಭೇಟಿ ಮಾಡುವುದು ಹೊಸದೇನಲ್ಲ. ಹಲವು ವರ್ಷಗಳಿಂದ ನಮ್ಮ ನಡುವೆ ಉತ್ತಮ ಸ್ನೇಹವಿದೆ. ನಾವು ತಿಂಗಳಿಗೆ ನಾಲ್ಕು ಬಾರಿ ಭೇಟಿಯಾಗುತ್ತೇವೆ. ನಾನು ಬೆಂಗಳೂರಿನ ಕ್ವಾರ್ಟರ್ಸ್‌ನಲ್ಲಿ ಇದ್ದಾಗ ಅವರು ಬಂದು ಭೇಟಿಯಾಗುತ್ತಾರೆ. ಅವರು ಮನೆಯಲ್ಲಿದ್ದರೆ ನಾನು ಹೋಗಿ ಭೇಟಿಯಾಗುತ್ತೇನೆ. ಈ ಬಾರಿಯೂ ಅಷ್ಟೇ, ಯಾವುದೇ ವಿಶೇಷ ಚರ್ಚೆ ನಡೆದಿಲ್ಲ. ನಾವು ಸ್ನೇಹಿತರಾಗಿ ಭೇಟಿ ಮಾಡಿಕೊಂಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ನಿರ್ಧಾರಗಳನ್ನೂ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಪಕ್ಷದ ನಾಯಕತ್ವದ ತೀರ್ಮಾನವೇ ಅಂತಿಮವಾಗಿದ್ದು, ಅದನ್ನು ಗೌರವಿಸುವುದು ತಮ್ಮ ಕರ್ತವ್ಯ. ಪಕ್ಷದ ಕಾರ್ಯಕರ್ತನಾಗಿ ಕೇರಳ ಮತ್ತು ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲೂ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದೇನೆ ಎಂದು ತಿಳಿಸಿದರು.
ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದು, ಸಭೆಯಲ್ಲಿ ಸುಮಾರು 140 ಮಂದಿ ಶಾಸಕರು ಹಾಜರಿದ್ದು, ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯ ಗೆಲುವಿಗೆ 28 ಮತಗಳ ಅಗತ್ಯವಿದ್ದು, ಕಾಂಗ್ರೆಸ್ ಬಳಿ ಅಗತ್ಯಕ್ಕಿಂತಲೂ ಹೆಚ್ಚು ಸಂಖ್ಯಾಬಲವಿದೆ. “ಪ್ರತಿ ಅಭ್ಯರ್ಥಿಗೆ 28 ಶಾಸಕರು ಮತ ಹಾಕಿದರೂ ನಾವು ಸುಲಭವಾಗಿ ಗೆಲ್ಲುತ್ತೇವೆ. ಪಕ್ಷದ ಶಾಸಕರು ಸಂಪೂರ್ಣವಾಗಿ ಒಗ್ಗಟ್ಟಾಗಿದ್ದು, ಯಾವುದೇ ಆತಂಕ ಇಲ್ಲ ಎಂದರು. ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಜೆಡಿಎಸ್ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಜಮೀರ್ ಅಹಮದ್, ಅಂತಹ ಯಾವುದೇ ಅಗತ್ಯ ಕಾಂಗ್ರೆಸ್‌ಗೆ ಇಲ್ಲ ಎಂದು ಸ್ಪಷ್ಟಪಡಿಸಿದರು.
