ಆತ್ಮ*ಹತ್ಯೆಗೆ ಶರಣಾದ ಕಾನ್ಫಿಡೆಂಟ್ ಗ್ರೂಪ್ ಸ್ಥಾಪಕ ಸಿಜೆ ರಾಯ್ ಯಾರು ? ಹಿನ್ನೆಲೆ ಏನು ?

Untitled design 2026 01 30T182922.422

ಬೆಂಗಳೂರು: ದಕ್ಷಿಣ ಭಾರತದ ರಿಯಲ್ ಎಸ್ಟೇಟ್ ಸಾಮ್ರಾಜ್ಯದ ಅಧಿಪತಿಯಾಗಿರುವ ಕಾನ್ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಡಾ. ಸಿ.ಜೆ. ರಾಯ್ (ರಾಯ್ ಚಿರಿಯಾಂಕಂದತ್ ಜೋಸೆಫ್) ಅವರ ಹಠಾತ್ ಸಾವು ಉದ್ಯಮ ವಲಯವನ್ನು ದಿಗ್ಭ್ರಮೆಗೊಳಿಸಿದೆ. ಬೆಂಗಳೂರಿನ ರಿಚ್‌ಮಂಡ್ ಸರ್ಕಲ್ ಬಳಿಯಿರುವ ತಮ್ಮ ಕಚೇರಿಯಲ್ಲಿ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವೈಯಕ್ತಿಕ ಮಾಹಿತಿ:

ಮೂಲತಃ ಕೇರಳದವರಾದರೂ ಡಾ. ಸಿ.ಜೆ. ರಾಯ್ ಜನಿಸಿ ಬೆಳೆದದ್ದು ಬೆಂಗಳೂರಿನಲ್ಲಿ. ಶಿಕ್ಷಣದ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಅವರು, ಸ್ವಿಟ್ಜರ್ಲ್ಯಾಂಡ್‌ನ ಜ್ಯೂರಿಚ್‌ನ ಎಸ್‌ಬಿಎಸ್ ಬಿಸಿನೆಸ್ ಸ್ಕೂಲ್‌ನಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದರು. ಫ್ರಾನ್ಸ್ ಸೇರಿದಂತೆ ವಿದೇಶಗಳಲ್ಲಿ ಉನ್ನತ ಶಿಕ್ಷಣ ಪೂರೈಸಿದ್ದ ಅವರು ಜಾಗತಿಕ ಮಟ್ಟದ ಉದ್ಯಮದ ಜ್ಞಾನ ಹೊಂದಿದ್ದರು.

ಹೆವ್ಲೆಟ್-ಪ್ಯಾಕರ್ಡ್ (HP) ನಂತಹ ಫಾರ್ಚೂನ್ 500 ಕಂಪನಿಗಳಲ್ಲಿ ಅನುಭವ ಪಡೆದ ನಂತರ, ರಾಯ್ 2006 ರಲ್ಲಿ ‘ಕಾನ್ಫಿಡೆಂಟ್ ಗ್ರೂಪ್’ ಸ್ಥಾಪಿಸಿದರು. ಕೇವಲ ಎರಡು ದಶಕಗಳಲ್ಲಿ ಬೆಂಗಳೂರು, ಕೇರಳ ಮತ್ತು ದುಬೈ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಕಂಪನಿಯನ್ನು ವಿಸ್ತರಿಸಿದರು. ರಿಯಲ್ ಎಸ್ಟೇಟ್ ಮಾತ್ರವಲ್ಲದೆ ಹಾಸ್ಪಿಟಾಲಿಟಿ, ಶಿಕ್ಷಣ, ಮನರಂಜನೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಅವರ ಕಂಪನಿ 159 ಕ್ಕೂ ಹೆಚ್ಚು ಬೃಹತ್ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅವರ ಈ ಸಾಧನೆಗಾಗಿ 2018 ರಲ್ಲಿ ಫೋರ್ಬ್ಸ್ ಮಿಡಲ್ ಈಸ್ಟ್ ಪಟ್ಟಿಯಲ್ಲಿ 14ನೇ ಸ್ಥಾನ ಪಡೆದಿದ್ದರು.

ಸಿ.ಜೆ. ರಾಯ್ ಬರಿ ಉದ್ಯಮಿಯಾಗಿರಲಿಲ್ಲ. ಮಲಯಾಳಂ ಚಿತ್ರರಂಗದ ಖ್ಯಾತ ನಿರ್ಮಾಪಕರಾಗಿ ಮರಕ್ಕಾರ್: ಲಯನ್ ಆಫ್ ದಿ ಅರೇಬಿಯನ್ ಸೀ ನಂತಹ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರಗಳನ್ನು ನಿರ್ಮಿಸಿದ್ದರು. ಜೊತೆಗೆ ಕರ್ನಾಟಕ ಮತ್ತು ಕೇರಳ ರಾಜ್ಯಗಳಿಗೆ ಸ್ಲೋವಾಕ್ ರಿಪಬ್ಲಿಕ್‌ನ ಗೌರವಾನ್ವಿತ ಕಾನ್ಸಲ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಸಾಮಾಜಿಕ ಕಳಕಳಿ ಹೊಂದಿದ್ದ ಅವರು ಬಡವರಿಗೆ ಉಚಿತ ಹೃದಯ ಶಸ್ತ್ರಚಿಕಿತ್ಸೆ, ಸ್ಕಾಲರ್‌ಶಿಪ್ ಮತ್ತು ಮನೆ ನಿರ್ಮಿಸಿಕೊಡುವಂತಹ ಪರೋಪಕಾರಿ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿದ್ದರು.

ಕಳೆದ ಕೆಲವು ದಿನಗಳಿಂದ ಡಾ. ಸಿ.ಜೆ. ರಾಯ್ ಅವರ ಕಚೇರಿ ಮತ್ತು ನಿವಾಸದ ಮೇಲೆ ಆದಾಯ ತೆರಿಗೆ (IT) ಅಥವಾ ಜಾರಿ ನಿರ್ದೇಶನಾಲಯ (ED) ದಾಳಿಗಳು ನಡೆಯುತ್ತಿದ್ದವು ಎನ್ನಲಾಗಿದೆ. ಇಂದು (ಜನವರಿ 30, 2026) ಅಧಿಕಾರಿಗಳ ತನಿಖೆಯ ಒತ್ತಡದ ನಡುವೆಯೇ ಅವರು ತಮ್ಮ ಕಚೇರಿಯಲ್ಲೇ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ. ನೂರಾರು ಕುಟುಂಬಗಳಿಗೆ ಆಸರೆಯಾಗಿದ್ದ, ರಿಯಲ್ ಎಸ್ಟೇಟ್ನ ಉದ್ಯಮಿಯಾಗಿದ್ದ ವ್ಯಕ್ತಿಯೊಬ್ಬರು ಈ ರೀತಿ ಆತ್ಮಹತ್ಯೆ ಮಾಡಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

Exit mobile version