ಆರ್‌ಎಸ್‌ಎಸ್‌ಗೆ ಲೆಕ್ಕ ಕೇಳುವಷ್ಟು ಪ್ರಿಯಾಂಕ್ ಖರ್ಗೆ ದೊಡ್ಡವರೇ?: ಈಶ್ವರಪ್ಪ

Untitled design 2026 06 17T164329.604

ಆರ್‌ಎಸ್‌ಎಸ್ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗಳಿಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್‌ನ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಶ್ನಿಸುವ ಅಧಿಕಾರ ಪ್ರಿಯಾಂಕ್ ಖರ್ಗೆಗೆ ಯಾರು ನೀಡಿದ್ದಾರೆ ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರದ ಕೆಲ ಸಚಿವರು ಸಂವಿಧಾನಾತ್ಮಕ ಜವಾಬ್ದಾರಿಯೊಂದಿಗೆ ನಡೆದುಕೊಳ್ಳುವ ಬದಲು ಪ್ರಚಾರಕ್ಕಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದ ಈಶ್ವರಪ್ಪ, ಆರ್‌ಎಸ್‌ಎಸ್ ವಿರುದ್ಧ ಮಾತನಾಡುವುದರಿಂದ ಪ್ರಚಾರ ಸಿಗುತ್ತದೆ ಎಂಬ ಭಾವನೆಯಿಂದ ಇಂತಹ ಹೇಳಿಕೆಗಳು ಬರುತ್ತಿವೆ ಎಂದು ಆರೋಪಿಸಿದರು. ಪ್ರಿಯಾಂಕ್ ಖರ್ಗೆ ಅವರಿಗೆ ಆರ್‌ಎಸ್‌ಎಸ್‌ನ ಲೆಕ್ಕ ಕೇಳುವ ಅಧಿಕಾರವನ್ನು ಯಾರು ಕೊಟ್ಟಿದ್ದಾರೆ? ಅವರು ಮಂತ್ರಿಯಾಗಿರುವ ಕಾರಣದಿಂದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಅವಕಾಶವಿದೆ. ತಾಕತ್ತು ಇದ್ದರೆ ಕಾನೂನಿನ ಚೌಕಟ್ಟಿನೊಳಗೆ ಕ್ರಮ ತೆಗೆದುಕೊಳ್ಳಲಿ. ಆದರೆ, ಕೇವಲ ಪ್ರಚಾರಕ್ಕಾಗಿ ಆರೋಪಗಳನ್ನು ಮಾಡುವುದು ಸರಿಯಲ್ಲ. ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂಬ ಅರಿವು ಇರುವುದರಿಂದಲೇ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ಆರ್‌ಎಸ್‌ಎಸ್ ವಿರುದ್ಧ ಮಾತನಾಡಿದ ಅನೇಕರು ರಾಜಕೀಯವಾಗಿ ಹಿನ್ನಡೆ ಅನುಭವಿಸಿದ್ದಾರೆ ಎಂದು ಹೇಳಿದ ಅವರು, ಪ್ರಿಯಾಂಕ್ ಖರ್ಗೆಯವರಿಗೂ ಅದೇ ಪರಿಸ್ಥಿತಿ ಎದುರಾಗಬಹುದು ಎಂದು ಎಚ್ಚರಿಕೆ ನೀಡಿದರು. “ನೀವು ಆರ್‌ಎಸ್‌ಎಸ್‌ಗೆ ಏನು ಕೊಟ್ಟಿದ್ದೀರಿ? ಅದರ ಲೆಕ್ಕ ಕೇಳಲು ನಿಮಗೆ ಯಾವ ಅಧಿಕಾರವಿದೆ?” ಎಂದು ಪ್ರಶ್ನಿಸಿದರು.

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಈ ವಿಚಾರಕ್ಕೆ ಈಗಾಗಲೇ ಉತ್ತರ ನೀಡಿದ್ದಾರೆ ಎಂದು ಹೇಳಿದ ಈಶ್ವರಪ್ಪ, ರಾಜ್ಯದಲ್ಲಿ ಸಾವಿರಾರು ಕಡೆಗಳಲ್ಲಿ ಆರ್‌ಎಸ್‌ಎಸ್ ಪಥಸಂಚಲನಗಳು ನಡೆದಿದ್ದರೂ ಎಲ್ಲಿಯೂ ಅಹಿತಕರ ಘಟನೆಗಳು ನಡೆದಿಲ್ಲ.  ಮತ್ತೊಂದೆಡೆ, ರಾಜ್ಯಸಭೆಯಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ಪ್ರಕರಣದ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.

ಮೋಹನ್ ಭಾಗವತ್ ಅವರಿಗೆ ಕೇಂದ್ರ ಸರ್ಕಾರ ಝೆಡ್ ಪ್ಲಸ್ ಭದ್ರತೆಯನ್ನು ನೀಡಿರುವುದನ್ನು ಉಲ್ಲೇಖಿಸಿದ ಅವರು, ದೇಶದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ಅವರ ಭದ್ರತೆಗೆ ವಿಶೇಷ ಮಹತ್ವ ನೀಡಲಾಗಿದೆ ಎಂದರು.

ಪ್ರಿಯಾಂಕ್ ಖರ್ಗೆ ನಿರಂತರವಾಗಿ ವಿವಾದಾತ್ಮಕ ಹೇಳಿಕೆಗಳ ಮೂಲಕ ಪ್ರಚಾರ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಈಶ್ವರಪ್ಪ, ಆರ್‌ಎಸ್‌ಎಸ್ ಕುರಿತು ಮಾತನಾಡುವುದರ ಮೂಲಕ ದೊಡ್ಡ ನಾಯಕನಾಗಿ ಬೆಳೆಯಲು ಸಾಧ್ಯವಿಲ್ಲ. ಇಂತಹ ಹೇಳಿಕೆಗಳಿಗೆ ಅತಿಯಾದ ಮಹತ್ವ ನೀಡಬಾರದು ಎಂದು ಸಲಹೆ ನೀಡಿದ ಅವರು, ಸಂಘಟನೆ ಕುರಿತು ಹಗುರವಾಗಿ ಮಾತನಾಡುತ್ತಿರುವುದು ತಮ್ಮಲ್ಲಿ ನೋವು ಉಂಟುಮಾಡಿದೆ ಎಂದು ಹೇಳಿದರು. ಆರ್‌ಎಸ್‌ಎಸ್ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗಳ ವಿರುದ್ಧ ಕೆ.ಎಸ್. ಈಶ್ವರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜಕೀಯ ಪ್ರಚಾರಕ್ಕಾಗಿ ಸಂಘಟನೆಯನ್ನು ಗುರಿಯಾಗಿಸಬಾರದು ಎಂದು ಆಗ್ರಹಿಸಿದರು.

Exit mobile version