ಕಾನ್ಫಿಡೆಂಟ್ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣ ಉದ್ಯಮ ವಲಯದಲ್ಲಿ ಆಘಾತ ಮೂಡಿಸಿದೆ. ಶುಕ್ರವಾರ (ಜನವರಿ 30, 2026) ತಮ್ಮ ಲ್ಯಾಂಗ್‌ಫೋರ್ಡ್ ರಸ್ತೆಯ ಕಚೇರಿಯಲ್ಲಿ ಐಟಿ ದಾಳಿ ನಡೆಯುತ್ತಿದ್ದಂತೆಯೇ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯ ಬೆನ್ನಲ್ಲೇ ತನಿಖೆಯಲ್ಲಿ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ.
ಅಶೋಕನಗರ ಪೊಲೀಸರು 12ಕ್ಕೂ ಹೆಚ್ಚು ಮಂದಿ ಸ್ನೇಹಿತರು, ಸಿಬ್ಬಂದಿ ಮತ್ತು ಆಪ್ತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ರಾಯ್ ಅವರು ಕಳೆದ 15 ದಿನಗಳಿಂದ ಡಿಪ್ರೆಷನ್‌ನಲ್ಲಿದ್ದರು ಎಂಬ ಮಾಹಿತಿ ಸ್ನೇಹಿತರಿಂದ ಬಹಿರಂಗವಾಗಿದೆ. ಆದರೆ ಡಿಪ್ರೆಷನ್‌ಗೆ ನಿಖರ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಸ್ನೇಹಿತರ ಪ್ರಕಾರ, ರಾಯ್ ಅವರು ಪದೇ ಪದೇ ಐಟಿ ಅಧಿಕಾರಿಗಳ ಹೆಸರು ಉಲ್ಲೇಖಿಸಿ ತಮ್ಮ ಬಳಿ ಹೇಳಿಕೊಂಡಿದ್ದರು. ಐಟಿ ದಾಳಿಯಿಂದ ಮತ್ತಷ್ಟು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಹೇಳಲಾಗಿದೆ. ಐಟಿ ಅಧಿಕಾರಿಗಳು ತನಿಖೆಯ ವೇಳೆ “ನಮಗೆ ರಾಯ್ ಸಾವಿನ ಬಗ್ಗೆ ಗೊತ್ತಿರಲಿಲ್ಲ, ನಮ್ಮ ಪಾಡಿಗೆ ದಾಖಲೆಗಳ ಪರಿಶೀಲನೆ ಮುಂದುವರೆಸಿದ್ದೇವೆ” ಎಂದು ಹೇಳಿದ್ದಾರೆ. ದಾಳಿ ನಡೆಯುತ್ತಿದ್ದಾಗಲೇ ರಾಯ್ ಅವರು ಕೋಣೆಯೊಳಗೆ ಲಾಕ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಕುಟುಂಬಸ್ಥರು “ಮುಂಚೆಯೂ ಐಟಿ ರೇಡ್ ಆಗಿದ್ದರೂ ಈ ಮಟ್ಟಿಗೆ ಏನೂ ಇರಲಿಲ್ಲ. ಯಾವ ವಿಚಾರಕ್ಕೆ ಇಷ್ಟು ತಲೆಕೆಡಿಸಿಕೊಂಡಿದ್ದರು ಗೊತ್ತಿಲ್ಲ. ಸ್ನೇಹಿತರ ಬಳಿ ಹೇಳಿಕೊಂಡಿರಬಹುದು” ಎಂದು ಹೇಳಿದ್ದಾರೆ. ಕುಟುಂಬದ ಬಗ್ಗೆ ಸಾಮಾನ್ಯವಾಗಿಯೇ ಇದ್ದರು ಎಂದು ಸ್ನೇಹಿತರು ತಿಳಿಸಿದ್ದಾರೆ.
ಪೊಲೀಸರು ಸದ್ಯ ಎಲ್ಲಾ ಆಯಾಮಗಳನ್ನು ಪರಿಶೀಲಿಸುತ್ತಿದ್ದಾರೆ. ಐಟಿ ತಂಡದ ವಿಚಾರಣೆಯೂ ನಡೆದಿದೆ. ಈ ಪ್ರಕರಣದ ರಹಸ್ಯವನ್ನು ಕೆದೆಯುವಲ್ಲಿ ಪೊಲೀಸ್ ತಂಡ ಸಕ್ರಿಯವಾಗಿದೆ. ಉದ್ಯಮಿ ಸಿ.ಜೆ. ರಾಯ್ ಅವರ ಸಾವು ಐಟಿ ದಾಳಿ ಮತ್ತು ಮಾನಸಿಕ ಒತ್ತಡದ ನಡುವಿನ ಸಂಬಂಧವನ್ನು ಪ್ರಶ್ನಿಸುತ್ತಿದೆ. ಈ ಘಟನೆ ಉದ್ಯಮಿಗಳ ಮಾನಸಿಕ ಆರೋಗ್ಯ ಮತ್ತು ಒತ್ತಡದ ಬಗ್ಗೆ ಚರ್ಚೆ ಕಾರಣವಾಗಿದೆ.
